ಮುಂಬೈ: ಇಡೀ ದೇಶದ ಗಮನ ಸೆಳೆದಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಶನಿವಾರ (ನ.23) ನಡೆದ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. 288 ವಿಧಾನಸಭೆ ಕ್ಷೇತ್ರಗಳ ಪೈಕಿ ಎನ್ ಡಿಎ ಮೈತ್ರಿಕೂಟವು 225 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಎಂವಿಎ ಕೂಟವು 50 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
ಬಿಜೆಪಿ, ಏಕನಾಥ ಶಿಂಧೆ ಬಣದ ಶಿವಸೇನೆ, ಅಜಿತ್ ಪವಾರ್ ಬಣದ ಎನ್ ಸಿಪಿ ಮೈತ್ರಿಯು ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಇದೀಗ ಯಾರು ಮುಖ್ಯಮಂತ್ರಿ ಸ್ಥಾನ ಪಡೆಯುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಸದ್ಯ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರು ಸಿಎಂ ಆಗಿದ್ದಾರೆ. 130ಕ್ಕೂ ಹೆಚ್ಚು ಸ್ಥಾನ ಗೆದ್ದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದು, ಸಿಎಂ ಸ್ಥಾನ ಬಿಜೆಪಿ ಪಾಲಿಗೆ ಒದಗುವ ಸಾಧ್ಯತೆ ಹೆಚ್ಚಿದೆ.
ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಎರಡು ಬಾರಿಯ ಸಿಎಂ, ಸದ್ಯ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರು ಈಗಾಗಲೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿದರು. ಎಲ್ಲರ ನಡುವೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈತ್ರಿಕೂಟದ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಬಗ್ಗೆ ಯಾವುದೇ ಗೊಂದಲಿಲ್ಲ. ಚುನಾವಣೆಯ ನಂತರ ಮೂರೂ ಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ಈ ನಿರ್ಧಾರ ಕೈಗೊಳ್ಳಬೇಕು ಎಂದು ಮೊದಲ ದಿನದಿಂದಲೇ ನಿರ್ಧರಿಸಲಾಗಿದೆʼ ಎಂದು ಅವರು ಹೇಳಿದರು.
ಇದನ್ನೂ ಓದಿ:Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
“ಅಂತಿಮ ಫಲಿತಾಂಶ ಬರಲಿ… ನಾವು ಒಟ್ಟಾಗಿ ಚುನಾವಣೆ ಎದುರಿಸಿದಂತೆಯೇ, ಮೂರೂ ಪಕ್ಷಗಳು ಒಟ್ಟಾಗಿ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತವೆ” ಎಂದು ಕೊಪ್ರಿ-ಪಚ್ಪಖಾಡಿ ಸ್ಥಾನದಲ್ಲಿ ಗೆಲುವು ಸಾಧಿಸಿದ ಸಿಎಂ ಏಕನಾಥ ಶಿಂಧೆ ಹೇಳಿದರು.
ಯಾರಾಗಬಹುದು ಮಹಾ ಸಿಎಂ?
ಸದ್ಯ ಮಹಾರಾಷ್ಟ್ರ ಸಿಎಂ ರೇಸ್ ನಲ್ಲಿ ಕಾಣುತ್ತಿರುವ ಪ್ರಮುಖ ಹೆಸರುಗಳೆಂದರೆ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ.
ಮಹಾರಾಷ್ಟ್ರದಲ್ಲಿ ಈ ಬಾರಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಆದರೆ ಬಹುಮತಕ್ಕೆ ಬೇಕಾದ 145 ಸ್ಥಾನಗಳಿಗೆ ತಲುಪುವಲ್ಲಿ ಎಡವಿದೆ. ಹೀಗಾಗಿ ಎನ್ ಸಿಪಿ ಮತ್ತು ಶಿಂಧೆ ಬಣದ ಬೆಂಬಲ ಇಲ್ಲದೆ ಅಧಿಕಾರ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮತ್ತೆ ಏಕನಾಥ್ ಶಿಂಧೆ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆಯೂ ಇದೆ.
ಮತ್ತೊಂದೆಡೆ, ಈಗ ಬಿಜೆಪಿಯು ಅಜಿತ್ ಪವಾರ್ ಅವರ ಎನ್‌ಸಿಪಿ ಬಣ ಮತ್ತು ಅದರ 40 ಸ್ಥಾನಗಳನ್ನು ತನ್ನ ಜೇಬಿನಲ್ಲಿ ಹೊಂದಿದೆ. ಪವಾರ್ ಅವರು ನಿರ್ಗಮಿಸುತ್ತಿರುವ ಉಪಮುಖ್ಯಮಂತ್ರಿ. ಅದನ್ನು ಉಳಿಸಿಕೊಳ್ಳಲು ಮತ್ತು ಬಿಜೆಪಿ ಮುಖ್ಯಮಂತ್ರಿಯನ್ನು ಬೆಂಬಲಿಸಲು ಮನವೊಲಿಸಬಹುದು.
ಬಿಜೆಪಿಯು ಸರ್ಪ್ರೈಸ್ ನೀಡುವಲ್ಲಿ ಸದಾ ಮುಂದಿರುವ ಪಕ್ಷ. ಸದ್ಯ ಪಟ್ಟಿಯಲ್ಲಿ ಇರದ ಬೇರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬಹುದು. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಟ್ಟಾಗ, ಪಕ್ಷವನ್ನು ದೊಡ್ಡ ಗೆಲುವಿನತ್ತ ಮುನ್ನಡೆಸಿದರೂ, ಆಗ ಅಜ್ಞಾತರಾಗಿದ್ದ ಮೋಹನ್ ಯಾದವ್ ಅವರನ್ನು ಸಿಎಂ ಆಗಿ ನೇಮಿಸಿತ್ತು. ಅಂತಹದ್ದೇ ಘಟನೆ ನಡೆದರೂ ಅಚ್ಚರಿ ಏನಿಲ್ಲ.