ಬೆಂಗಳೂರು: “ಪ್ರಜಾ ಪ್ರತಿನಿಧಿ ನ್ಯೂಸ್’ ಹೆಸರಿನ ವಾಹಿನಿ ಆರಂಭಕ್ಕೆ ಬಂಡವಾಳ ಹೂಡಲು ಬಟ್ಟೆ ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಆರು ಮಂದಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಾಹಿನಿ ಮಾಲೀಕ ಎನ್ನಲಾದ ಸಿ. ಸಂತೋಷ್, ಸಿಬ್ಬಂದಿಯಾದ ಅಶೋಕ್ ಕುಮಾರ್, ವಿ.ಕೆ.ಮಹದೇವ, ರಾಕೇಶ್‌ಗೌಡ, ನವೀನ್, ಆನಂದ ಬಂಧಿತ ಆರೋಪಿಗಳು. ಆರೋಪಿಗಳಿಂದ 95 ಸಾವಿರ ರೂ. ನಗದು, 65 ಸಾವಿರ ರೂ. ಮೌಲ್ಯದ ಬ್ರಾಂಡೆಂಡ್ ಬಟ್ಟೆಗಳು, ಕ್ಯಾಮರಾ ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು
ತಿಳಿಸಿದ್ದಾರೆ.
ಸೆ.21ರಂದು ಕೆ.ಆರ್.ರಸ್ತೆಯಲ್ಲಿರುವ ಸ್ಟೈಲೋ ಹೆಸರಿನ ರೆಡಿಮೇಡ್ ಬಟ್ಟೆಗಳ ಮಳಿಗೆಗೆ ಹೋಗಿದ್ದ ಕೆ.ಮಹದೇವ್ ಹಾಗೂ ಎನ್.ಅಶೋಕ್ ಕುಮಾರ್ ವರದಿಗಾರರು ಎಂದು ಹೇಳಿಕೊಂಡು ಕೆಲ ಕಾಲ ಅಂಗಡಿಯ ಚಿತ್ರೀಕರಣ ಮಾಡಿಕೊಂಡು, ಮಳಿಗೆ ಮಾಲೀಕರ ಮೊಬೈಲ್ ನಂಬರ್ ಪಡೆದುಕೊಂಡು ವಾಪಸಾಗಿದ್ದರು.
ಮಾರನೇ ದಿನ ಮಾಲೀಕರಿಗೆ ಕರೆ ಮಾಡಿದ ಆರೋಪಿಗಳು, ನಿಮ್ಮ ಮಳಿಗೆಯಲ್ಲಿ ನಕಲಿ ಬ್ರಾಂಡ್‌ನ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದೀರ ಈ ಕುರಿತ ವಿಡಿಯೋ ಪ್ರಸಾರ ಮಾಡುತ್ತೇವೆ. ಪ್ರಸಾರ ಮಾಡದೇ ಇರಲು 50 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ಮಳಿಗೆ ಮಾಲೀಕರು ನೀಡಿದ ದೂರಿನ ಅನ್ವಯ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳು ಯಲಹಂಕ ನ್ಯೂಟೌನ್, ಬಾಗಲಕುಂಟೆ, ಬಸವನಗುಡಿ ವ್ಯಾಪ್ತಿ ಯಲ್ಲೂ ಇದೇ ರೀತಿ ವಂಚನೆ ಮಾಡಿದ್ದು, ವಂಚನೆಗೆ ಒಳಗಾದ ಹಲವು ವ್ಯಾಪಾರಿಗಳು ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರು. ಈ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.