ಮಡಿಕೇರಿ: ವಿರಾಜಪೇಟೆ ತಾಲೂಕಿನ ಬೇತ್ರಿಯ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಇರಿಟ್ಟಿ ತಾಲೂಕಿನ ಮಂಟಪ ಪರಂಬುವಿನ ಸಲೀಂ ಟಿ.ಎ.(42) ಹಾಗೂ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಗಾಂಧಿ ನಗರದ ಸಂಜಯ್ ಕುಮಾರ್ ಅಲಿಯಾಸ್ ಸಂಜು(30) ಬಂಧಿತರು. ಬೆೇತ್ರಿಯಲ್ಲಿರುವ ನಾಸರ್ ಕೂರನ್ ಅವರ ಸೂಪರ್ ಮಾರ್ಕೆಟ್ ಅಂಗಡಿ ಮಳಿಗೆಯಿಂದ, ಬೀಗ ಒಡೆದು 25 ಸಾ.ರೂ. ಸಹಿತ ಸಿಗರೇಟ್ ಪ್ಯಾಕೆಟ್‌ಗಳನ್ನು ಆ.28 ರಂದು ಕಳವು ಮಾಡಲಾಗಿತ್ತು.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ತನಿಖೆೆ ನಡೆಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 11 ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಕಳವು ಮಾಡಿ ಕೃತ್ಯಕ್ಕೆ ಬಳಸುತ್ತಿದ್ದ ಸುಮಾರು 1.50 ಲ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳು ಮತ್ತು 9,050 ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೆೇತ್ರಿ ಅಂಗಡಿ ಮತ್ತು ಬಿಟ್ಟಂಗಾಲ ದೇವಸ್ಥಾನದ ಹುಂಡಿ ಕಳ್ಳತನದ 2 ಪ್ರಕರಣಗಳಲ್ಲಿ, ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ, ಸಿದ್ದಾಪುರ ಠಾಣೆ ಸರಹದ್ದಿನ ಪುಲಿಕಿಮಾಡು ದರ್ಗಾ ಭಂಡಾರ ಕಳ್ಳತನ, ಮಡಿಕೇರಿ ಗ್ರಾಮಾಂತರ ಠಾಣೆ ಸರಹದ್ದಿನ ಮೂರ್ನಾಡಿನ ಸತೀಶ್ ಅವರ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವುದು, ಮೈಸೂರು ನಗರದ ಅಶೋಕ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ದ್ವಿ ಚಕ್ರ ವಾಹನ ಕಳ್ಳತನದ 2 ಪ್ರಕರಣಗಳು, ಕೇರಳದ ಇರಿಟ್ಟಿ ಪೊಲೀಸ್ ಠಾಣೆಯ 3 ಕಳ್ಳತನ ಪ್ರಕರಣಗಳು ಮತ್ತು ಕೇರಳ ರಾಜ್ಯದ ಕೆಳಗಂ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಎಸ್‌ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.