ಬ್ಯಾಂಕ್ ಗಳಲ್ಲಿ ನಗದು ಠೇವಣಿ ಇಡುವ ಕುರಿತು ಆರ್ ಬಿಐ (RBI) ಕೆಲವೊಂದು ನೀತಿ-ನಿಯಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಉಳಿತಾಯ ಖಾತೆ(Savings Account) ಯಲ್ಲಿ ಒಂದು ದಿನಕ್ಕೆ ಎಷ್ಟು ಹಣ ಡೆಪಾಸಿಟ್ ಮಾಡಬಹುದು? ವಾರ್ಷಿಕ ಮಿತಿ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ…
ನಿಮ್ಮ ಉಳಿತಾಯ ಖಾತೆ(Savings Account)ಯನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಮೊದಲ ಹಂತವೆಂದರೆ ಉಳಿತಾಯ ಖಾತೆಯಲ್ಲಿ ಠೇವಣಿ ಹಣದ ಮೊತ್ತವನ್ನು ಹೆಚ್ಚಾಗಿ ಇಡುವುದು. ಇದರಿಂದಾಗಿ ಬ್ಯಾಂಕ್ ಟ್ರಾನ್ಸ್ ಫರ್ಸ್ ಮತ್ತು ಠೇವಣಿಯನ್ನು ನಿರಂತರವಾಗಿ ಇಟ್ಟರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳವಾಗಲಿದೆ. ಅದಕ್ಕೆ ಬಡ್ಡಿಯೂ ಸೇರಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( RBI)ದ ನಿಯಮದ ಪ್ರಕಾರ, ಪ್ಯಾನ್ ಕಾರ್ಡ್ ಮಾಹಿತಿ ನೀಡದೇ ನೀವು ನಿಮ್ಮ ಉಳಿತಾಯ ಖಾತೆಯಲ್ಲಿ 50,000 ರೂಪಾಯಿವರೆಗೆ ಠೇವಣಿ ಇಡಬಹುದಾಗಿದೆ. ಒಂದು ವೇಳೆ ನೀವು ಹೆಚ್ಚಿನ ಠೇವಣಿ ಇಡುವುದಾದರೆ ಪ್ಯಾನ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯ. ಒಬ್ಬ ಗ್ರಾಹಕ ಒಂದು ದಿನದಲ್ಲಿ ಎರಡು ಲಕ್ಷ ರೂಪಾಯಿವರೆಗೆ ಮಾತ್ರ ಹಣ ವರ್ಗಾವಣೆ ಮಾಡಬಹುದಾಗಿದೆ. ಉಳಿತಾಯ ಖಾತೆ(Savings Account)ನಲ್ಲಿ ವಾರ್ಷಿಕವಾಗಿ 10 ಲಕ್ಷ ರೂಪಾಯಿವರೆಗೆ ಠೇವಣಿ ಇಡಬಹುದಾಗಿದೆ. ಒಂದು ವೇಳೆ ಈ ಮೊತ್ತ(10ಲಕ್ಷ)ಕ್ಕಿಂತ ಅಧಿಕ ಹಣದ ವರ್ಗಾವಣೆ ಇದ್ದರೆ ನಿಮ್ಮ ಬ್ಯಾಂಕ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತದೆ.
ಬ್ಯಾಂಕ್ ಗಳಲ್ಲಿನ ಉಳಿತಾಯ ಖಾತೆಯಲ್ಲಿ ಠೇವಣಿ ಇಡುವುದು ಆರ್ ಬಿಐ ನಿಗದಿಪಡಿಸಿದ ನಿಯಮಕ್ಕೆ ಅನುಗುಣವಾಗಿರಲಿದೆ. ವಾರ್ಷಿಕವಾಗಿ ಉಳಿತಾಯ ಖಾತೆಯಲ್ಲಿ 10 ಲಕ್ಷ ರೂ. ಠೇವಣಿ ಇಡಬಹುದಾಗಿದ್ದು, ಇದಕ್ಕೆ ನೇರ ತೆರಿಗೆ ಅನ್ವಯವಾಗುವುದಿಲ್ಲ. ಒಂದು ವೇಳೆ ಅಧಿಕ ಹಣದ Transactions ಇದ್ದಲ್ಲಿ ಆದಾಯ ತೆರಿಗೆ ಇಲಾಖೆ ಅದನ್ನು ಪರಿಶೀಲಿಸಿ ತೆರಿಗೆ ವಿಧಿಸಲಿದೆ.
ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿನ ಹಣದ ವರ್ಗಾವಣೆ, ಹಣದ ಮೂಲದ ಕುರಿತು ಸ್ಪಷ್ಟ ಮಾಹಿತಿ ನೀಡದಿದ್ದಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 68ರ ಅನ್ವಯ, ಠೇವಣಿ ಹಣದ ಮೇಲೆ ಆದಾಯ ತೆರಿಗೆ ಇಲಾಖೆ ಶೇ.60ರಷ್ಟು ತೆರಿಗೆ, ಶೇ.25ರಷ್ಟು ಹೆಚ್ಚುವರಿ ಶುಲ್ಕ ಹಾಗೂ ಶೇ.4ರಷ್ಟು ಸೆಸ್ ವಿಧಿಸಲಿದೆ.
ನಿಮ್ಮ ಖಾತೆಯಲ್ಲಿ ಪ್ರಸಕ್ತ ವರ್ಷದಲ್ಲಿ 10 ಲಕ್ಷ ರೂಪಾಯಿಗಿಂತ ಅಧಿಕ ಹಣ ಠೇವಣಿ ಜಮೆಯಾಗಿದ್ದರೆ, ಆಗ ಬ್ಯಾಂಕ್ ನವರು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ನಂತರ ಹಣದ ಮೂಲವನ್ನು ತಿಳಿಸುವಂತೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇರುತ್ತದೆ. ಇಲ್ಲವೇ ನೀವು ನಿಮ್ಮ ಆದಾಯ ತೆರಿಗೆ ಸಲ್ಲಿಸುವಾಗ ಹಣದ ಮೂಲದ ಮಾಹಿತಿಯನ್ನು ನೀಡಿದ್ದರೆ, ಅದಕ್ಕನುಗುಣವಾಗಿ ತೆರಿಗೆ ವಿಧಿಸುತ್ತಾರೆ.