ಬೆಂಗಳೂರು: ಎಲೆಕ್ಟ್ರಿಕ್ ಚಾರ್ಜಿಂಗ್ ನೆಟ್ ವರ್ಕ್ ಕಂಪೆನಿ ರಿಬೋಲ್ಟ್ ವಿದ್ಯುತ್ ವಾಹನ ಮಾಲೀಕರಿಗಾಗಿ ಅನುಕೂಲಕರ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದೆ. ಈ ಯೋಜನೆಯನ್ನು ಇದೇ ವರ್ಷ ಜುಲೈನಲ್ಲಿ ಆರಂಭಿಸಲಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿರುವ ಲುಲು ಗ್ಲೋಬಲ್ ಮಾಲ್‌ನಲ್ಲಿ ಏಳನೆ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಅನ್ನು ಇತ್ತೀಚಿಗೆ ಆರಂಭಿಸಿದೆ.
ಪ್ರಸ್ತುತ ಸಂಸ್ಥೆ 15 ಸಾರ್ವಜನಿಕ ಚಾರ್ಜಿಂಗ್ ಸ್ಥಳಗಳನ್ನು ನಾಲ್ಕು ಚಕ್ರದ ವಾಹನಗಳಿಗಾಗಿ ಈ ಸ್ಥಳಗಳಲ್ಲಿ ನಡೆಸುತ್ತಿದೆ. ಜೊತೆಗೆ ಖಾಸಗಿ ಮತ್ತು ಅರೆ ಖಾಸಗಿ ಚಾರ್ಜಿಂಗ್ ಪಾಯಿಂಟ್‌ಗಳ ಸರಣಿಯನ್ನು ಅಪಾರ್ಟ್‌ಮೆಂಟ್‌ಗಳು, ರೆಸಾರ್ಟ್‌ಗಳು ಮತ್ತು ಕಚೇರಿ ಸ್ಥಳಗಳಲ್ಲಿ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ರಿಬೋಲ್ಟ್ ಸಹಸ್ಥಾಪಕ ಸುನೀಲ್ ಪ್ರಭಾಕರ್ ಅವರು ಮಾತನಾಡಿ, ವಿದ್ಯುತ್ ವಾಹನಗಳನ್ನು ಬೃಹತ್ ಸಂಖ್ಯೆಯಲ್ಲಿ ಬಳಕೆಗೆ ಅಳವಡಿಸಿಕೊಳ್ಳಲು ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಪ್ರಮುಖ ಹಿನ್ನಡೆಯಾಗಿದೆ. ಜನರು ಸಾಮಾನ್ಯವಾಗಿ ಕೆಲವು ಗಂಟೆಗಳ ಕಾಲ ಕಳೆಯುವಂತಹ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಇವಿ ಚಾರ್ಜರ್‌ಗಳನ್ನು ಸ್ಥಾಪಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ನಾವು ಯತ್ನಿಸುತ್ತಿದ್ದೇವೆ. ಇದರಿಂದ ಜನರು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿರುವಾಗ ಅವರ ವಾಹನ ಶೇ.50ರಿಂದ 60ರಷ್ಟು ಚಾರ್ಜಿಂಗ್ ಆಗುತ್ತದೆ. ಹೀಗೆ ಮಾಡುವಲ್ಲಿ ನಾವು ಪ್ರಮುಖ ಸಂಸ್ಥೆಗಳಾದ ಮೈಕ್ರೋ ಬ್ರೆವರಿಗಳು, ಕಾಫಿ ಶಾಪ್‌ಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಕ್ರೀಡಾ ಮಲ್ಟಿಫ್ಲೆಕ್ಸ್ ಗಳ ಜೊತೆ, ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಖಾಸಗಿ ಚಾರ್ಜಿಂಗ್ ಕಡೆಗೆ ನಾವು ಗಮನ ಕೇಂದ್ರೀಕರಿಸಿದ್ದೇವೆ. ಬೃಹತ್ ಅಪಾರ್ಟ್‌ಮೆಂಟ್ ಕಚೇರಿಗಳು ಮತ್ತು ರೆಸಾರ್ಟ್‌ಗಳಲ್ಲಿ ರಿಬೋಲ್ಟ್ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುತ್ತಿದೆ ಎಂದರು.
ಬಳಕೆದಾರರ ಸ್ನೇಹಿಯಾದಂತಹ ರಿಬೋಲ್ಟ್ ಆ್ಯಪ್‌ನೊಂದಿಗೆ ವಿದ್ಯುತ್ ವಾಹನ ಮಾಲೀಕರು ಮ್ಯಾಪ್‌ನಲ್ಲಿ ಚಾರ್ಜರ್‌ಗಳನ್ನು ಸುಲಭವಾಗಿ ಹುಡುಕಿಕೊಂಡು ಮುಂಚಿತವಾಗಿ ಚಾರ್ಜಿಂಗ್ ಸ್ಲಾಟ್ ಅನ್ನು ಬುಕ್ಕಿಂಗ್ ಮಾಡಬಹುದು. ಚಾರ್ಜಿಂಗ್ ಸ್ಟೇಷನ್‌ನಲ್ಲಿ ಇವಿ ಮಾಲೀಕರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಚಾರ್ಜಿಂಗ್ ಆರಂಭಿಸಬಹುದು. ಚಾರ್ಜಿಂಗ್ ಅವಧಿ ಮುಕ್ತಾಯವಾದ ನಂತರ ಅವರ ವ್ಯಾಲೆಟ್‌ನಿಂದ ಸ್ವಯಂಚಾಲಿತವಾಗಿ ಹಣ ಪಡೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ: ಮಲ್ಪೆ: ಮೀನುಗಾರರ ಬಲೆಗೆ ಬಿತ್ತು 23 ಕೆ.ಜಿ. ತೂಕದ ಮೀನು… ಬರೋಬ್ಬರಿ 2.44 ಲಕ್ಷ ರೂ.ಗೆ ಬಿಕರಿ!