ಬೆಂಗಳೂರು: ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ನಿವೃತ್ತ ಫಾರೆಸ್ಟ್ ಗಾರ್ಡ್ ನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ … ಮೂಲದ ನಾಗರಾಜ್ ಅಲಿ ಯಾಸ್ ಫಾರೆಸ್ಟ್ ನಾಗ (66) ಬಂಧಿತ. ಆರೋಪಿಯಿಂದ 2.5 ಲಕ್ಷ ರೂ. ನಗದು ಹಾಗೂ 25 ಲಕ್ಷ ರೂ. ಮೌಲ್ಯದ 208 ಗ್ರಾಂ ಚಿನ್ನಾಭರಣ, 1 ಕೆ.ಜಿ 100 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ಕೋಣನ ಕುಂಟೆ ಕ್ರಾಸ್ನಲ್ಲಿರುವ ದೂರು ದಾರರ ಮನೆಯ ಬಾಗಿಲು ಮುರಿದು 182 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು 5 ಲಕ್ಷ ರೂ. ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ ದಾಗ ಆರೋಪಿಯ ಬಗ್ಗೆ ಸುಳಿವು ಸಿಕ್ಕಿದ್ದು, ಅತ್ತಿಬೆಲೆಯ ಬಸ್ ನಿಲ್ದಾಣದ ಬಳಿ ನಾಗರಾಜ್ನನ್ನು ಬಂಧಿಸಲಾಯಿತು. ಕೆಜಿಎಫ್ ಮೂಲದ ಆರೋಪಿ ನಾಗರಾಜ್, ಈ ಹಿಂದೆ ರಾಮನಗರ, ಕೋಲಾರ ಸೇರಿ ವಿವಿಧೆಡೆ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. 2008ರಲ್ಲಿ ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾನೆ. ನಂತರ ಮನೆ ಕಳ್ಳತನ ಮಾಡುವುದನ್ನೇ ವೃತ್ತಿಯ ನ್ನಾಗಿಸಿ ಕೊಂಡಿದ್ದಾನೆ. ಬಂದ ಹಣದಲ್ಲಿ ಮನೆ ನಿರ್ವಹಣೆ, ಮೋಜಿನ ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಸ್ನೇಹಿತ ಮತ್ತು ಭಾಮೈದನಿಗೆ ಕೊಟ್ಟಿದ್ದ. ಈ ಮಾಹಿತಿ ಮೇರೆಗೆ ಅವರ ಮನೆಗಳಿಗೆ ತೆರಳಿ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ಪುಟ್ಟೇನಹಳ್ಳಿ, ಸುಬ್ರಹ್ಮಣ್ಯಪುರ, ಮಹಾಲಕ್ಷ್ಮೀ ಲೇಔಟ್, ಮಡಿವಾಳ, ಜೆ.ಪಿ.ನಗರ ಸೇರಿ ನೆರೆ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿವೆ.