ನಂಜನಗೂಡು: ಮಹಾ ಶಿವರಾತ್ರಿ ಪ್ರಯುಕ್ತ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀಗಳು ಭಕ್ತರ ಜೊತೆಗೆ ಶಿವ ಪೂಜೆ ನೆರವೇರಿಸಿದ್ದಲ್ಲದೆ, ಜೆಎಸ್‌ಎಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ಶಿವಪೂಜೆ ನೆರವೇರಿತು.
ಶುಕ್ರವಾರ ಬೆಳಗ್ಗೆ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಕತೃìಗದ್ದುಗೆ, ಶ್ರೀಮಹದೇಶ್ವರ, ಶ್ರೀಸೋಮೇಶ್ವರ, ಶ್ರೀವೀರಭದ್ರೇಶ್ವರ, ಶ್ರೀ ನಂಜುಂಡೇಶ್ವರ ಮತ್ತು ಶ್ರೀನಾರಾಯಣಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕತೃಗದ್ದುಗೆಯಲ್ಲಿ ಶುಕ್ರವಾರ ಸಂಜೆ 6ಗಂಟೆಯಿಂದ ಶನಿವಾರ ಬೆಳಗಿನ ಜಾವ 6 ಗಂಟೆಯವರೆಗೆ ನಾಲ್ಕು ಜಾವಗಳಲ್ಲಿಯೂ ವಿಶೇಷ ಪೂಜೆಗಳು ಜರುಗಿದವು. ಸಂಜೆ 7ಗಂಟೆಗೆ ಶಿವದೀಕ್ಷೆ ,ರಾತ್ರಿ 9.30ಕ್ಕೆ ಬೆಳ್ಳಿರಥದ ಪ್ರಾಕಾರೋತ್ಸವ ಜರುಗಿತು.
ಸಂಜೆ 5ರಿಂದ ರಾತ್ರಿ 8.30ರವರೆಗೆ ಸುತ್ತೂರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾತ್ರಿ 8.30 ರಿಂದ 9.30ರವರೆಗೆ ಮೈಸೂರು ಅವಳಿ ಸಹೋದರಿಯರಾದ ಕು.ವಿಸ್ಮಯ ಮತ್ತು ಕು.ನಿಸರ್ಗರವರಿಂದ ಭಕ್ತಿಗೀತೆಗಳ ಗಾಯನ ಹಾಗೂ ರಾತ್ರಿ 9.30ರಿಂದ 10.30ರವರೆಗೆ ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥರಾದ ಶ್ರೀಮತಿ ಆರತಿ ವಿ.ಬಾಲಸುಬ್ರಹ್ಮಣ್ಯರವರಿಂದ
ಶಿವತತ್ವ ವಿಷಯ ಕುರಿತು ಉಪನ್ಯಾಸ ನಡೆಯಿತು.ರಾತ್ರಿ 10.30ರಿಂದ ಬದನವಾಳು ಬಿ.ಶಿವಕುಮಾರಶಾಸ್ತ್ರಿ ಮತ್ತು ತಂಡದವರು ಶಿವಪಂಚಾಕ್ಷರಿ ಮಹಾತ್ಮೆ ಎಂಬ ಶಿವಕಥಾ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಕತೃಗದ್ದುಗೆ ಮತ್ತು ಶ್ರೀಮಠದಲ್ಲಿ ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ ವಿವಿಧ ಭಜನಾ ತಂಡಗಳಿಂದ ಅಖಂಡ ಭಜನೆ ನಡೆಯಿತು.
ಶಿವದೀಕ್ಷೆ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ 100 ಕ್ಕೂ ಅಧಿಕ ಮಂದಿಗೆ ಶಿವದೀಕ್ಷೆ ನೆರವೇರಿಸಲಾಯಿತು. ಲಿಂಗಧಾರಣೆ ಬಳಿಕ ಆದಿ ಜಗದ್ಗುರು ಶಿವರಾತ್ರೀಶ್ವರರ ಗದ್ದುಗೆಯಲ್ಲಿ ನಡೆದ ಸಾಮೂಹಿಕ ಲಿಂಗಪೂಜೆಯಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು.