ವಿಜಯಪುರ: ಚಡಚಣ ತಾಲೂಕಿನ ಕೆರೂರ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 200 ಲಾರಿ ಪ್ರಮಾಣದ ಮರಳು ಜಪ್ತಿ ಮಾಡಲಾಗಿದೆ. ರಾಜ್ಯದಲ್ಲೇ ಅತಿ ದೊಡ್ಡ ಮರಳು ಅಕ್ರಮ ದಾಸ್ತಾನು ಎನಿಸಿರುವ ಈ ಕೃತ್ಯದ ಹಿಂದೆ ಮಹಾದೇವ ಭೈರಗೊಂಡ ಅವರ ಕೈವಾಡವಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳು ತಕ್ಷಣ ಶರಣಾಗದಿದ್ದರೆ 24 ಗಂಟೆಯಲ್ಲಿ
ಬಂಧಿಸುವಂತೆ ತಾಕೀತು ಮಾಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ತಿಳಿಸಿದರು.
ಸೋಮವಾರ ಕೆರೂರ ಗ್ರಾಮದ ಅಕ್ರಮ ಮರಳು ದಾಸ್ತಾನು ಹಾಗೂ ಮಹಾದೇವ ಭೈರಗೊಂಡ ಮಾಲೀಕತ್ವದ ಭೈರವನಾಥ ಶಿಕ್ಷಣ ಸಂಸ್ಥೆ, ಕಲ್ಲಿನ ಖಡಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರಿ ಪ್ರಮಾಣದ ಮರಳು ಅಕ್ರಮ ಸಂಗ್ರಹದ ಹಿಂದೆ ಇಂಡಿ ವಿಧಾನಸಭೆ ಕ್ಷೇತ್ರದ ಸ್ಪರ್ಧಾ ಆಕಾಂಕ್ಷಿ ಮಹಾದೇವ ಭೈರಗೊಂಡ ಅವರ ಕೈವಾಡ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಹಾದೇವ ಹಾಗೂ ಅವರ 12 ಸಹಚರರ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ. 27ರಂದು ಮಹಾದೇವ ಮೇಲೆ ಚಡಚಣ ಠಾಣೆಯಲ್ಲಿ ರೌಡಿಶೀಟ್ ತೆರೆದಿದ್ದು ಪೊಲೀಸ್ ದಾಳಿ ಸಂದರ್ಭದಲ್ಲಿ ಪರಾರಿ ಆಗಿದ್ದಾನೆ ಎಂದರು.
ಬುಧವಾರ ಸಂಜೆ 6 ಗಂಟೆಯೊಳಗೆ ಶರಣಾಗದಿದ್ದಲ್ಲಿ ಗಡಿಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಬೇಕು. ಮತ್ತೂಂದೆಡೆ 24 ಗಂಟೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಅವರನ್ನು ಅಮಾನತು ಮಾಡುವಂತೆ ಎಸ್‌ಪಿ ಪ್ರಕಾಶ ನಿಕ್ಕಂ ಅವರಿಗೆ ಸೂಚಿಸಿದರು.
ಭೀಮಾ ನದಿ ಪಾತ್ರದಲ್ಲಿ ಬೃಹತ್ ಪ್ರಮಾಣದ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಇತ್ತು. ಇದನ್ನು ಆಧರಿಸಿ ಶನಿವಾರ ಪೊಲೀಸರು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಮರಳು, 5 ಲಾರಿ, 1 ಟಿಪ್ಪರ್ ಹಾಗೂ 5 ಬೋಟ್ ವಶಕ್ಕೆ ಪಡೆಯಲಾಗಿದೆ ಎಂದರು. ಇದಲ್ಲದೇ ಅಕ್ರಮ ಮರಳು ಹಾಗೂ ಖಡಿ ಸಾಗಿಸಲು ಬಳಸುತ್ತಿರುವ 1 ಜೆಸಿಬಿ, 4 ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಭೀಮಾ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಅಕ್ರಮ ಶಸ್ತ್ರಾಸ್ತ ಮಾರಾಟ, ಬಳಕೆಯಂಥ ಎಲ್ಲ ಅಕ್ರಮಗಳಿಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು. ಇದಲ್ಲದೇ ಈ ನೆಲದಲ್ಲಿ ಯಾವುದೇ ರೀತಿಯಲ್ಲೂ ಸಮಾಜ ಬಾಹೀರ ಹಾಗೂ ಕಾನೂನು ಉಲ್ಲಂಘನೆ ಅಕ್ರಮ ಚಟುವಟಿಕೆಗೆ ಅವಕಾಶ ಇಲ್ಲದಂತೆ ಸಂಪೂರ್ಣ ಮಟ್ಟ ಹಾಕುವಂತೆ ಇಂಡಿ ಡಿಎಸ್ಪಿ ರವೀಂದ್ರ ಶಿರೂರ ಅವರಿಗೆ ಐಜಿಪಿ ಸೂಚಿಸಿದರು. ಪ್ರೊಷೇನರಿ ಎಸ್‌ಪಿ ಆರ್. ಶ್ರೀನಿವಾಸಗೌಡ, ಎಎಸ್ಪಿ ಶಿವಕುಮಾರ, ಎಂ.ಜೆ. ಪೃಥ್ವಿ, ಎಲ್.ನವೀನಕುಮಾರ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.