Advertisement

ಮಹದಾಯಿ: ಬಿಎಸ್‌ವೈ ಬದಲು ಪ್ರಧಾನಿ ಮಧ್ಯಸ್ಥಿಕೆಗೆ ಹಕ್ಕೊತ್ತಾಯ

11:25 AM Aug 07, 2017 | Team Udayavani |

ಹುಬ್ಬಳ್ಳಿ: ಮಹದಾಯಿ ನೀರು ಹಂಚಿಕೆ ವಿಷಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಗೋವಾ ಸಿಎಂ ಬದಲು ಪ್ರಧಾನಿ ಮೋದಿ ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸಿ ಪರಿಹರಿಸಲು ಮನವರಿಕೆ ಮಾಡಬೇಕೆಂದು ಮಹದಾಯಿ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಒತ್ತಾಯಿಸಿದೆ. 

Advertisement

ರವಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರಾದ ಮಹೇಶ ಪತ್ತಾರ, ವಿಕಾಸ ಸೊಪ್ಪಿನ, ಮಹದಾಯಿ ನೀರು ಹಂಚಿಕೆ ವಿಷಯವಾಗಿ ಗೋವಾ ಸಿಎಂ ಮನೋಹರ ಪರ್ರಿಕರ್‌ ಅಲ್ಲಿನ ವಿಧಾನಸಭೆಯಲ್ಲಿ ಮಹದಾಯಿ ವಿವಾದಕ್ಕೆ ಪರಿಹಾರವಿಲ್ಲ ಹಾಗೂ ಪಕ್ಷದ ನೆಲೆಯಲ್ಲಿ ಮಾತುಕತೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆದರೂ ರಾಜ್ಯದ ರಾಜಕೀಯ ನಾಯಕರು, ಸರಕಾರ ಸುಮ್ಮನಿರುವುದು ಏಕೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಂಸದರು, ರೈತ ಮುಖಂಡರೊಂದಿಗೆ ಪರ್ರಿಕರ್‌ ಭೇಟಿ ಮಾಡಿ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ. ಬದಲಿಗೆ ಪ್ರಧಾನಿ ಭೇಟಿ ಮಾಡಿ ರಾಜ್ಯದ ಮಹದಾಯಿ ನೀರಿನ ಹಕ್ಕು, ಅಗತ್ಯತೆ ಕುರಿತು ಮನವರಿಕೆ ಮಾಡಿ, ಮಧ್ಯಸ್ಥಿಕೆ ವಹಿಸುವಂತೆ  ಆಗ್ರಹಿಸುವುದೇ ಸೂಕ್ತ ಎಂದರು.  

ಮಹದಾಯಿ ನೀರು ಹಂಚಿಕೆ ವಿಷಯವಾಗಿ ಈ ಭಾಗದಲ್ಲಿ 2 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಉಭಯ ಸರಕಾರಗಳು ಸ್ಪಂದಿಸುತ್ತಿಲ್ಲ. ಬಿಜೆಪಿ ಸಂಸದರು, ಶಾಸಕರು ಕೂಡ ಪ್ರಧಾನಿ ಬಳಿ ಚಕಾರವೆತ್ತುತ್ತಿಲ್ಲ. ಎಲ್ಲ ಪಕ್ಷದವರು ಇದರಲ್ಲಿ ಮತ ಬ್ಯಾಂಕ್‌ ಮತ್ತು ರಾಜಕಾರಣ ಮಾಡುತ್ತಿದ್ದಾರೆ ಎಂದರು. 

ಪಕ್ಷಗಳಿಗೆ ರಾಜಕೀಯ ಹೊಡೆತ: ರಾಜ್ಯ ಸರಕಾರ ಮಹದಾಯಿ ಯೋಜನೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅದು ನ್ಯಾಯಾಧೀಕರಣಕ್ಕೆ ನೀಡುತ್ತಿರುವ ಅಂಕಿ-ಸಂಖ್ಯೆಯೂ ಸರಿಯಾಗಿಲ್ಲ. ಆದ್ದರಿಂದ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿಯ 4-5 ಸದಸ್ಯರ ನಿಯೋಗ ವಾರದೊಳಗೆ ಜಲ ಸಂಪನ್ಮೂಲ ಇಲಾಖೆಯ ಹಾಲಿ ಮತ್ತು ಮಾಜಿ ಸಚಿವರು,

Advertisement

-ನೀರಾವರಿ ತಜ್ಞರು, ತಾಂತ್ರಿಕ ತಜ್ಞರು, ಕಾನೂನು ತಜ್ಞರು, ಮಹದಾಯಿ ಯೋಜನೆಯ ಪ್ರಮುಖರು, ರೈತ ಮುಖಂಡರು ಹಾಗೂ ಇದಕ್ಕೆ ಸಂಬಂಧಿಸಿದವರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಿ, ಹೋರಾಟದ ರೂಪರೇಷೆಗಳನ್ನು ಬದಲಿಸಲಾಗುವುದು.

ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಲಾಗುವುದು. ಇನ್ನೆರಡು ತಿಂಗಳಲ್ಲಿ ಎಲ್ಲ ಪಕ್ಷದವರಿಗೂ ರಾಜಕೀಯ ಹೊಡೆತ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಮಹದಾಯಿ ಹೋರಾಟಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದರು.  

ರಾಜ್ಯ ಸರಕಾರವು ಕಳಸಾ- ಬಂಡೂರಿ ತಿರುವು ಯೋಜನೆಯಲ್ಲಿ ಕೆಲವು ತಾಂತ್ರಿಕ ಮಾರ್ಪಾಡು ಮಾಡಬೇಕು. ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು. ಮಹದಾಯಿ ನದಿ ನೀರು ಹರಿವಿಗೆ ಅಡ್ಡಲಾಗಿ ನಿರ್ಮಿಸಲಾದ ತಡೆಗೋಡೆ ತೆರವುಗೊಳಿಸಿದರೆ ರಾಜ್ಯಕ್ಕೆ ನೈಸರ್ಗಿಕವಾಗಿ ಅಂದಾಜು 3.5 ಟಿಎಂಸಿಯಷ್ಟು ನೀರು ಹರಿದು ಬರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next