ಬೆಳಗಾವಿ: ಮಹದಾಯಿ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮಹಾರಾಷ್ಟ್ರ ಸಿಎಂ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಗೋವಾ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲು ಸಮಯ ನಿಗದಿ ಮಾಡಿ, ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ 1.10 ಲಕ್ಷ ಜನರಿಗೆ ತಲಾ ಹತ್ತು ಸಾವಿರ ರೂ.ನೀಡಲಾಗಿದೆ. ಸಂಪೂರ್ಣ ಮನೆ ನಾಶವಾದವರಿಗೆ ಲಕ್ಷ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ವಾಸಕ್ಕೆ ಯೋಗ್ಯವಿಲ್ಲದ ಮನೆಯವರಿಗೆ 50 ಸಾವಿರ ರೂ.ನೀಡಲಾಗುವುದು. ಕೆಲ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿ ತ್ವರಿತಗತಿಯಲ್ಲಿ ಕೆಲಸ ಆರಂಭಿಸಲಾಗುವುದು ಎಂದರು.
ಅನೇಕ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಪರಿಹಾರದ ಮೊತ್ತ ಆಧರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಹಣಕಾಸಿನ ಸ್ಥಿತಿಗತಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರವಾಹದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಿತ್ತೂರು ಠಾಣೆ ಪಿಎಸ್‌ಐ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ಮಂಜೂರಾಗಿದ್ದು, ಶೀಘ್ರವೇ ಜಮಾ ಆಗಲಿದೆ.
ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಗೋ ರಕ್ಷಕ ಶಿವು ಉಪ್ಪಾರ ಸಾವಿನ ತನಿಖೆ ನಡೆಸಲು ಗೃಹ ಸಚಿವರಿಗೆ ಸೂಚಿಸಲಾಗುವುದು ಎಂದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇತರರಿದ್ದರು.
ಮುಖ್ಯಮಂತ್ರಿ ಕಾಲಿಗೆ ಬಿದ್ದ ಸಂತ್ರಸ್ತ ರೈತ: ರಾಮದುರ್ಗ ತಾಲೂಕಿನಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ತೀವ್ರ ಹಾನಿಗೊಳಗಾದ ದೊಡ್ಡ ಹಂಪಿಹೊಳಿ ಗ್ರಾಮಕ್ಕೆ ಭೇಟಿ ನೀಡಿ ಜಲಾವೃತವಾಗಿರುವ ಮನೆಗಳು, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಬೆಳೆ ಹಾನಿ ವೀಕ್ಷಿಸಿದ ಯಡಿಯೂರಪ್ಪ ಅವರಿಗೆ ಸಂತ್ರಸ್ತರು, “ದಯವಿಟ್ಟು ನಮಗೆ ಸಹಾಯ ಮಾಡಿ’ ಎಂದು ಮನವಿ ಮಾಡಿದರು. “ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಬೆಳೆಗಳು ಸಂಪೂರ್ಣ ನಾಶವಾಗಿವೆ.
ದಯವಿಟ್ಟು ಕೂಡಲೇ ಸೂಕ್ತ ಪರಿಹಾರ ದೊರಕಿಸಿಕೊಡಿ. ನಮ್ಮ ಬದುಕಿಗೆ ಆಸರೆ ಕೊಡಿ’ ಎಂದು ಸಂತ್ರಸ್ತ ರೈತನೊಬ್ಬ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಅಂಗಲಾಚಿದ. ನಂತರ, ಸುರೇಬಾನದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಲ್ಲಿಂದ ತೆರಳುವಾಗಲೂ ಸಂತ್ರಸ್ತರೊಬ್ಬರು ಮುಖ್ಯಮಂತ್ರಿ ಕಾಲಿಗೆ ಬಿದ್ದು ತಮ್ಮ ನೋವು ತೋಡಿಕೊಂಡರು. “ನೆರೆ ಹಾವಳಿಯಿಂದ ಮನೆ ಕಳೆದುಕೊಂಡಿದ್ದೇನೆ. ದಯವಿಟ್ಟು ಮನೆ ಕಟ್ಟಿಸಿಕೊಡಿ’ ಎಂದು ಅಂಗಲಾಚಿದರು.