ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಆರೋಪ -ಪ್ರತ್ಯಾರೋಪಗಳಿಂದಾಗಿ ತೀವ್ರ ವಾಗ್ಯುದ್ಧ ಉಂಟಾಯಿತು.
ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ರಾಜ್ಯದ ಸಚಿವರು ಸೇರಿದಂತೆ ಜೆಡಿಎಸ್ ಮತ್ತು ರೈತ ಮುಖಂಡರು ಭಾಗಿಯಾಗಿದ್ದರು.
ಡಿಸೆಂಬರ್ 15 ರ ಒಳಗೆ ನೀರು ತರುವುದಾಗಿ ಹೇಳಿದ್ದಿರಲ್ಲ. ಅಂತೆಯೇ ನಡೆದುಕೊಂಡಿದ್ದೀರಾ ಎಂದು ರೈತ ಸಂಘಟನೆಗಳ ಮುಖಂಡರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಡಾ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಗೋವಾ ಕಾಂಗ್ರೆಸ್ ಸಭೆಗೆ ಗೈರಾಗಿತ್ತು ಮೊದಲು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಿ ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.
ಈ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಲೇ ಬೇಕು.ಮೂರು ರಾಜ್ಯಗಳ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಸಭೆಯುದ್ದಕ್ಕೂ ಭಾಗಿಯಾದ ಎಲ್ಲಾ ಮುಖಂಡರ ನಡುವೆ ತೀವ್ರ ವಾಗ್ವಾದ, ಆರೋಪ -ಪ್ರತ್ಯಾರೋಪಗಳು ವಿನಿಮಯವಾಗಿದ್ದು ಕಾವೇರಿದ ವಾತವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ.