ಬೆಂಗಳೂರು: ಸರಗಳ್ಳತನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಭೋವಿ ಕಾಲೋನಿ ನಿವಾಸಿ ವಂಸತ ರಾಜು(40) ಮತ್ತು ಶಿವಮೊ ಗ್ಗದ ಶ್ರೀರಾಮನಗರದ ಅತ್ತಿಕುಲ್ಲಾ (27) ಬಂಧಿತರು. ಆರೋಪಿಗಳಿಂದ 8.55 ಲಕ್ಷ ರೂ. ಮೌಲ್ಯದ 13 ಗ್ರಾಂ ಚಿನ್ನಾಭರಣ, 5 ಸಾವಿರ ನಗದು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ನಂದಿನಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಸರಗಳ್ಳತನ ಹಾಗೂ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದ ಒಂದು ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಇತ್ತೀಚೆಗೆ ನಂದಿನಿ ಲೇಔಟ್‌ನ ಶಂಕರ್ ನಗರ ನಿವಾಸಿ ಮಂಗಳಾ ಎಂಬುವರು ಗಣೇಶ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ವಸಂತರಾಜು, ಕಿಟಕಿಯ ಮೂಲಕ ಕೈ ಹಾಕಿ ಮಹಿಳೆಯ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆಗ ಮಹಿಳೆ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ 20 ಗ್ರಾಂ ತೂಕದ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಕಂಠೀರವ ಸ್ಟುಡಿಯೋ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಳವು ಮಾಡಿದ್ದ ಚಿನ್ನಾಭರಣಗಳನ್ನು ಭದ್ರಾವತಿಯ ಮನೆಯಲ್ಲಿ ವಸಂತರಾಜು ಬಚ್ಚಿಟ್ಟಿದ್ದ. ಇನ್ನು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‌ಪಿಜಿ ಗ್ಯಾಸ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದರು. ಇದೀಗ ಎರಡನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಅಡುಗೆ ಕೆಲಸಕ್ಕೆ ಸೇರಿ ಕಳ್ಳತನಕ್ಕಿಳಿದ ಆರೋಪಿ!:
ಆರೋಪಿಗಳ ಪೈಕಿ ವಂಸತರಾಜು ಈ ಮೊದಲು ಕಂಠೀರವ ಸ್ಟುಡಿಯೋದಲ್ಲಿ ಅಡುಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ನಂದಿನಿ ಲೇಔಟ್‌ನ ಸುತ್ತ-ಮುತ್ತ ಪ್ರದೇಶಗಳು ಪರಿಚಯ ಇದ್ದು, ಸರ ಕಳವು ಮತ್ತು ಮನೆ ಕಳವು ಮಾಡಿ ತಪ್ಪಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಈತನ ಸಹಚರ ಅತ್ತೀಕುಲ್ಲಾ ಕೂಡ ಕೃತ್ಯಕ್ಕೆ ಸಹಕಾರ ನೀಡಿದ್ದಾನೆ.