Advertisement

ಮಹದಾಯಿ: 27ಕ್ಕೆ ಉತ್ತರ ಕರ್ನಾಟಕ ಬಂದ್‌

06:05 AM Dec 23, 2017 | Team Udayavani |

ಹುಬ್ಬಳ್ಳಿ: ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಒತ್ತಾಯಿಸಿ ಡಿ.27ರಂದು ಉತ್ತರ ಕರ್ನಾಟಕ ಬಂದ್‌ಗೆ ಕಳಸಾ-ಬಂಡೂರಿ ಸಮನ್ವಯ ಸಮಿತಿ ಕರೆ ನೀಡಿದೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿ ಮುಖಂಡ ರಾಜಣ್ಣಾ ಕೊರವಿ, ಕಳೆದ 3 ವರ್ಷಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿವೆ. ಯಾವುದೇ ಕೆಲಸಗಳು ಆಗುತ್ತಿಲ್ಲ. ಕೇವಲ ಹುಸಿ ಭರವಸೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಮುಂದಾಗಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕಿದೆ. ಇದರಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಏನು ಕೆಲಸವಿದೆ ಎಂದು ಪ್ರಶ್ನಿಸಿದರು. ಅಲ್ಲದೆ, ನ್ಯಾಯಾಧಿಕರಣದ ಮುಂದೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಅಫಿಡೆವಿಟ್‌ ಸಲ್ಲಿಸಿದಾಗಲೇ ಪರಿಹಾರ ಸಾಧ್ಯವಾಗಲಿದೆಯೇ ಹೊರತು ಒಂದು ಪಕ್ಷದ ರಾಜ್ಯಾಧ್ಯಕ್ಷರಿಂದ ಇದು ಸಾಧ್ಯವಿಲ್ಲ ಎಂದರು.

ಈಗಾಗಲೇ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲೂಕುಗಳಿಂದ ಈ ಹೋರಾಟಕ್ಕೆ ಮುಂದಾಗಿದ್ದು, ಡಿ.25ರಂದು ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಡಿ.27ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದರು.

ರೈತರಿಂದ ಬೆಂಗಳೂರು ಚಲೋ:  ಮಹದಾಯಿ ಬಿಕ್ಕಟ್ಟಿಗೆ ಗೋವಾ ಸರಕಾರ ದ್ವಿಪಕ್ಷೀಯ ಮಾತುಕತೆಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ರಾಜಿ ಸಂಧಾನಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಮುಂದಾಗಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರನ್ನು ಒತ್ತಾಯಿಸಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಶುಕ್ರವಾರ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ರಾಜಿ ಸಂಧಾನಕ್ಕೆ ವೇದಿಕೆ ಕಲ್ಪಿಸುವಂತೆ ಒತ್ತಾಯಿಸಲು ಬೆಂಗಳೂರಿನ ಬಿಜೆಪಿ ಕಚೇರಿಗೆ ಅವರು ತೆರಳಲಿದ್ದಾರೆ.

Advertisement

ರೈತ ಹೋರಾಟಗಾರರಿಂದ ಬಿಎಸ್‌ವೈಗೆ ಮುತ್ತಿಗೆ
ಈ ನಡುವೆ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಡ ಹೇರುವಂತೆ ಆಗ್ರಹಿಸಿ ಪಕ್ಷಾತೀತ ಹೋರಾಟ ಸಮಿತಿಯ ಹೋರಾಟಗಾರರು ನವಲಗುಂದದಲ್ಲಿ ಯಡಿಯೂರಪ್ಪ ಅವರ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.  ನರಗುಂದದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್‌ವೈ ವಾಹನಕ್ಕೆ ರೈತ ಹೋರಾಟಗಾರರು ಮುತ್ತಿಗೆ ಹಾಕಿದರು. ಆದರೆ, ಯಡಿಯೂರಪ್ಪನವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪೊಲೀಸರ ನೆರವಿನಿಂದ ಮುಂದೆ ಪ್ರಯಾಣ ಬೆಳೆಸಿದರು.

ಇದಕ್ಕೂ ಮುನ್ನ ನೂರಾರು ರೈತರು ಬೈಲಹೊಂಗಲ ಶಾಸಕ ಡಾ|ವಿಶ್ವನಾಥ ಪಾಟೀಲ ಅವರ ವಾಹನಕ್ಕೆ ಮುತ್ತಿಗೆ ಹಾಕಿ ನೀರಿನ ಸಮಸ್ಯೆ ಕುರಿತು ಉತ್ತರ ನೀಡುವವರೆಗೂ ಇಲ್ಲಿಂದ ತೆರಳಬಾರದು ಎಂದು ಪಟ್ಟು ಹಿಡಿದು ವಾಹನ ಹಿಂತೆಗೆದುಕೊಂಡು ಹೋಗುವಂತೆ ಮಾಡಿದರು. ಈ ವೇಳೆ, ಘೋಷಣೆ-ಪ್ರತಿ ಘೋಷಣೆಗಳು ಮೊಳಗಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.

ಮಹದಾಯಿ ಚರ್ಚೆ ವ್ಯರ್ಥ ಪ್ರಯತ್ನ: ದೇವೇಗೌಡ
ಹಾಸನ:
ಮಹದಾಯಿ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗದು. ಗೋವಾ ಮುಖ್ಯಮಂತ್ರಿ ಜೊತೆ ಬಿಜೆಪಿಯವರ ಚರ್ಚೆ ವ್ಯರ್ಥ ಪ್ರಯತ್ನ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರು ಕೊಡಬೇಕು ಎಂಬುದು ನ್ಯಾಯಾಧಿಕರಣದ ಮುಂದೆಯೇ ತೀರ್ಮಾನವಾಗಬೇಕು ಎಂದು ಗೋವಾ ಮುಖ್ಯಮಂತ್ರಿಯವರು ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವೂ ಇದೆ. ಆದರೆ, ನಾವೇ ಯಾವುದೇ ತೀರ್ಮಾನ ಮಾಡಲು ಬರುವುದಿಲ್ಲ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರೀಕ್ಕರ್‌ ಬರೆದ ಪತ್ರ ಓದಿರುವುದು ರಾಜಕೀಯ ಗಿಮಿಕ್‌. ಉತ್ತರ ಕರ್ನಾಟಕದ ಜನರಿಗೆ ಬಿಜೆಪಿ ಮಾಡಿದ ಅನ್ಯಾಯ.
–  ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next