Advertisement

ಕಟ್ಟಡಗಳ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ ಕಡ್ಡಾಯ

10:35 AM Dec 05, 2017 | Team Udayavani |

ಕಲಬುರಗಿ: ನಗರದಲ್ಲಿರುವ ಎಲ್ಲ ಕಟ್ಟಡಗಳ ಬೇಸ್‌ಮೆಂಟ್‌ನಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಕಡ್ಡಾಯಗೊಳಿಸಲು ತಂಡಗಳನ್ನು ರಚಿಸಿ ಒಂದು ತಿಂಗಳೊಳಗಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಹೇಳಿದರು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ನಗರ ಸಂಚಾರ ಯೋಜನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದು.

Advertisement

ಮಹಾನಗರ ಪಾಲಿಕೆ, ಪೊಲೀಸ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ವಲಯ ಹಂತದ ತಂಡಗಳನ್ನು ರಚಿಸಿ ಆಂದೋಲನ ಮಾದರಿಯಲ್ಲಿ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ ಮಾಡಲು ಅನುಕೂಲವಾಗುವ ಹಾಗೆ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಈಗಾಗಲೇ ಬೇಸ್‌ಮೆಂಟ್‌ ಪಾರ್ಕಿಂಗ್‌ ಇದ್ದ ಕಟ್ಟಡಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿಲ್ಲ. ಅಂಥಹ ಕಡೆಗಳಲ್ಲಿ ಪೊಲೀಸ್‌ ಅಧಿಕಾರಿಗಳು ವಾಹನಗಳನ್ನು ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ ಮಾಡಲು ಜಾಗ್ರತಿ ಮೂಡಿಸಬೇಕು. ಬೇಸ್‌ಮೆಂಟ್‌ನಲ್ಲಿ ಎಲ್ಲ ವಾಹನಗಳು ಪಾರ್ಕಿಂಗ್‌ ಆದಲ್ಲಿ ರಸ್ತೆ ಮೇಲೆ ವಾಹನಗಳ ಸಂಚಾರ ಸಮಸ್ಯೆ
ತಗ್ಗುತ್ತದೆ ಎಂದರು.

ಕಲಬುರಗಿ ನಗರದಲ್ಲಿ ಬೆಳಗಾವಿ ಮಾದರಿ ಸಂಚಾರ ನಿಯಂತ್ರಣ ಕೇಂದ್ರ ರೂಪಿಸಲು ಬೆಳಗಾವಿ ಸಲಹೆಗಾರರಿಂದ ವಿವರ ಸಮೀಕ್ಷೆ ಕೈಗೊಂಡು ಸಂಪೂರ್ಣ ವರದಿ ರೂಪಿಸಿಕೊಳ್ಳಬೇಕು. ಈಗಾಗಲೇ ಮಹಾನಗರ ಪಾಲಿಕೆಯಲ್ಲಿ 5 ಕೋಟಿ ರೂ. ಹಾಗೂ ಪೊಲೀಸ್‌ ಇಲಾಖೆಯಲ್ಲಿ ಕೆ-ಟ್ರ್ಯಾಫಿಕ್‌ಗೆ 2 ಕೋಟಿ ರೂ. ಅನುದಾನ ಲಭ್ಯವಿದ್ದು, ಹೆಚ್ಚಿನ ಅನುದಾನ ಅವಶ್ಯಕತೆ ಇದ್ದಲ್ಲಿ ಎಚ್‌ಕೆಆರ್‌ಡಿಬಿ ಯಿಂದ ನೀಡಲಾಗುವುದು ಎಂದು ಹೇಳಿದರು.

ನಗರದಲ್ಲಿರುವ ಬೀದಿ ವ್ಯಾಪಾರಿಗಳಿಗೆ ಸಮರ್ಪಕ ಸ್ಥಳಾವಕಾಶ ನೀಡಲು ಮಹಾನಗರ ಪಾಲಿಕೆ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳ ಗುರುತಿಸಲು ಸಮೀಕ್ಷೆ ಕೈಗೊಳ್ಳಲಾಗುವುದು. ನಗರದಲ್ಲಿ ಸಿಟಿ ಬಸ್‌ಗಳು ರಸ್ತೆ ಮಧ್ಯದಲ್ಲಿ ನಿಂತು ಪ್ರಯಾಣಿಕರನ್ನು ಕೊಂಡೊಯ್ಯುವುದರಿಂದ ವಾಹನ ಸಂಚಾರ ಅಡೆತಡೆ ಉಂಟಾಗುತ್ತಿದೆ. ಕಾರಣ ಸಿಟಿ ಬಸ್‌ಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಅನುಕೂಲವಾಗುವ ಹಾಗೆ ಸ್ಥಳ ಗುರುತಿಸಬೇಕು. ಇದಕ್ಕೆ ತಂಡ ರಚಿಸಿ ಒಂದು ವಾರದಲ್ಲಿ ವರದಿ ನೀಡಬೇಕು ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ಕೆಲವು ಯುವಕರು ಮಾನಸಿಕ ರೋಗಿಗಳಿಗೆ ನೀಡುವ ಔಷಧಿ, ಗಾಂಜಾ ಸೇವನೆ ಮಾಡಿ ಅವರಿಗೆ ಅರಿಯದಂತೆ ಹಲವಾರು ಅನೈತಿಕ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ನಗರದಲ್ಲಿ ಕೆಲವು ಔಷಧಾಲಯಗಳು ವೈದ್ಯರ ಸಲಹೆ ಇಲ್ಲದೇ ಔಷಧಿ ವಿತರಿಸುತ್ತಿದ್ದಾರೆ ಹಾಗೂ ಗಾಂಜಾ ಮುಕ್ತವಾಗಿ ಲಭ್ಯವಾಗುತ್ತಿದೆ. ಇದನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಮಾತನಾಡಿ, ಸೂಪರ್‌ ಮಾರ್ಕೆಟ್‌ನಲ್ಲಿರುವ ಹಣ್ಣಿನ ಬೀದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಅವರು ನಿಲ್ಲುತ್ತಿರುವ ಸ್ಥಳವನ್ನು ಲೆವೆಲಿಂಗ್‌ ಮಾಡಿಕೊಡಬೇಕು. 

ದಿನಂಪ್ರತಿ ನಗರದಲ್ಲಿ ಸಂಚಾರಿ ನಿಯಮಗಳನ್ನು ತಿಳಿಸಿಕೊಡಲಾಗುತ್ತಿದೆ. ಸಾರಿಗೆ ಪ್ರಾಧಿಕಾರದವರು
ನಗರದಲ್ಲಿರುವ ಅನಧಿಕೃತ ಆಟೋ ಹಾಗೂ ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವುದನ್ನು ನಿಯಂತ್ರಿಸಲು ತಮ್ಮ ಜೊತೆ ಭಾಗಿಯಾಗಬೇಕು. 

ಅನಧಿಕೃತ ಆಟೋ ಸಂಚಾರ ಕಂಡು ಬಂದಲ್ಲಿ ಅವರ ಪರವಾನಿಗೆ ರದ್ದುಪಡಿಸಬೇಕು. ಗೂಡ್ಸ್‌ ವಾಹನಗಳಲ್ಲಿ ಸುಮಾರು 40-50 ಜನರು ಅನಧಿಕೃತವಾಗಿ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಪ್ರಯಾಣಿಸುತ್ತಾರೆ. ಇಂಥಹ ವಾಹನಗಳು ಅಪಘಾತಕ್ಕೀಡಾದಾಗ ಕನಿಷ್ಠ 5-6 ಜನ ಸಾವಿಗೀಡಾಗುತ್ತಾರೆ. ಇದನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಎಸ್ಪಿ ಎನ್‌. ಶಶಿಕುಮಾರ ಮಾತನಾಡಿ, ಭಾಂಡೇ ಬಜಾರ್‌ದಿಂದ ಗಂಜ್‌ವರೆಗಿನ ರಸ್ತೆಯಲ್ಲಿ ಬಸ್‌ ಸಂಚಾರದಿಂದ ವಾಹನದ ದಟ್ಟಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸ್‌ ಸಂಚಾರ ನಿಷೇಧಿಸಲು ಕ್ರಮ ತೆಗದುಕೊಳ್ಳಲಾಗುವುದು. ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಎಎಸ್‌ಪಿ ಲೋಕೇಶ, ಜಹೀರಾ ನಸೀಮ್‌, ಇಂಜಿನಿಯರ್‌ ರಾಜು ಡಾಂಗೆ, ಆರ್‌.ಪಿ. ಜಾಧವ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next