Advertisement

ಆಘಾತಕಾರಿ ಪಿಚ್‌ ಲಕ್ನೋ ಕ್ಯುರೇಟರ್‌ ವಜಾ

11:31 PM Jan 31, 2023 | Team Udayavani |

ಲಕ್ನೋ: ಭಾರತ- ನ್ಯೂಜಿಲ್ಯಾಂಡ್‌ ನಡುವಿನ ಟಿ20 ಪಂದ್ಯಕ್ಕಾಗಿ “ಆಘಾತಕಾರಿ’ ಪಿಚ್‌ ನಿರ್ಮಿಸಿದ ಲಕ್ನೋದ “ಏಕಾನಾ ಕ್ರಿಕೆಟ್‌ ಸ್ಟೇಡಿಯಂ’ನ ಕ್ಯುರೇಟರ್‌ ಅವರನ್ನು ಈ ಹುದ್ದೆಯಿಂದ ವಜಾಗೊಳಿಸಲಾಗಿದೆ.

Advertisement

ರವಿವಾರ ನಡೆದ ಈ ಪಂದ್ಯ ದಲ್ಲಿ ಸ್ವಲ್ಪವೂ ಟಿ20 ಜೋಶ್‌ ಕಂಡು ಬಂದಿರಲಿಲ್ಲ. ಒಂದೇ ಒಂದು ಸಿಕ್ಸರ್‌ ಸಿಡಿಯಲಿಲ್ಲ. ಸ್ಪಿನ್‌ ಬೌಲರ್ ಹೊರತುಪಡಿಸಿ ಬೇರೆ ಯಾರಿಗೂ ಇಲ್ಲಿನ ಟ್ರ್ಯಾಕ್‌ ನೆರವು ನೀಡಿರಲಿಲ್ಲ. ನ್ಯೂಜಿಲ್ಯಾಂಡ್‌ 8 ವಿಕೆಟಿಗೆ ಕೇವಲ 99 ರನ್‌ ಗಳಿಸಿತ್ತು. ಈ ಸಣ್ಣ ಮೊತ್ತವನ್ನು ಮೀರಿ ನಿಲ್ಲಲು ಭಾರತ 19.5 ಓವರ್‌ ತೆಗೆದುಕೊಂಡಿತ್ತು.

ಪಂದ್ಯದ ಬಳಿಕ ಟೀಮ್‌ ಇಂಡಿಯಾ ನಾಯಕ ಇದೊಂದು “ಆಘಾತಕಾರಿ ಪಿಚ್‌’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಿಚ್‌ ಕುರಿತು ಮಾಧ್ಯ ಮದವರು ಬೌಲಿಂಗ್‌ ಕೋಚ್‌ ಪರಸ್‌ ಮ್ಹಾಂಬ್ರೆ ಅವರನ್ನು ಪ್ರಶ್ನಿಸಿದಾಗ, “ನೀವು ಕ್ಯುರೇಟರ್‌ ಅವರನ್ನೇ ವಿಚಾರಿಸಿ’ ಎಂದು ಖಡಕ್‌ ಉತ್ತರ ಕೊಟ್ಟಿದ್ದರು.

“ಈ ಪಿಚ್‌ ನಿರ್ಮಿಸಿದ ಕ್ಯುರೇಟರ್‌ ಅವರನ್ನು ವಜಾಗೊಳಿಸಲಾಗಿದೆ. ಇವರ ಸ್ಥಾನಕ್ಕೆ ಸಂಜೀವ್‌ ಕುಮಾರ್‌ ಅಗರ್ವಾಲ್‌ ಅವರನ್ನು ನೇಮಿಸ ಲಾಗಿದೆ. ಒಂದು ತಿಂಗಳಲ್ಲಿ ಎಲ್ಲವೂ ಸರಿಹೋಗುತ್ತದೆ’ ಎಂಬುದಾಗಿ ಉತ್ತರಪ್ರದೇಶ ಕ್ರಿಕೆಟ್‌ ಮಂಡಳಿಯ (ಯುಪಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಳಿ ಸಮಜಾಯಿಶಿ
ಇಲ್ಲಿನ ಎಲ್ಲ “ಸೆಂಟರ್‌ ವಿಕೆಟ್‌’ಗಳ ಮೇಲೆ ಸಾಕಷ್ಟು ದೇಶಿ ಪಂದ್ಯಗಳನ್ನು ಆಡಲಾಗಿತ್ತು. ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಕ್ಯುರೇಟರ್‌ ಎರಡು ಸ್ಟ್ರಿಪ್‌ಗ್ಳನ್ನು ಹಾಗೆಯೇ ಉಳಿಸಿದ್ದರು. ಆದರೆ ಫ್ರೆಶ್‌ ವಿಕೆಟ್‌ ತಯಾರಿಸಲು ಸಮಯ ಸಾಕಾಗಲಿಲ್ಲ’ ಎಂಬುದು ಯುಪಿಸಿಎ ಮೂಲವೊಂದು ತಿಳಿಸಿದೆ.

Advertisement

ನೂತನ ಕ್ಯುರೇಟರ್‌ ಸಂಜೀವ್‌ ಕುಮಾರ್‌ ಅಗರ್ವಾಲ್‌ ಇದಕ್ಕೂ ಮುನ್ನ ಬಾಂಗ್ಲಾದೇಶದಲ್ಲಿ ಪಿಚ್‌ ನಿರ್ಮಿಸಿದ ಅನುಭವ ಹೊಂದಿದ್ದರು. ಇವರಿನ್ನು ಬಿಸಿಸಿಐನ ಹಿರಿಯ ಕ್ಯುರೇಟರ್‌ ತಪೋಶ್‌ ಚಟರ್ಜಿ ಜತೆಗೂಡಿ ಕರ್ತವ್ಯ ನಿಭಾಯಿಸಲಿದ್ದಾರೆ.

ಕೊನೆಯ ಕ್ಷಣದಲ್ಲಿ ಪಿಚ್‌ ಬದಲು?
ಒಂದು ಮೂಲದ ಪ್ರಕಾರ, ಭಾರತೀಯ ತಂಡದ ಆಡಳಿತ ಮಂಡಳಿ ಕೊನೆಯ ಕ್ಷಣದಲ್ಲಿ ಪಿಚ್‌ ಬದಲಿಸುವಂತೆ ಸೂಚಿಸಿತ್ತು ಎನ್ನಲಾಗಿದೆ. ಈ ಪಂದ್ಯಕ್ಕಾಗಿ ಕ್ಯುರೇಟರ್‌ ಕಪ್ಪು ಮಣ್ಣಿನ ಎರಡು ಪಿಚ್‌ಗಳನ್ನು ನಿರ್ಮಿಸಿದ್ದರು. ಆದರೆ ಪಂದ್ಯಕ್ಕೆ ಕೇವಲ 3 ದಿನ ಇರುವಾಗ ಟೀಮ್‌ ಇಂಡಿಯಾದ ಆಡಳಿತ ಮಂಡಳಿ ಇದನ್ನು ಬದಲಿಸಿ ಕೆಂಪು ಮಣ್ಣಿನ ಪಿಚ್‌ ನಿರ್ಮಿಸಲು ಸೂಚಿಸಿತು. ಕ್ಯುರೇಟರ್‌ ಈ ಆದೇಶವನ್ನು ಪಾಲಿಸಿದರು. ಆದರೆ ಇದಕ್ಕೆ ಫಿನಿಶಿಂಗ್‌ ಟಚ್‌ ಕೊಡಲು ಸಮಯಾವಕಾಶ ಸಿಗಲಿಲ್ಲ. ಇದರ ಪರಿಣಾಮವೆಂಬಂತೆ, ಪಿಚ್‌ ತೀರಾ ನಿಧಾನ ಗತಿಯಿಂದ ವರ್ತಿಸಿತು ಎಂದು ವರದಿಯೊಂದು ತಿಳಿಸಿದೆ.ಹಾಗದರೆ ಕ್ಯುರೇಟರ್‌ ಬಲಿಪಶುವಾದರೇ? ಪ್ರಶ್ನೆ ಉದ್ಭವಿಸುವುದು ಸಹಜ.

Advertisement

Udayavani is now on Telegram. Click here to join our channel and stay updated with the latest news.

Next