Advertisement

Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ

09:44 AM Jan 02, 2025 | Team Udayavani |

ಮಡಿಕೇರಿ: ಎಲ್ಲ ಜಾತಿ ಜನಾಂಗಗಳು ಸರ್ವ ಸಮಾನತೆಯಿಂದ ದೇವತಾ ಕಾರ್ಯಗಳಲ್ಲಿ ಒಂದಾಗಿ ಬೆರೆಯಬೇಕೆನ್ನುವ ಚಿಂತನೆಗಳಡಿ ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ ಯಾವುದೇ ಜನಾಂಗದ ಸಾಂಪ್ರದಾ ಯಿಕ ಆಚರಣೆಗಳು ಬೇಡ ಎನ್ನುವ ನಿಯಮ ಮಾಡಿಕೊಳ್ಳಲಾಗಿದೆ. ಇದನ್ನು ಜಿಲ್ಲಾಡಳಿತ ಗೌರವಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಗ್ರಾಮಸ್ಥರು ಹಾಗೂ ದೇವಸ್ಥಾನದ ಸ್ವಯಂ ಸೇವಕ ಕಟ್ಟೆಮನೆ ಸೋನಾ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟೆಮಾಡು ಗ್ರಾಮ ವ್ಯಾಪ್ತಿಯಲ್ಲಿ ಅಂದಾಜು ಶೇ.30ರಷ್ಟು ಗೌಡರು, ಶೇ.15ರಿಂದ 20ರಷ್ಟು ಕೊಡವ ಸಮೂಹ ಬಾಂಧವರಿದ್ದಾರೆ. ಶೇ.50ರಷ್ಟು ಮಂದಿ ವಿವಿಧ ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರು ದೇವಸ್ಥಾನದಲ್ಲಿ ಸರ್ವ ಸಮಾನವಾಗಿ ತೊಡಗಿಸಿ ಕೊಳ್ಳಬೇಕೆನ್ನುವ ಚಿಂತನೆಯಿಂದ, ದೇವಸ್ಥಾನದಲ್ಲಿ ಯಾವುದೇ ಸಮೂಹದ ಸಾಂಪ್ರದಾಯಿಕ ಉಡುಪು, ಆಚರಣೆಗಳು ಬೇಡವೆನ್ನುವ ನಿಯಮವನ್ನು ಗ್ರಾಮಸ್ಥರೆಲ್ಲರ ಸಮ್ಮತಿಯೊಂದಿಗೆ ರಚಿಸಲಾಗಿದೆ. ಅದರಂತೆ ಒಂದು ವರ್ಷದಿಂದ ಗ್ರಾಮದ ಎಲ್ಲ ಸಮೂಹದವರು ನಡೆದುಕೊಂಡು ಬಂದಿರುವುದಾಗಿ ಸ್ಪಷ್ಟಪಡಿಸಿದರು.

ಕಟ್ಟೆಮಾಡು ಗ್ರಾಮದ ವಿವಿಧ ಜನಾಂಗಗಳ ಹಾಗೂ ಕುಟುಂಬಗಳ ಪ್ರತಿನಿಧಿಗಳಿಗೆ ಕಟ್ಟೆಮಾಡು ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆ. ಕೊಡವ, ಗೌಡ ಜನಾಂಗವನ್ನು ಒಳಗೊಂ ಡಂತೆ ಹತ್ತಕ್ಕೂ ಹೆಚ್ಚಿನ ವಿವಿಧ ಜನಾಂಗಗಳ ಪ್ರತಿನಿಧಿಗಳು ಆಡಳಿತ ಮಂಡಳಿಯಲ್ಲಿದ್ದಾರೆ. ಇವರೆಲ್ಲರೂ ದೇವತಾ ಕಾರ್ಯಗಳಲ್ಲಿ ಇಲ್ಲಿಯ ವರೆಗೂ ಬಿಳಿಯ ಪಂಚೆ ಶಾಲನ್ನು ಧರಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕಟ್ಟಮನೆ ಸೋನಾ ತಿಳಿಸಿದರು.

ಸುಳ್ಳು ಆರೋಪ

ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಉತ್ಸವದ ದೊಡ್ಡ ಹಬ್ಬದ ಸಂದರ್ಭ ದೌರ್ಜನ್ಯ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಸುದ್ದಿಗಳೆಲ್ಲವೂ ಸುಳ್ಳು. ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅವರು ಹೇಳಿದರು. ಉತ್ಸವದ ಸಂಜೆಯ ವೇಳೆ ದೇವರ ಜಳಕಕ್ಕೆ ತೆರಳುವ ಹಂತದಲ್ಲಿ ಮೂರು ನಾಲ್ಕು ಜೀಪುಗಳಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಬಂದವರಿಗೆ, ದೇವಸ್ಥಾನದ ನಿಯಮಗಳ ಬಗ್ಗೆ ತಿಳಿಸಲಾಗಿತ್ತು. ಈ ಹಂತದಲ್ಲಿ ಆರಂಭಗೊಂಡ ಭಿನ್ನಾಭಿಪ್ರಾಯ ಸುಮಾರು 5 ತಾಸು ವಿಸ್ತರಿಸಿತು. ಇದು ನಿಜಕ್ಕೂ ಬೇಸರವನ್ನು ಉಂಟು ಮಾಡಿದೆ ಎಂದರು.

Advertisement

ಘಟನೆಯ ಬಳಿಕ ದೇವಸ್ಥಾನದಿಂದ ಪರಂಬು ಪೈಸಾರಿಯ ನಂದಿಪಾರೆ ಎಂಬಲ್ಲಿಗೆ ದೇವರು ಜಳಕಕ್ಕೆ ತೆರಳಿ, ನಡುರಾತ್ರಿ ವೇಳೆ ದೇವಸ್ಥಾನಕ್ಕೆ ಮರಳುವ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳಿದ್ದು, ಅವರು “ಹರ ಹರ ಮಹದೇವ’ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಂದರ್ಭ ದೌರ್ಜನ್ಯದಂತಹ ಯಾವುದೇ ಘಟನೆಗಳು ನಡೆದಿಲ್ಲ ಮತ್ತು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಗಳು ಸತ್ಯಕ್ಕೆ ದೂರವಾದುದೆಂದು ಹೇಳಿದರು.

ದೇವರ ಮುಂದೆ ಎಲ್ಲರು ಸರ್ವ ಸಮಾನರು, ನಾನು ಮೇಲು, ಕೀಳು ಎನ್ನುವ ಭಾವನೆ ಎಂದಿಗೂ ಸಲ್ಲದು. ಇವೆಲ್ಲವುಗಳನ್ನು ಮೀರಿ ಪ್ರೀತಿ ವಿಶ್ವಾಸದ, ಸೌಹಾರ್ದತೆ ಎಲ್ಲರಲ್ಲೂ ಮೂಡಬೇಕಾಗಿದೆ. ಶಕ್ತಿ ಪ್ರದರ್ಶನದ ಕಾಲ ಹೋಗಿದೆಯೆಂದು ನುಡಿದ ಅವರು, ಸರ್ವ ಸಮಾನತೆಯ ಚಿಂತನೆಯ ದೇವಸ್ಥಾನದ ವಸ್ತ್ರ ಸಂಹಿತೆಯನ್ನು ಒಪ್ಪುವುದು ಅಗತ್ಯವಾಗಿದೆ ಎಂದು ಕಟ್ಟೆಮನೆ ಸೋನಾ ತಿಳಿಸಿದರು.

ಕೊಡವ ಸಮಾಜದಿಂದ ಪ್ರತಿಭಟನೆ

ಮಡಿಕೇರಿ: ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಜಾತ್ರೆ ಸಂದರ್ಭ ಕುಪ್ಯಚೇಲೆ ಧರಿಸಿ ಹೋದ ಕೊಡವರನ್ನು ತಡೆಯಲಾಗಿದೆ ಎಂದು ಆರೋಪಿಸಿ ಬೇಂಗ್‌ನಾಡ್‌ ಕೊಡವ ಸಮಾಜದ ಪ್ರಮುಖರು ಹಾಗೂ ಸದಸ್ಯರು ಚೇರಂಬಾಣೆಯಲ್ಲಿ ಪ್ರತಿಭಟನೆ ನಡೆಸಿದರು.

ಚೇರಂಬಾಣೆ ನಗರದಲ್ಲಿ ಒಂದು ಗಂಟೆಗಳ ಕಾಲ ಸ್ವಯಂ ಘೋಷಿತ ಬಂದ್‌ ಆಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅನಂತರ ಮಾನವ ಸರಪಳಿ ರಚಿಸಿದ ಪ್ರತಿಭಟನಕಾರರು ಪ್ರಕಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ದೇವಾಲಯದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿರುವ ಸಂದರ್ಭ ಕೊಡವ ಜನಾಂಗದವರು ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು, ಕೊಡವ ಮಹಿಳೆಯರು ಕೊಡವ ಸೀರೆ ಧರಿಸಿ ದೇವಾಲಯ ಪ್ರವೇಶಿಸುವ ಸಂದರ್ಭ ಕೆಲವರು ತಡೆಯೊಡ್ಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next