Advertisement

ನಡುಗಡ್ಡೆಯಾದ ತಾರಾಪುರ ಗ್ರಾಮ

03:42 PM Aug 26, 2018 | |

ಆಲಮೇಲ: ಭೀಮಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ತಾರಾಪುರ ಗ್ರಾಮ ಇದೀಗ ಎಲ್ಲ ಸಂಪರ್ಕ ಕಳೆದುಕೊಂಡು ದ್ವೀಪದಂತಾಗಿದೆ. ಮೊನ್ನೆಯಿಂದ ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ನೀರು ಹೊರ ಬಿಡುತ್ತಿದ್ದು ಭೀಮೆಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

Advertisement

ಪರಿಸ್ಥಿತಿ ಅರಿತು ತಾರಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಗ್ರಾಮದ ಇಚೆ ರಸ್ತೆ ಮೇಲೆ ನಿಂತು ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ತಾವು ಭಯದ ವಾತವಾರಣದಲ್ಲಿ ನೆಲೆಸಿದ್ದೇವೆ ಎಂದು ಗ್ರಾಮದ ದೇವಪ್ಪಗೌಡ ಪಾಟೀಲ ತಮ್ಮ ಸಮಸ್ಯೆ ಹೇಳಿಕೊಂಡರು.
 
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಅವಶಕ್ಯತೆ ಇದ್ದರೆ ಸೋಮವಾರ ಗಂಜಿಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿ ಕಾಲುವೆ ನೀರು ಮತ್ತು ಭೀಮಾನದಿ ಪಾತ್ರದ ನೀರು ಇನ್ನೂ ಹೆಚ್ಚಾಗುವ ಲಕ್ಷಣವಿದ್ದು ಜನರು ಎಚ್ಚರ ವಹಿಸಬೇಕೆಂದು ಹೇಳಿದರು. ಈ ಗ್ರಾಮ ಶಾಶ್ವತ ಪರಿಹಾರಕ್ಕಾಗಿ ಹೊಸೂರಲ್ಲಿ ಈಗಾಗಲೇ ನಿವೇಶನ ನೀಡಲಾಗಿದೆ ಮತ್ತು ಅವರ ಮನೆಗಳಿಗೆ ಯೋಗ್ಯಬೆಲೆಯನ್ನು ನೀಡಿದ್ದು ಅವರು ಈ ಹಳೆ ಊರಲ್ಲಿ ಇದ್ದರೆ ಸರಕಾರದಿಂದ ಯಾವುದೇ ಸೌಕರ್ಯಗಳು ಕೊಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಸ್ಥಳಾಂತರಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಮಗೆ ನೀಡಿದ ನಿವೇಶನದಲ್ಲಿ ತಕ್ಷಣ ಬರಬೇಕು ಎಂದು ಎಚ್ಚರಿಸಿದರು. 

ಗ್ರಾಮಸ್ಥರಲ್ಲಿ ನಿವೇಶನ ನೀಡುವುದಕ್ಕೆ ತಕಾರಾರು ತೆಗೆದಿದ್ದು, ಇದಕ್ಕೆ ಗ್ರಾಮದ ಹಿರಿಯರನ್ನೊಳಗೊಂಡ ಸಮಿತಿ ರಚಿಸಿ ಒಮ್ಮತ ನಿರ್ಧಾರಕ್ಕೆ ಬಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಗ್ರಾಮದ ಮಹಿಳೆ ಚಂದ್ರಭಾಗಾ ಮಾಶ್ಯಾಳ ಜಿಲ್ಲಾಧಿರಿಯೊಂದಿಗೆ ಮಾತಿಗಿಳಿದು ಕೇವಲ ತಾವು ಹೇಳಿ ಹೋದರೆ ನಡೆಯುವದಿಲ್ಲ, ನಮಗೆ ನ್ಯಾಯ ಕೊಡುವವರೆಗೆ ಊರು ಬಿಡಲು ಒಪ್ಪುವುದಿಲ್ಲ ಎಂದು ಹಠ ಹಿಡಿದರು. ನವಗ್ರಾಮ ನಿರ್ಮಾಣ ಮಾಡಲು 18 ಎಕರೆ ಭೂಮಿ ನೀಡಿದ್ದು ತಮಗೆ ಇಲ್ಲಿ ಒಂದೂ ನಿವೇಶನ ನೀಡಿಲ್ಲ, ನಮಗೆ ನ್ಯಾಯ ನೀಡಬೇಕು ಎಂದು ಭೂಮಿ ಕಳೆದುಕೊಂಡ ಅಂಬಾರಾಯ ಕಿಣಗಿ ಅಲವತ್ತುಕೊಂಡರು.

ನಾವು ಗ್ರಾಮ ಬಿಡಲು ಸಿದ್ಧರಾಗಿದ್ದೇವೆ. ಆದರೆ ಭೀಮಾ ಏತ ನೀರಾವರಿ ಅಧಿಕಾರಿಗಳು ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಅದನ್ನು ಸರಿಪಡಿಸಿದರೆ ನಾವು ಕೂಡಲೇ ಹೊಸ ನಿವೇಶನಕ್ಕೆ ಹೋಗಲು ಸಿದ್ಧರಾಗಿದ್ದೇವೆ. 
 ಮೀರಾಸಾಬ ಮುಲ್ಲಾ, ನಿರಾಶ್ರಿತ

Advertisement

ತಾರಾಪುರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಇಂಡಿ ಉಪವಿಭಾಗಾಧಿಕಾರಿ ಮತ್ತು ಸಿಂದಗಿ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಗ್ರಾಮದಲ್ಲಿ ಎಲ್ಲ ಜನಾಂಗದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಅವರಿಗೆ ಸರಿ ಹೋಗುವ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಲು ಹೇಳಿದ್ದೇನೆ. ಅದು
ಬಗೆಹರಿಯದಿದ್ದರೆ ಸ್ವತಃ ನಾನೆ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ.
 ಎಸ್‌.ಬಿ. ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next