Advertisement

ಮಹಾದಾಯಿ ನದಿ ನೀರು ಸಮಸ್ಯೆ ಇತ್ಯರ್ಥಕ್ಕಾಗಿ ಆಗ್ರಹ

11:25 AM Jan 26, 2018 | Team Udayavani |

ಮಹಾನಗರ : ಮಹಾದಾಯಿ ನದಿ ನೀರು ಸಮಸ್ಯೆ ಇತ್ಯರ್ಥಕ್ಕಾಗಿ ಆಗ್ರಹಿಸಿ ಕನ್ನಡಪರ ಒಕ್ಕೂಟ ಹಾಗೂ ಕೆಲ ರೈತ ಸಂಘಟನೆಗಳು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್‌ ಬಿಸಿ ಮಂಗಳೂರು ನಗರದಲ್ಲಿ ನೀರಸವಾಗಿತ್ತು.

Advertisement

ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು, ಬ್ಯಾಂಕ್‌, ಶಾಲಾ-ಕಾಲೇಜುಗಳು, ಅಂಚೆಕಚೇರಿ ಎಂದಿನಂತೆ ತೆರೆದಿತ್ತು. ಕೆ.ಎಸ್‌.ಆರ್‌.ಟಿ.ಸಿ. ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 10 ಗಂಟೆಯವರೆಗೆ ಸಾರಿಗೆ ಸಂಪರ್ಕವನ್ನು ಮೊಟಕುಗೊಳಿಸಿತ್ತು. ಬೆಳಗ್ಗೆ 10 ಗಂಟೆಯ ಬಳಿಕ ನಗರದ ನಾನಾ ಕಡೆಗಳಿಗೆ ತೆರಳುವ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ನಡೆಸಿದವು.

ಖಾಸಗಿ ಬಸ್‌ ಮಾಲಕರು ಬಂದ್‌ಗೆ ಬೆಂಬಲ ನೀಡದ ಕಾರಣ, ಬೆಳಗ್ಗೆಯಿಂದಲೇ ಎಂದಿನಂತೆಯೇ ಖಾಸಗಿ, ಸಿಟಿ ಬಸ್‌ ಗಳು ನಗರಾದ್ಯಂತ ಸಂಚರಿಸಿದವು. ಕರಾವಳಿ ಪ್ರದೇಶದಲ್ಲಿನ ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಂದ್‌ಗೆ ಬೆಂಬಲವಿಲ್ಲ ಎಂಬ ಸ್ಟಿಕ್ಕರ್‌ನ್ನು ಬುಧವಾರ ಅಂಟಿಸಲಾಗಿತ್ತು. ಅದರಲ್ಲಿ ‘ನಿಮಗೆ ನೀರಿಲ್ಲ ನಮಗೆ ನೋವಿದೆ. ಹಾಗಂತ ಪದೇ ಪದೇ ಬಂದ್‌ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ. ಈ ಬಾರಿ ಬಂದ್‌ಗೆ ನಮ್ಮ ಬೆಂಬಲವಿಲ್ಲ’ ಎಂದು ನಮೂದು ಮಾಡಲಾಗಿತ್ತು. ಇಷ್ಟೇ ಅಲ್ಲದೆ, ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿ ಬಂದ್‌ ಮಾಡದಂತೆ ಕರೆ ನೀಡಲಾಗಿತ್ತು.

ರೈಲು ತಡೆದು ಪ್ರತಿಭಟನೆ
ಮಹದಾಯಿ ನೀರಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶ  ಮಾಡುವಂತೆ ಆಗ್ರಹಿಸಿ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣ ಗೌಡ ಬಣದ ದಕ್ಷಿಣ ಕನ್ನಡ ಘಟಕವು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಕೇರಳಕ್ಕೆ ತೆರಳುವ ರೈಲುಗಳನ್ನು ತಡೆ ಪ್ರತಿಭಟನೆ ನಡೆಸಿತು.

ಮಾತಿನ ಚಕಮಕಿ
ಕರವೇ ಕಾರ್ಯಕರ್ತರು ಮಂಗಳೂರಿನ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ತೆರಳುವ ವೇಳೆಯಲ್ಲಿ ತುರವೇ ಕಾರ್ಯಕರ್ತರು ಸಹಿತ ನೆರೆದಿದ್ದ ಸ್ಥಳೀಯರು ಕರವೇ ಕಾರ್ಯಕರ್ತರನ್ನು ತರಾಟೆಗೆ ತೆಗೆದು ಕೊಂಡರು. ಈ ಹಿಂದೆ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ, ಅಲ್ಲದೆ, ತುಳುನಾಡಿನ ಬಗ್ಗೆ ಕರವೇ ಕಾರ್ಯಕರ್ತರು ಅವಹೇಳನ ಮಾಡಿರುವುದನ್ನು ಖಂಡಿಸಿ ಧ್ವನಿ ಎತ್ತದವರು ಈಗೇಕೇ ಮಹಾದಾಯಿ ವಿಚಾರದಲ್ಲಿ ಮಂಗಳೂರಿನಲ್ಲಿ ಮೂಗು ತೋರಿಸುತ್ತಿದ್ದೀರಿ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

Advertisement

ವಿದ್ಯಾರ್ಥಿಗಳಿಗೆ ನಿರಾಸೆ
ಜಿಲ್ಲಾಡಳಿತ ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ಮತದಾರರ ದಿನಾಚರಣೆಯನ್ನು ಗುರುವಾರ ಆಯೋಜಿಸಲಾಗಿತ್ತು. ಜಿಲ್ಲಾಮಟ್ಟದಲ್ಲಿ ಶಾಲಾ ಮಕ್ಕಳಿಗೆ ಈ ಹಿಂದೆ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣ ಸಮಾರಂಭ ಕೂಡ ಇತ್ತು. ಆದರೆ ಅನೇಕ ಕಡೆಗಳಲ್ಲಿ ಬೆಳಗ್ಗಿನ ವೇಳೆ ಬಂದ್‌ ಕಾರ್ಯಾಚರಣೆ ನಡೆಸಿದ್ದರಿಂದ ಕೆಲ ವಿದ್ಯಾರ್ಥಿಗಳು ಆಗಮಿಸಲಿಲ್ಲ. ಇನ್ನು ಕೆಲವರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ .

Advertisement

Udayavani is now on Telegram. Click here to join our channel and stay updated with the latest news.

Next