ಪುಣೆ: ಪುಣೆಯ ಸಾಯಿ ಕ್ರಿಕೆಟರ್ಸ್ ನ ಸುದೀಪ್ ಪೂಜಾರಿ ಮುನಿಯಾಲ್, ವಸಂತ್ ಶೆಟ್ಟಿ ಹಿರಿಯಡ್ಕ ಮತ್ತು ಮಿತ್ರ ವರ್ಗದವರ ಪ್ರಾಯೋಜಕತ್ವದಲ್ಲಿ ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ ,ಚೇತನ್ ಮುಂಡಾಡಿ ನಿರ್ದೇಶನದ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಭಾರೀ ಜನಮನ್ನಣೆ ಪಡೆದು ತುಳುನಾಡಿನಾದ್ಯಂತ ಸಂಚಲನ ಮೂಡಿಸಿದ ಮದಿಪು ತುಳು ಚಲನ ಚಿತ್ರವು ಆ. 27ರಂದು ಪುಣೆಯ ಶಿವಾಜಿನಗರದ ಮಂಗಳ ಮಲ್ಟಿಪ್ಲೆಕ್ಸ್ ಸಿನಿಮಾ ಗ್ರಹದಲ್ಲಿ ಹೌಸ್ ಫುಲ… ಆಗಿ ಪ್ರದರ್ಶನಗೊಂಡಿತು.
ಈ ಚಿತ್ರ ಪ್ರದರ್ಶನದ ಮೊದಲಿಗೆ ಅಥಿತಿ ಗಣ್ಯರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ… ಬೆಟ್ಟು, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ , ಪುಣೆಯ ಹೋಟೆಲ… ಉದ್ಯಮಿ ಗಣೇಶ್ ಹೆಗ್ಡೆ , ಪುಣೆ ರೆಸ್ಟೋರೆಂಟ್ ಮತ್ತು ಹೋಟೆಲಿಯರ್ಸ್ ಅಸೋಸಿಯೇಶನ್ ನ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ,ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು,ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್ ಹೆಗ್ಡೆ, ಉದ್ಯಮಿ ಬಾಲಕೃಷ್ಣ ಹೆಗ್ಡೆ ಅವರು ಉಪಸ್ಥಿತ ರಿದ್ದು, ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಚಲನಚಿತ್ರದ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರು, ನಮ್ಮ ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿ ತುಂಬಾ ಶ್ರೀಮಂತವಾದುದು.ದೇವಾರಾಧನೆ, ಭೂತಾರಾಧನೆ ಕಟ್ಟು ಕಟ್ಟಳೆಗಳಿಂದ ಶ್ರೀಮಂತವಾಗಿದೆ. ನಾವು ವ್ಯಾಪಾರ ಉದ್ಯೋಗ ನಿಮಿತ್ತ ಪರ ರಾಜ್ಯದಲ್ಲಿ ಇದ್ದರೂ ನಮ್ಮ ಮಾತೃ ಭಾಷೆ ತುಳು ಎಂದರೆ ನಮಗೆ ಹೆಮ್ಮೆ. ಇಲ್ಲಿ ನಮ್ಮ ಊರಿನ ಸಂಸ್ಕೃತಿ , ಕಲೆ, ಆಚಾರ ವಿಚಾರಗಳ ಸಭೆ ಸಮಾರಂಭಗಳು ನಡೆದಾಗ ಹಬ್ಬದ ಸಂಭ್ರಮ ಇರುತ್ತದೆ. ಇಂದು ಕೂಡಾ ಮದಿಪು ಎಂಬ ತುಳು ಚಿತ್ರದ ಈ ಪ್ರದರ್ಶನದ ಕಾರ್ಯಕ್ರಮದಲ್ಲಿ ತುಳುತಾಯಿಯ ಮಕ್ಕಳು ನಾವು ಇಂದು ಒಂದಾಗಿ ಸೇರಿದ್ದೇವೆ. ಮದಿಪು ಚಿತ್ರ ನಮ್ಮ ತುಳುನಾಡಿನ ಭಾವೈಕ್ಯತೆಯನ್ನು ತೋರಿಸುವ ಚಿತ್ರವಾಗಿ ರಾಷ್ಟ್ರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಇಂತಹ ಚಿತ್ರವನ್ನು ಇಲ್ಲಿ ಪ್ರದರ್ಶನ ಏರ್ಪಡಿಸಿದ ಸಾಯಿ ಕ್ರಿಕೆಟರ್ಸ್ ನವರ ಕಾರ್ಯ ಶ್ಲಾಘನೀಯ. ಇಂತಹ ತುಳು ಸಂಸ್ಕೃತಿಯನ್ನು ಸಾದರಪಡಿಸುವ ಇನ್ನಷ್ಟು ಕಾರ್ಯಕ್ರಮಗಳು ಪುಣೆಯಲ್ಲಿ ನಡೆಯಲಿ ಎಂದು ಹಾರೈಸಿದರು.
ಅಥಿತಿ ಗಣ್ಯರಿಗೆ ಸಾಯಿ ಕ್ರಿಕೆಟರ್ಸ್ ನ ಪದಾಧಿಕಾರಿಗಳು ಪುಷ್ಪ$ಗುತ್ಛ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ವ್ಯವಸ್ಥಾಪಕರು ಈ ಚಿತ್ರ ಪ್ರದರ್ಶನಕ್ಕೆ ಸಹಕರಿಸಿದ ಪುಣೆಯ ಸಂಘ ಸಂಸ್ಥೆಗಳಿಗೆ , ಕಲಾಪೋಷಕರಿಗೆ ಹಾಗೂ ಎಲ್ಲಾ ತುಳು ಬಾಂಧದವರಿಗೆ ಧನ್ಯವಾದ ಸಲ್ಲಿಸಿದರು.ಸಾಯಿ ಕ್ರಿಕೆಟರ್ಸ್‌ನ ವಿಶ್ವನಾಥ್ ಶೆಟ್ಟಿ ಗೋಖಲೆನಗರ್, ಪ್ರಶಾಂತ್ ಶೆಟ್ಟಿ ಹಿರಿಯಡ್ಕ, ರಾಮ್ ಪ್ರಸಾದ್ ಶೆಟ್ಟಿ ಮುನಿಯಾಲ್, ಸಂಪತ್ ಹೆೆಗ್ಡೆ, ಕುಮಾರ್ ಶೆಟ್ಟಿ ಮೊದಲಾದವರು ಸಹಕರಿಸಿದರು.
ಮದಿಪು ಚಿತ್ರದ ಹೆಸರು ಸೂಚಿಸುವಂತೆ ಈ ಚಿತ್ರ ನಮ್ಮ ತುಳು ಸಂಸ್ಕೃತಿಯನ್ನು ಜಗತ್ತಿಗೆ ಎತ್ತಿ ತೋರಿಸಿದೆ. ರಾಷ್ಟ್ರ ರಾಜ್ಯ ಮಟ್ಟದಲ್ಲಿ ಹೆಸರನ್ನು ಪಡೆದ ಈ ಚಿತ್ರ ತುಳುವರೆಲ್ಲರೂ ನೋಡ ಲೇಬೇಕಾದ ಚಿತ್ರವಾಗಿದೆ. ನಮ್ಮ ಊರಿನಲ್ಲಿ ಹಿಂದಿ ನಿಂದ ನಡೆದುಕೊಂಡು ಬಂದ ದೈವಾರಾಧನೆ, ನಮ್ಮ ಸಾಮರಸ್ಯದ ಬದುಕು, ಆಚಾರ ವಿಚಾರ ಹೇಗಿತ್ತು ಎಂಬುದಕ್ಕೆ ಒಂದು ಒಳ್ಳೆಯ ಅಭಿರುಚಿಯನ್ನು ಹೊಂದಿರುವ ಚಿತ್ರವನ್ನು ನಿರ್ಮಿಸಿದ ಸಂದೀಪ್ ಕುಮಾರ್ ನಂದಳಿಕೆ ಮತ್ತು ನಿರ್ದೇಶಿಸಿದ ಚೇತನ್ ಮುಂಡಾಡಿ ಅವರ ಕಾರ್ಯ ಶ್ಲಾಘನೀಯ. ಈ ಚಿತ್ರವನ್ನು ಪುಣೆಯಲ್ಲಿ ಪ್ರದರ್ಶನವನ್ನು ಏರ್ಪಡಿಸಿ ತುಳುವರೆಲ್ಲರಿಗೂ ನೋಡಲು ಅವಕಾಶ ಮಾಡಿಕೊಟ್ಟ ಸಾಯಿ ಕ್ರಿಕೆಟರ್ಸ್‌ನ ವಸಂತ್ ಶೆಟ್ಟಿ ಮತ್ತು ಸುದೀಪ್ ಪೂಜಾರಿ ಹಾಗೂ ಮಿತ್ರ ವರ್ಗದವರ ಕಲಾಸೇವೆ ಕೂಡಾ ಮೆಚ್ಚುವಂತಹದು.
– ವಿಶ್ವನಾಥ್ ಪೂಜಾರಿ ಕಡ್ತಲ, ಉಪಾಧ್ಯಕ್ಷರು , ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ಸ್ ಅಸೋಸಿಯೇಶನ್.
ತುಳು ಕಲೆ, ಸಂಸ್ಕೃತಿ ಮತ್ತು ದೈವಾರಾಧನೆ ಯನ್ನು ಬಿಂಬಿಸುವ, ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಮದಿಪು ಚಿತ್ರ ತುಳುನಾಡಿನಲ್ಲಿ ಭಾರೀ ಯಶಸನ್ನು ಗಳಿಸಿದೆ ಎಂಬುದನ್ನು ನಾವು ಕೇಳಿದ್ದೇವೆ. ಎಲ್ಲಾ ಧರ್ಮದವರು ತಮ್ಮ ತಮ್ಮ ಧರ್ಮವನ್ನು ಗೌರವಿಸುತ್ತಾ ಅನ್ಯ ಧರ್ಮವನ್ನು ಗೌರವಿಸಿ ಸಾಮರಸ್ಯದಿಂದ ಬಾಳಿದರೆ ಸಮಾಜದಲ್ಲಿ ಪ್ರೀತಿ ಪ್ರೇಮದಿಂದ ಬದುಕಬಹುದು ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ. ನಮ್ಮ ಯುವ ಪೀಳಿಗೆಗೆ ಇಂತಹ ಚಿತ್ರವನ್ನು ತೋರಿಸುವ ಮೂಲಕ ತುಳು ಸಂಸ್ಕೃತಿಯನ್ನು ತಿಳಿಸುವ, ಕಲಿಸುವ ಕಾರ್ಯ ನಮ್ಮಿಂದಾಗಬೇಕು.
– ಪ್ರವೀಣ್ ಶೆಟ್ಟಿ ಪುತ್ತೂರು, ಅಧ್ಯಕ್ಷರು , ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ
ಚಿತ್ರ -ವರದಿ: ಹರೀಶ್ ಮೂಡಬಿದ್ರೆ