ಮುಂಬೈ: ಕೋವಿಡ್ ಸೋಂಕು ಪ್ರಸರಣ ತಡೆಯಲು ಸದ್ಯ ಜಾರಿ ಮಾಡಿರುವ ಲಾಕ್ ಡೌನ್ ಅನ್ನು ಮಹಾರಾಷ್ಟ್ರ ಸರ್ಕಾರ ಮತ್ತೆ ಮುಂದುವರಿಸಿದೆ. ಜೂನ್ 15ರವರೆಗೆ ಲಾಕ್ ಡೌನ್ ವಿಸ್ತರಿಸಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ.
ರವಿವಾರ ಈ ಆದೇಶ ಹೊರಡಿಸಿದ್ದು, ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಕೆಲವು ಜಿಲ್ಲೆಗಳಲ್ಲಿ ನಿಯಗಳನ್ನು ಸಡಿಲಗೊಳಿಸುವುದಾಗಿ ಸಿಎಂ ಠಾಕ್ರೆ ಹೇಳಿದ್ದಾರೆ.
ಲಾಕ್ ಡೌನ್ ತೆರವುಗೊಳಿಸುವಂತೆ ತುಂಬಾ ಮಂದಿ ಒತ್ತಾಯಿಸುತ್ತಿದ್ದಾರೆ. ಆದರೆ ಎಲ್ಲರೂ ತಾಳ್ಮೆಯಿಂದ ಇರಬೇಕಿದೆ. ನಾವು ಸಂಪೂರ್ಣ ಬಿಗಿ ನಿಯಮಗಳ ಲಾಕ್ ಡೌನ್ ಮಾಡಿಲ್ಲ. ಲಾಕ್ ಡೌನ್ ಮಾಡಿ ನಾನೇನೂ ಸಂತೋಷದಿಂದಿಲ್ಲ. ಆದರೆ ಇದು ಈ ಕ್ಷಣದ ಅಗತ್ಯ ಎಂದಿದ್ದಾರೆ.
ಇದನ್ನೂ ಓದಿ:ಗೋಕಾಕ್: ನಿಯಮ ಉಲ್ಲಂಘಿಸಿ ಮದುವೆ ನಡೆಸಿದವರಿಗೆ 20 ಸಾವಿರ ರೂ. ದಂಡ!
ಯಾವೆಲ್ಲಾ ಜಿಲ್ಲೆಗಳಲ್ಲಿ ಪಾಸಿಟಿವಿ ದರ ಶೇ.10ಕ್ಕಿಂತ ಕಡಿಮೆಯಿದೆ ಮತ್ತು ಶೇ 40 ಕ್ಕಿಂತ ಕಡಿಮೆ ಆಕ್ಸಜನ್ ಬೆಡ್ ಭರ್ತಿಯಾಗಿರುವಲ್ಲಿ ಮಾತ್ರ ನಾವು ನಿಯಮಗಳನ್ನು ಸಡಿಲಗೊಳಿಸುತ್ತೇವೆ ಎಂದು ಮಹಾ ಸಿಎಂ ಹೇಳಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ನಿಜ. ಆದರೆ ಅದು ಇನ್ನೂ ಇಳಿಕೆಯಾಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಪ್ರಮಾಣ ಹೆಚ್ಚುತ್ತಿದೆ. ಅದು ಕಡಿಮೆಯಾಗಬೇಕಿದೆ ಎಂದಿದ್ದಾರೆ.
ಇದೇ ವೇಳೆ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದಲ್ಲಿ ಈ ಬಾರಿ 10ನೇ ತರಗತಿ ಪರೀಕ್ಷೆ ನಡೆಸುವುದಿಲ್ಲ ಎಂದಿದ್ದಾರೆ.