Advertisement

ಬಸವಕಲ್ಯಾಣದತ್ತ ಎಲ್ಲರ ಚಿತ್ತ ಹರಿಸಿದ ಮಾತೆ ಮಹಾದೇವಿ

05:49 AM Mar 15, 2019 | |

ಬಸವಕಲ್ಯಾಣ: 12ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗಾಗಿ ಬಸವಾದಿ ಶರಣರು ನೆತ್ತರು ಚೆಲ್ಲಿದ ಪವಿತ್ರ ಭೂಮಿ ಬಸವಕಲ್ಯಾಣ. ಇಂತಹ ಬಸವಕಲ್ಯಾಣದತ್ತ ವಿಶ್ವದ ಪ್ರವಾಸಿಗರು ಮತ್ತು ಸಾರ್ವಜನಿಕರ ಗಮನ ಸೆಳೆಯುವಂತೆ ಮಾಡಿದವರು ಕೂಡಲ ಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಎಂಬುವುದರಲ್ಲಿ ಎರಡು ಮಾತಿಲ್ಲ. ಮಾತಾಜಿ ಅವರ ನೇತೃತ್ವದಲ್ಲಿ ಇಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ ಎನ್ನಬಹುದು. ಇಲ್ಲಿನ ಬಸವ ಮಹಾಮನೆ ಆವರಣದಲ್ಲಿ ಕೈಗೊಂಡ ವಿವಿಧ ಕಾರ್ಯಗಳಿಂದ 800 ವರ್ಷಗಳ ನಂತರ ಮತ್ತೆ ಗತವೈಭವ ಮರುಕಳಿಸಿದಂತಾಗಿದೆ. ಭವ್ಯ ಬಸವ ಪ್ರತಿಮೆ, ವಿವಿಧ ಶರಣರ ಸಾಕಾರ ರೂಪ ಕಂಡು ರೋಮಾಂಚನಗೊಳ್ಳುವಂತಾಗಿದೆ. ಶರಣರ ಲೋಕವೇ ಇಲ್ಲಿ ಸೃಷ್ಟಿಯಾದಂತಾಗಿದೆ. ಬಸವಕಲ್ಯಾಣವೆಂದರೆ ಅದೆಲ್ಲಿದೆ ಎನ್ನುತ್ತಿದ್ದವರು ಈಗ ಇಲ್ಲಿನ ಶರಣಲೋಕದ ಅನುಭೂತಿ ಪಡೆಯಲು ಬರುವಂತಾಗಿದೆ. ಮಾತೆ ಮಹಾದೇವಿ ಅವರ ಮುಂದಾಲೋಚನೆಯ ಫಲ ಹಾಗೂ ಅರ್ಥಪೂರ್ಣ ಕಾರ್ಯಗಳಿಂದ ಈ ಸ್ಥಳ ಶರಣತತ್ವದ ತಾಣವಾಗಿ ಮಾರ್ಪಟ್ಟಿದೆ.

Advertisement

ವಿಶ್ವಗುರು ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚಟುವಟಿಕೆಗಳನ್ನು ಕೈಗೊಂಡು ಶರಣರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಮಾತೆ ಮಹಾದೇವಿಯವರು ಮಾಡಿದ್ದಾರೆ. 

ಬಸವ ಮಹಾಮನೆ: ಇಲ್ಲಿನ ಬಸವ ಮಹಾಮನೆ ಅನಾಥ ಮಕ್ಕಳಿಗೆ ಆಶ್ರಯ ತಾಣವಾಗಿದೆ. ಅನಾಥ ಮಕ್ಕಳಿಗೆ ಇಲ್ಲಿ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿದ್ದು, ಅನಾಥ ಮಕ್ಕಳಿಗೆ ಶಾಲೆಗೆ ಹೋಗುವ ಸೌಲಭ್ಯ ಒದಗಿಸಲಾಗಿದೆ.

ಮೊದಲ ಮಹಿಳಾ ಜಗದ್ಗುರು 
ಐತಿಹಾಸಿಕ ಅಕ್ಕ ಮಹಾದೇವಿ ಅನುಭವ ಪೀಠವೆಂಬ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪಿಸಿ ಅದರ ಪ್ರಥಮ ಪೀಠಾಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅವರ ಸಾಮಾಜಿಕ ಕಾದಂಬರಿ “ಹೆಪ್ಪಿಟ್ಟ ಹಾಲು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ 1973ರಲ್ಲಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಬಸವ ಮಂಟಪ ಸ್ಥಾಪಿಸುವುದರ ಜೊತೆಗೆ ದೇಶ ವಿದೇಶಗಳಲ್ಲೂ ಬಸವ ಧರ್ಮ ಪ್ರಚಾರ ಕೈಗೊಂಡಿದ್ದರು. 1977ರಲ್ಲಿ ವಿಶ್ವ ಕಲ್ಯಾಣ ಮಿಷನ್‌ (ಟ್ರಸ್ಟ್‌ ), ಬೆಂಗಳೂರಿನ ಕುಂಬಳಗೋಡಿನಲ್ಲಿ 1978ರಲ್ಲಿ ಬಸವ ಗಂಗೋತ್ರಿ ಆಶ್ರಮ, 2002ರಲ್ಲಿ ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠ ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದರು.

ವೀರಾರೆಡ್ಡಿ ಆರ್‌. ಎಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next