Advertisement

ಮೊಗಪ್ಪೆ ಕೆರೆಯಲ್ಲಿ ಮೊಗೆದಷ್ಟೂ ನೀರು

11:38 AM Apr 13, 2018 | |

ಸುಳ್ಯ: ಕಳೆದ ಬೇಸಗೆಯಲ್ಲಿ ಜನರೇ ಸ್ವಯಂಪ್ರೇರಿತವಾಗಿ ಹೂಳು ತೆಗೆಯುವ ಅಭಿಯಾನಕ್ಕೆ ಮುಂದಾಗಿದ್ದ ನೆಟ್ಟಾರಿನ
ಮೊಗಪ್ಪೆ ಕೆರೆಯ ಕಾಮಗಾರಿ ನಡೆದ ಸ್ಥಳದಲ್ಲಿ ನೀರು ನಿಂತಿದೆ. ಈ ಬಾರಿ ಮತ್ತೆ ಬಗೆದರೆ, ಮೊಗೆದಷ್ಟು ನೀರು ಚಿಮ್ಮಬಹುದು. 

Advertisement

ಕಳೆದ ವರ್ಷ ಸಂಘ-ಸಂಸ್ಥೆಗಳು, ದಾನಿಗಳು ಕೆರೆ ಹೂಳೆತ್ತುವ ನಿರ್ಧಾರ ಕೈಗೊಂಡರು. ಮೊಗಪ್ಪೆ ಕೆರೆ ಅಭಿವೃದ್ಧಿ ಸಮಿತಿ ರಚಿಸಿ, ಸ್ವಯಂಪ್ರೇರಿತ ನೆಲೆಯಲ್ಲಿ ಮುಂದಾದ ಕೆರೆ ಸಂರಕ್ಷಣೆಗೆ ಮುಂದಾದ ಪ್ರಯತ್ನದ ಫಲವಾಗಿ ಹೂಳು ತುಂಬಿದ ಒಂದೆಡೆ ಹತ್ತಾರು ಅಡಿಗಳಷ್ಟು ಮಣ್ಣು ತೆಗೆಯಲಾಗಿತ್ತು. ಕೆರೆ ಸ್ವರೂಪ ಪಡೆದು ಕೊಂಡು, ಈ ಬಾರಿ ಅಲ್ಲಿ ನೀರು ನಿಂತಿದೆ. ಮಳೆ ಬಂದ ಕಾರಣ, ಹೂಳು ತೆಗೆಯಲು ಸಾಧ್ಯವಾಗಲಿಲ್ಲ. ಈ ಬೇಸಗೆಯಲ್ಲಿ ಮತ್ತೆ ಮುಂದುವರಿದ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ನಡೆದಿದೆ.

ಮೊಗಪ್ಪೆ ಕೆರೆ
ಬೆಳ್ಳಾರೆ ಗ್ರಾ.ಪಂ. ವ್ಯಾಪ್ತಿಯ ನೆಟ್ಟಾರಿನಲ್ಲಿರುವ ಮೊಗಪ್ಪೆ ಕೆರೆಗೆ ಶತಮಾನದ ಇತಿಹಾಸ ಇದೆ. ಬರೋಬ್ಬರಿ 10 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆ ನೆಟ್ಟಾರು, ಬೆಳ್ಳಾರೆ, ಪೆರುವಾಜೆ ಗ್ರಾಮದ ಆಸುಪಾಸಿಗೆ ಜಲ ಸಂಜೀವಿನಿಯಾಗಿತ್ತು. ನೀರಿಗೆ ಪರ್ಯಾಯ ಕಂಡುಕೊಂಡ ಮೇಲೆ ಕೆರೆಯ ನೀರಿನ ಬಳಕೆ ನಿಂತಿತ್ತು.

ಹಿಂದಿನ ಕಾಲದಲ್ಲಿ ನೆಟ್ಟಾರಿನಿಂದ ಅಜಪಿಲ ಬೂಡಿನ ತನಕ ನೀರುಣಿಸಿತ್ತು. ಸರಕಾರಕ್ಕೆ ವಾರ್ಷಿಕ 1,250 ರೂ. ತೆರಿಗೆ ಪಾವತಿಸಲಾಗುತ್ತಿತ್ತು. ಗದ್ದೆಗೆ 25 ರೂ., ತೋಟಕ್ಕೆ 36 ರೂ., ನಿರ್ವಹಣೆ ವೆಚ್ಚಕ್ಕೆ 8 ರೂ.ನಷ್ಟು ತೆರಿಗೆ ನೀರಿನ ಬಳಕೆದಾರರು ಪಾವತಿಸುತ್ತಿದ್ದರು. ಕೆರೆಯ ಎರಡು ದಿಕ್ಕಿನ ಗುಡ್ಡ ಪ್ರದೇಶದಿಂದ ಮಳೆ ನೀರು, ಒರತೆ ನೀರು ಹರಿದು ಬಂದು ಪ್ರಕೃತ್ತಿದತ್ತವಾಗಿ ಈ ಕೆರೆ ರೂಪು ಗೊಂಡಿತ್ತು. 

ನಾಲ್ಕೈದು ಆಳು ಆಳದಲ್ಲಿದ್ದ ಈ ಕೆರೆಗೆ ಕಾಡಂಚಿನಿಂದ ಬರುವ ಹೂಳು ಕೂಡ ಸೇರುತ್ತದೆ. ವರ್ಷಂಪ್ರತಿ ನಿರ್ವಹಣೆ ಕೊರತೆಯಿಂದ ಹೂಳು ತುಂಬಿ ಆಳ ನೀಗಿತ್ತು. ಈಗ ಕೆರೆ ಸಮತಟ್ಟಾಗಿದ್ದು, ನೀರು ನಿಲ್ಲುವ ಪ್ರಮಾಣ ಕಮ್ಮಿಯಾಗಿತ್ತು. ಕೆರೆಯ ವ್ಯಾಪ್ತಿ ಸಂಕುಚಿತಗೊಂಡಿದೆ. ಹಾಗಾಗಿ ಕಳೆದ ಬಾರಿ ಸಾರ್ವಜನಿಕ ಸಹಭಾಗಿತ್ವ ದಲ್ಲಿಯೇ ಕೆರೆ ಪುನರುಜ್ಜೀವನದ ಸಂಕಲ್ಪ ಮಾಡಲಾಗಿತ್ತು.

Advertisement

ಹೀಗೆ ನಡೆಯಿತು ಅಭಿಯಾನ
ಅಭಿಯಾನ ನಡೆದ ರೀತಿಯೇ ವಿಶೇಷ. ಇಲ್ಲಿ ಹೂಳುಎತ್ತುವುದು ಯಂತ್ರ ದಲ್ಲಿ. ಹೂಳು ಎತ್ತಲು ಆರ್ಥಿಕ ಸಹಾಯ ಜನರದ್ದು. ಅಂದರೆ ಯಂತ್ರದಲ್ಲಿ ಒಂದು ಗಂಟೆ ಹೊಳೆತ್ತಲು 950 ರೂ. ಆಗಿದ್ದರೆ, ಅಭಿಯಾನದಲ್ಲಿ ಹೂಳೆತ್ತಲು ಹೆಸರು ನೋಂದಾಯಿಸಿದ ವ್ಯಕ್ತಿ ಹಣ ಪಾವತಿಸ ಬೇಕು. ಆತ ನನ್ನ ಪರವಾಗಿ ಇಂತಿಷ್ಟು ಗಂಟೆ ಎಂದು ನೋಂದಾಯಿಸಬೇಕು. ಅಷ್ಟು ಅವಧಿಯ ಮೊತ್ತ ನೀಡಬೇಕು. ಕಳೆದ ಬಾರಿ 450ಕ್ಕೂ ಹೆಚ್ಚು ತಾಸಿನ ಅವಧಿಗೆ ಹೂಳೆತ್ತಲು ಹೆಸರು ನೋಂದಣಿ ಆಗಿತ್ತು. ಸುಮಾರು 150 ಗಂಟೆಯ ಕೆಲಸವೂ ಪೂರ್ಣವಾಗಿದೆ. ಮಳೆ ಬಂದ ಕಾರಣ, ಅರ್ಧದಲ್ಲಿ ನಿಂತ ಅಭಿಯಾನ ಈ ಬಾರಿ ಮತ್ತೆ ಆರಂಭಗೊಳ್ಳಲಿದೆ.

ನೀರು ತುಂಬಿದೆ
ಹೂಳೆತ್ತಿದ್ದ ಜಾಗದಲ್ಲಿ ಈ ಬಾರಿ ನೀರು ನಿಂತಿದೆ. ಎಪ್ರಿಲ್‌ ಮೊದಲ ವಾರ ದಾಟಿದರೂ ಹೊಂಡದಲ್ಲಿ ನೀರಿದೆ. 6 ಎಕರೆಯಷ್ಟು ಪ್ರದೇಶದಲ್ಲಿ ಇದೇ ಆಳದಲ್ಲಿ ಕೆರೆ ಹೂಳೆತ್ತಿದ್ದರೆ ಬೇಸಗೆಯಿಡಿ ಈ ಕೆರೆಯಲ್ಲಿ ನೀರು ಬತ್ತದು. ಜತೆಗೆ ಕೆರೆ ಸುತ್ತಲೂ ವಿವಿಧ ಹಣ್ಣಿನ ಗಿಡ, ವಾಕಿಂಗ್‌ ಮಾರ್ಗ ನಿರ್ಮಿಸುವ ಪ್ರಸ್ತಾಪವೂ ಇದೆ. ಇದಕ್ಕೆ ಸರಕಾರದಿಂದ ಅನುದಾನ ತರಿಸುವ ಪ್ರಯತ್ನವು ಪ್ರಗತಿಯಲ್ಲಿದೆ.

ಜನರಿಗೆ ಅನುಕೂಲ
ಈ ಕೆರೆ ಸದ್ಬಳಕೆಯಿಂದ ಜನರಿಗೆ ಪ್ರಯೋಜನವಿದೆ. ಬೇಸಗೆ ಕಾಲದಲ್ಲಿ ನೀರು ನಿಂತಲ್ಲಿ ಆಸುಪಾಸಿನ ಪ್ರದೇಶಗಳ ಕೃಷಿಗೆ, ಕುಡಿಯುವ ನೀರಿಗೆ ಬರ ಬಾರದು. ಕಳೆದ ಬಾರಿ ಅಭಿಯಾನ ರೂಪದಲ್ಲಿ ಹಮ್ಮಿಕೊಂಡ ಹೂಳೆತ್ತುವಿಕೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡ ಬಳಿಕ, ಮೊಗಪ್ಪೆ ಕೆರೆ ಮಾದರಿ ಕೆರೆಯಾಗಿ ಬದಲಾಗಲಿದೆ.
– ಪ್ರವೀಣ್‌ ಚಾವಡಿಬಾಗಿಲು
ಅಧ್ಯಕ್ಷರು, ಅಕ್ಷಯ ಯುವಕ ಮಂಡಲ, ನೆಟ್ಟಾರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next