Advertisement

Sanoor ಹೆದ್ದಾರಿಯಲ್ಲಿ ಸಮಸ್ಯೆಗಳು ಸಾವಿರಾರು

04:13 PM Aug 06, 2024 | Team Udayavani |

ಕಾರ್ಕಳ: ಬಿಕರ್ನಕಟ್ಟೆ- ಸಾಣೂರು-ಕಾರ್ಕಳ ಚತುಷ್ಪಥ ಹೆದ್ದಾರಿ ನಿರ್ಮಾಣದ ಅರೆಬರೆ ಕಾಮಗಾರಿಯಿಂದಾಗಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಗೊಂಡಿದೆ. ಮಳೆಗೆ ಈಗಾಗಲೇ ಹಲವು ಕಡೆ ರಾದ್ಧಾಂತಗಳೇ ನಡೆದಿವೆ. ಕಳೆದ ಮಳೆಗಾಲದಲ್ಲೂ ಇದೇ ರೀತಿ ಆಗಿದ್ದರೂ ಪಾಠ ಕಲಿತಿಲ್ಲ. ಬಹುರೂಪಿಯಾಗಿ ತೆರೆದುಕೊಂಡ ಇಲ್ಲಿನ ಸಮಸ್ಯೆಗಳಿಗೆ ತುರ್ತಾಗಿ ಚಿಕಿತ್ಸೆ ಆಗಬೇಕಿದೆ.

Advertisement

ಅದರಲ್ಲೂ ಸಾಣೂರಿನಿಂದ ಕಾರ್ಕಳದವರೆಗೆ ನಡೆಯುತ್ತಿರುವ ಕಾಮಗಾರಿ ಅವ್ಯವಸ್ಥೆಯ ಗೂಡಾಗಿದೆ. ಇಲ್ಲಿ ಸರಿಯಾಗಿ ಚರಂಡಿಗಳ ನಿರ್ಮಾಣವಾಗದೆ ತಗ್ಗು ಪ್ರದೇಶಗಳಿಗೆ ನೀರು ಹರಿದು ತುಂಬುತ್ತಿದೆ. ಮನೆ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಅವಾಂತರಗಳು ಸಂಭವಿಸಿವೆ.

ಸೇತುವೆ ನಿರ್ಮಾಣದಿಂದ ಕಿರಿಕಿರಿ

ಸಾಣೂರು ರಾ.ಹೆದ್ದಾರಿಯಲ್ಲಿ ಹೊಸ ಸೇತುವೆಗೆ ಪಿಲ್ಲರ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸುತ್ತಲೂ ಮಣ್ಣು ರಾಶಿ ಹಾಕಿರುವುದರಿಂದ ಮಳೆ ನೀರು ಪಕ್ಕದ ಗದ್ದೆಗಳಿಗೆ ನುಗ್ಗಿ ಕೃತಕ ನೆರೆ ಉಂಟಾಗಿದೆ. ಸೇತುವೆ ನಿರ್ಮಾಣ ಕಾರ್ಯ ಕೂಡಲೇ ಪೂರ್ಣಗೊಳಿಸಬೇಕಿದೆ.

ರಸ್ತೆ ಕಾಮಗಾರಿ ನಡೆಯುವ ಅಕ್ಕಪಕ್ಕದಲ್ಲಿ ಮಣ್ಣು, ಕಬ್ಬಿಣದ ಸಾಮಗ್ರಿಗಳನ್ನು ಅಲ್ಲಲ್ಲಿ ರಾಶಿ ಹಾಕಲಾಗಿದ್ದು, ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಕೂಡಲೇ ಅದನ್ನು ತೆರವುಗೊಳಿಸುವುದು ಅಗತ್ಯವಾಗಿದೆ.

Advertisement

ಬೀದಿ ದೀಪಗಳಿಲ್ಲದೆ ಸಂಚಾರ ಕಷ್ಟ

ಬೀದಿ ದೀಪಗಳಿಲ್ಲದೆ ರಾತ್ರಿ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಕನಿಷ್ಠ ಸರ್ವಿಸ್‌ ರಸ್ತೆ ಪೂರ್ಣಗೊಂಡಲ್ಲಿ ಕೂಡಲೇ ಬೀದಿ ದೀಪದ ವ್ಯವಸ್ಥೆ ಮಾಡಬೇಕು. ಡೈವರ್ಷನ್‌ನಲ್ಲಿ ಪ್ರಯಾಣಿಕರಿಗೆ ಗೊಂದಲವಾಗದಂತೆ ಬ್ಲಿಂಕರ್‌, ಬೆಳಕಿನ ವ್ಯವಸ್ಥೆ, ಫ್ರೋರಸೆಂಟ್‌ ಸ್ಟಿಕ್ಕರ್‌ಗಳನ್ನು ಅಳವಡಿಸಬೇಕಿದೆ.

ಬಸ್‌, ರಿಕ್ಷಾ ತಂಗುದಾಣ ಬೇಕಾಗಿದೆ

ಸಾಣೂರು ಗ್ರಾ.ಪಂ ವ್ಯಾಪ್ತಿಯಲ್ಲಿ ತೆರವುಗೊಳಿಸಿದ ಹಳೆ ಬಸ್ಸು ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳ ಬದಲಿಗೆ ಹೊಸ ಬಸ್ಸು ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳನ್ನು ಜನರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಸ್ಥಾಪಿಸಲು ಕೂಡಲೇ ನಿರ್ಮಾಣ ಕಾರ್ಯ ಆರಂಭಿಸಬೇಕು.

12 ಅಡ್ಡ ರಸ್ತೆಗಳಿಗೆ ಹಾನಿ!

ಪುಲ್ಕೇರಿ ಬೈಪಾಸ್‌ನಿಂದ ಮರತಂಗಡಿ ವರೆಗೆ ರಸ್ತೆಯ ಎರಡು ಕಡೆಗಳಲ್ಲಿ 12 ಅಡ್ಡರಸ್ತೆಗಳಿದ್ದು, ಅವೆಲ್ಲವೂ ಜರ್ಜರಿತವಾಗಿವೆ. ಇವುಗಳಲ್ಲಿ 50 ಮೀನಿಂದ 100 ಮೀ ವರೆಗೆ ಮಣ್ಣಿನ ರಸ್ತೆ ಅಥವಾ ಜಲ್ಲಿ ಹಾಕಿದ್ದು ಕೂಡಲೇ ಡಾಮರೀಕರಣ ಮಾಡಿ ಸರಿಪಡಿಸಬೇಕು. ಅಡ್ಡರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಬರುವಾಗ ಮಣ್ಣಿನ ಮೇಲೆ ಮಳೆ ನೀರು ಹರಿದು ಜಾರುತ್ತಿದೆ. ಹಾಕಿದ ಜಲ್ಲಿ ಅಸ್ತವ್ಯಸ್ತವಾಗಿದೆ. ಜಲ್ಲಿಯ ಮೇಲೆ ಚಲಿಸುವಾಗ ದ್ವಿಚಕ್ರವಾಹನ ಚಾಲಕರು ಆಯತಪ್ಪಿ ಬೀಳುತ್ತಿದ್ದಾರೆ.

ಸಮಸ್ಯೆಗಳೇನು? ಪರಿಹಾರ ಹೇಗೆ?

ಮುರತಂಗಡಿ ಶುಂಠಿ ಗುಡ್ಡೆ ತಿರುವಿನಲ್ಲಿ, ಸರ್ವಿಸ್‌ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಆಗಿಲ್ಲ. ರತ್ನಾಕರ್‌ ಕಾಮತ್‌ ಅಂಗಳದ ಎದುರಿನ ಗೋಡೆ ಮಳೆ ನೀರಿಗೆ ಕೊಚ್ಚಿ ಹೋಗಿ, 3.30 ಲಕ್ಷ ರೂ. ವೆಚ್ಚವಾಗಿದೆ. ಇಲ್ಲಿ ನಷ್ಟ ಪರಿಹಾರ ಅಥವಾ ಗೋಡೆ ಪುನರ್‌ ನಿರ್ಮಾಣದ ಅಗತ್ಯವಿದೆ.

ಮುರತಂಗಡಿ-ಇರ್ವತ್ತೂರು ರಸ್ತೆಯಲ್ಲಿ ಹಳೆ ವಿದ್ಯುತ್‌ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ ಗಳನ್ನು ಕೆಲವು ಕಡೆ ಬದಲಿಸಿಲ್ಲ. ಇಲ್ಲಿ ಸುಮಾರು ಎರಡು ಕಿ.ಮೀ ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ತುರ್ತಾಗಿ ಆಗಬೇಕು.

ಸಾಣೂರು ಯುವಕ ಮಂಡಲದ ಮೈದಾನದ ಬಳಿ ಹೈ ಟೆನ್ಶನ್‌ ವಿದ್ಯುತ್‌ ಗೋಪುರ ಪ್ರದೇಶದ ಗುಡ್ಡಜರಿತ, ಸಾಣೂರು ಕಾಲೇಜಿನ ತಡೆಗೋಡೆಯ ಮುಂಭಾಗದ ಗುಡ್ಡ ಜರಿದಿದೆ. ಇಲ್ಲಿ ತಡೆಗೋಡೆ ನಿರ್ಮಿಸಬೇಕಾಗಿದೆ. ತಡೆಗೋಡೆಯ ಮೇಲ್ಭಾಗಕ್ಕೆ ಕನಿಷ್ಠ ಐದು ಅಡಿ ಎತ್ತರಕ್ಕೆ ಕಬ್ಬಿಣದ ಗ್ರಿಲ್‌ ಅಳವಡಿಸಬೇಕಾಗಿದೆ.

ರಸ್ತೆ ಬದಿಯ ನೀರಿನ ಪೈಪ್‌ ಲೈನ್‌ ಗಳಿಗೆ ಹಾನಿಯಾದಾಗ ದುರಸ್ತಿ ವಿಳಂಬವಾಗಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಸಾಣೂರು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆಗೆ ಚರಂಡಿ, ಮಳೆ ನಿಂತ ಕೂಡಲೇ ಡಾಮರು ಕಾಮಗಾರಿ ನಡೆಸಬೇಕಿದೆ.

ಕಾಮಗಾರಿ ಸಂದರ್ಭ ಕಿತ್ತು ಹಾಕಿರುವ ವಿದ್ಯಾಲಯದ ಕಾಂಕ್ರೀಟ್‌ ಪ್ರವೇಶ ದ್ವಾರ ಮತ್ತು ಬಸ್ಸು ಪ್ರಯಾಣಿಕರ ತಂಗುದಾಣ ಮರು ನಿರ್ಮಿಸಬೇಕಿದೆ.

ಸಾಣೂರು- ಪುಲ್ಕೇರಿ  ಬೈಪಾಸ್‌ ವೃತ್ತದ ಬಳಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಬೇಕು.

ಕಳಸ, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ ಭಾಗಕ್ಕೆ ಹೋಗುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ದೊಡ್ಡದಾದ ಸೂಚನಾಫ‌ಲಕ ಹಾಗೂ ಹೈ ಮಾಸ್ಟ್‌ ದೀಪ ಅಳವಡಿಸಬೇಕು.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next