ಮಹಾಲಿಂಗಪುರ : ಮಾರ್ಚ್ 22 ರಿಂದ ಪದವಿ ಪರೀಕ್ಷೆಗಳು ಪ್ರಾರಂಭವಾಗಿವೆ. ಬುಧವಾರ ನಡೆಯಬೇಕಾಗಿದ್ದ ಪದವಿ ಮೂರನೇ ಸೆಮಿಸ್ಟರ್ ನ ಪತ್ರಿಕೋದ್ಯಮ ವಿಭಾಗದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ ಪಶ್ನೆ ಪತ್ರಿಕೆಯು ಬಾರದೇ ಪರೀಕ್ಷೆ ರದ್ದಾಗಿದೆ. ಇದರಿಂದಾಗಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ವಿರುದ್ಧ ಪ್ರತಿಭಟನೆ ನಡೆಸಿದರು.
ಬುಧವಾರ ಪದವಿ ಇತರ ವಿಷಯದ ಪರೀಕ್ಷೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು.
2ನೇ ಪರೀಕ್ಷೆಯು ರದ್ದು : ಮಾರ್ಚ್ 28 ರಂದು ನಡೆಯಬೇಕಾಗಿದ್ದ ಪತ್ರಿಕೋದ್ಯಮ ವಿಭಾಗದ ಬರವಣಿಗೆಯ ಕೌಶಲ್ಯಗಳು ವಿಷಯದ ಪ್ರಶ್ನೆ ಪತ್ರಿಕೆಯು ಬಾರದೇ ಒಂದು ಗಂಟೆಗಳ ಕಾಲ ಕಾಯ್ದು ಪ್ರಶ್ನೆ ಪತ್ರಿಕೆ ಬಾರದೇ, ಪರೀಕ್ಷೆ ರದ್ದಾಗಿ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು. ಇಂದು ನಡೆಯಬೇಕಾಗಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ ಪ್ರಶ್ನೆ ಪತ್ರಿಕೆಯು ಬಂದಿಲ್ಲ. ಪತ್ರಿಕೋದ್ಯಮ ವಿಭಾಗದ ಎರಡನೇ ಪ್ರಶ್ನೆ ಪತ್ರಿಕೆಯು ಬರದೇ ಇರುವ ಕಾರಣ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬೆಳಗಾವಿ ಚೆನ್ನಮ್ಮ ವಿವಿ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ : ನಾಡಕಚೇರಿಯಲ್ಲಿ ಸೋಲಾರ್, ಯುಪಿಎಸ್ ನಿಷ್ಕ್ರಿಯ: ಸಾರ್ವಜನಿಕರ ಪರದಾಟ
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು ಚೆನ್ನಮ್ಮ ವಿವಿಯ ಎಡವಟ್ಟುಗಳ ವಿವಿಯಾಗಿದೆ. ಮುಂಚಿತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದ್ದರೆ ಒಳ್ಳೆಯದಿತ್ತು , ನಮ್ಮ ವಿಭಾಗದ ಎರಡು ಪತ್ರಿಕೆಗಳು ರದ್ದಾಗಿವೆ. ಪರೀಕ್ಷೆ ಅರ್ಜಿ ಫಾರ್ಮ್ ತುಂಬುವಾಗ ಒಂದು ದಿನ ತಡವಾದರೆ ದಿನಕ್ಕೆ 100 ದಂಡಹಾಕುವ ವಿವಿಯು ಇಂದು ಪ್ರಶ್ನೆ ಪತ್ರಿಕೆಯನ್ನು ತಲುಪಿಸುವಲ್ಲಿ ಯಡವಟ್ಟು ಮಾಡಿದೆ ಎಂದು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಠಾಣಾಧಿಕಾರಿ ಭೇಟಿ : ವಿದ್ಯಾರ್ಥಿಗಳು ಕಾಲೇಜಿನ ಗೇಟ್ ಹೊರಗೆ, ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಹಾಲಿಂಗಪುರ ಠಾಣಾಧಿಕಾರಿ ವಿಜಯ ಕಾಂಬಳೆ ಅವರು ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪಾಟೀಲ್ ಅವರನ್ನು ಕರೆಯಿಸಿ, ಅವರೊಂದಿಗೆ ಚರ್ಚಿಸಿ ಇದು ಚೆನ್ನಮ್ಮ ವಿವಿಯ ಪರೀಕ್ಷಾ ವಿಭಾಗದಿಂದ ಆಗಿರುವ ತೊಂದರೆ, ಕಾಲೇಜಿನಿಂದ ಯಾವುದೇ ತೊಂದರೆ ಆಗಿಲ್ಲ. ದಯವಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಡಲು ವಿನಂತಿಸಿದರು. ನಂತರ ಚೆನ್ನಮ್ಮ ವಿವಿಯಿಂದ ಪರೀಕ್ಷೆ ಮುಂದುಡಿರುವ ಸೂಚನಾ ಪತ್ರ ಬಂದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳಿದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ ಸಿಪಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಂ.ಪಾಟೀಲ್, ಉಪನ್ಯಾಸಕರಾದ ವ್ಹೀ.ಎ.ಅಡಹಳ್ಳಿ, ಶಂಕರ ಕೋಳಿ, ಅಭಯ ಉಗಾರೆ, ಎಎಸ್ ಆಯ್ ಎಲ್.ಕೆ.ಅಗಸರ, ಪೇದೆಗಳಾದ ಜೆ.ಜಿ.ಪಾಟೀಲ್, ರಾಘವೇಂದ್ರ ಕಾಂಬಳೆ, ಎಬಿಪಿಎ ಅಭಿ ಲಮಾಣಿ, ಮಹಾಲಿಂಗ ಪಾಟೀಲ್ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದ್ದರು.