ಶ್ರೀಮುರಳಿ ಅಭಿನಯದ “ಮದಗಜ’ ಚಿತ್ರ ಈಗಾಗಲೇ ಮೊದಲ ಹಂತದ ಶೇ.30 ರಷ್ಟು ಚಿತ್ರೀಕರಣ ಮುಗಿಸಿದೆ. ಎರಡನೇ ಹಂತಕ್ಕೆ ತಯಾರಾಗುವ ಹೊತ್ತಲ್ಲೇ ಲಾಕ್ ಡೌನ್ ಘೋಷಣೆಯಾಗಿದೆ. ಈಗ ಲಾಕ್‌ಡೌನ್ ಸಡಿಲಗೊಂಡಿದ್ದು, ಜುಲೈ 6 ರಿಂದ “ಮದಗಜ’ ಚಿತ್ರಕ್ಕೆ ಚಾಲನೆ ಸಿಗಲಿದೆ. ಈ ಚಿತ್ರಕ್ಕೆ ನಟಿ ಆಶಿಕಾ ನಾಯಕಿಯಾಗಿದ್ದಾರೆ. ಈವರೆಗೆ ಶ್ರೀಮುರಳಿ ಅವರ ಭಾಗದ ಚಿತ್ರೀಕರಣ ಮಾತ್ರ ನಡೆದಿದೆ.
ಆಶಿಕಾ ಅವರ ಭಾಗದ ಚಿತ್ರೀಕರಣವಿನ್ನೂ ಶುರುವಾಗಿಲ್ಲ. ಜು.6ರಿಂದ ಆಶಿಕಾ “ಮದಗಜ’ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೈಸೂರು ಹಾಗೂ ಗುಂಡ್ಲುಪೇಟೆ ಸುತ್ತಮುತ್ತಲ ಸ್ಥಳಗಳಲ್ಲಿ ಒಂದೇ ಹಂತದ 46 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಚನೆ ನಿರ್ದೇಶಕ ಮಹೇಶ್ ಕುಮಾರ್ ಅವರಿಗಿದೆ. ಸದ್ಯಕ್ಕೆ ನಿರ್ದೇಶಕರು ಹಾಡುಗಳ ತಯಾರಿಯಲ್ಲಿದ್ದಾರೆ.
ಈಗಾಗಲೇ ಸಂಗೀತ ನಿರ್ದೇಶಕ ರವಿಬಸ್ರೂರ್ ಅವರು ಹಾಡುಗಳಿಗೆ ರಾಗ ಸಂಯೋಜಿಸಿದ್ದು, ಟ್ರ್ಯಾಕ್ ಹಾಡಿಸ್ತಾ ಇದ್ದಾರೆ. “ಬಹದ್ದೂರ್’ ಚೇತನ್ ಕುಮಾರ್, ರವಿಬಸ್ರೂರ್, ಕಿನ್ನರ ರಾಜ್ ಬರೆದಿರುವ ನಾಲ್ಕು ಹಾಡುಗಳು ರೆಡಿಯಾಗಿವೆ. ಸದ್ಯಕ್ಕೆ ಗಾಯಕ ಸಂತೋಷ್ ವೆಂಕಿ ಅವರು ಟ್ರ್ಯಾಕ್ ಹಾಡಿದ್ದಾರೆ. ಕೈಲಾಶ್ ಖೇರ್, ಕಾಲ ಭೈರವ, ಶ್ರೇಯಾಘೋಷಾಲ್ ಇತರರು ಹಾಡಲಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಮಹೇಶ್‌ಕುಮಾರ್, ಸದ್ಯ ಲಾಕ್‌ಡೌನ್ ತೆರವಾಗಿದೆ. ಚಿತ್ರೀಕರಣಕ್ಕೆ ಅನುಮತಿ ಕೊಟ್ಟರೆ, ನಾವು ಶೂಟಿಂಗ್‌ಗೆ ಹೋಗುವ ತಯಾರಿ ಮಾಡಿಕೊಂಡಿದ್ದೇವೆ. ಇಷ್ಟೊತ್ತಿಗಾಗಲೇ ಚಿತ್ರೀಕರಣ ಮುಗಿಯಬೇಕಿತ್ತು. ಆದರೆ, ಲಾಕ್‌ಡೌನ್ ಘೋಷಣೆಯಾಯಿತು. ಆದಷ್ಟು ಬೇಗ ಚಿತ್ರೀಕರಣ ಶುರುವಾದರೆ, ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸಿ, ಎಲ್ಲಾಕೆಲಸಗಳನ್ನು ಮಾಡಿಕೊಂಡು ಡಿಸೆಂಬರ್ 25 ರಂದು ಬಿಡುಗಡೆ ಮಾಡುವ ಯೋಚನೆ ಮಾಡಲಾಗಿದೆ ಎನ್ನುತ್ತಾರೆ ಮಹೇಶ್ ಕುಮಾರ್.
ಚಿತ್ರಕ್ಕೆ ನವೀನ್‌ಕುಮಾರ್ ಛಾಯಾಗ್ರಹಣವಿದೆ. ಹರೀಶ್ ಗೊಂಬೆ ಸಂಕಲನವಿದೆ. ಮೋಹನ್ ಬಿ.ಕೆ.ರೆ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ, ಚಿಕ್ಕಣ್ಣ, ರಂಗಾಯಣ ರಘು ಜೊತೆ ಅನೇಕರು ನಟಿಸುತ್ತಿದ್ದಾರೆ. ವಿಶೇಷವೆಂದರೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಪರಭಾಷೆಯ ಖಳನಟರನ್ನು ಕರೆತರಲಾಗುತ್ತಿದೆ. ಹಾಗೆಯೇ ಅವರ ಅಮ್ಮನ ಪಾತ್ರಕ್ಕೂ ಪರಭಾಷೆಯ ಕಲಾವಿದರೇ ಇರಲಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ.