ದಾಂಡೇಲಿ: ಕೋವಿಡ್-19 ಕಾರಣ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಅದೇ ರೀತಿ ರಸ್ತೆ ಸಾರಿಗೆ ಸಂಸ್ಥೆಯೂ ಪ್ರಯಾಣಿಕರಿಲ್ಲದೆ ಅಪಾರ ನಷ್ಟ ಅನುಭವಿಸುತ್ತಿದ್ದೆ. ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಅನ್‌ಲಾಕ್ ಆದ ದಿನದಿಂದಲೇ ಸಾರಿಗೆ ಸಂಸ್ಥೆಯವರು ಪ್ರಯಾಣಿಕರ ಸೇವೆಗೆ ಬಸ್ ಬಿಟ್ಟರೂ ಪ್ರಯಾಣಿಕರು ಮಾತ್ರ ಬಸ್ ಹತ್ತುತ್ತಿಲ್ಲ. ಪ್ರತಿದಿನ 61 ಬಸ್‌ಗಳನ್ನು ಬಿಡುತ್ತಿದ್ದ ನಗರದ ಸಾರಿಗೆ ಸಂಸ್ಥೆ ಘಟಕದವರು ಈಗ 28 ಬಸ್‌ಗಳನ್ನಷ್ಟೇ ಬಿಟ್ಟಿದ್ದಾರೆ. ಕೋವಿಡ್ ಬರುವ ಮುನ್ನ 61 ಬಸ್ ನಿತ್ಯ ಸಂಚರಿಸುತ್ತಿದ್ದು, ಪ್ರತಿದಿನ 6.50ರಿಂದ 7 ಲಕ್ಷ ಆದಾಯ ಬರುತ್ತಿತ್ತು. ಈಗ ದಿನವೊಂದಕ್ಕೆ 1 ಲಕ್ಷದಿಂದ 1.25 ಲಕ್ಷ ಆದಾಯ ಬರಲು ಪ್ರಾರಂಭಿಸಿದೆ. ಹಿಂದೆ ಧಾರವಾಡಕ್ಕೆ ಪ್ರತಿದಿನ 60 ಟ್ರಿಪ್ ಹೋಗುತ್ತಿದ್ದಲ್ಲಿ ಈಗ 20ರಿಂದ 25 ಟ್ರಿಪ್ ಗಳಷ್ಟೇ ಹೋಗಲಾಗುತ್ತಿದೆ. ಇದಕ್ಕೂ ಪ್ರಯಾಣಿಕರು ತುಂಬಲು ಗಂಟೆಗಟ್ಟಲೆ ಕಾಯಬೇಕಾಗಿದೆ. ನಗರದೊಳಗಡೆ ಒಟ್ಟು 3 ಬಸ್ ಸಂಚರಿಸುತ್ತಿದ್ದರೂ ಅದು ಅಷ್ಟಕ್ಕಷ್ಟೆ ಆದಾಯ ತರುತ್ತಿದೆ.
ರಾಜ್ಯದ ಧಾರವಾಡ, ಬೆಳಗಾವಿ, ರಾಯಚೂರು, ಶಕ್ತಿನಗರ, ಬೆಂಗಳೂರು ಮೊದಲಾದ ಕಡೆಗಳಿಗೆ ಇಲ್ಲಿಂದ ಬಸ್ ಸಂಚಾರ ಪ್ರಾರಂಭವಾಗಿದ್ದು, ಜನರ ಬೇಡಿಕೆಯಾನುಸಾರ ಬಸ್ ಬಿಡಲಾಗುತ್ತಿದೆ. ಇನ್ನೂ ನಗರದಿಂದ ಧರ್ಮಸ್ಥಳಕ್ಕೆ, ಮಹಾರಾಷ್ಟ್ರ-ಕೊಲ್ಲಾಪುರಕ್ಕೆ ಬಸ್ ಸಂಚಾರ ಪ್ರಾರಂಭಿಸಿಲ್ಲ. ದಾಂಡೇಲಿ ಸಾರಿಗೆ ಘಟಕದಲ್ಲಿ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 263 ಜನ ಕೆಲಸ ನಿರ್ವಹಿಸುತ್ತಿದ್ದು, ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ನಿತ್ಯ ಕೆಲಸ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಸಾರಿಗೆ ಘಟಕದ ವ್ಯವಸ್ಥಾಪಕ ಎಚ್.ವೈ. ಜೋಗಿನ್ ನೇತೃತ್ವದಲ್ಲಿ ಸಾರಿಗೆ ಘಟಕದ ಅಧಿಕಾರಿಗಳು ರೊಟೇಶನ್ ಮಾದರಿಯಲ್ಲಿ ಕೆಲಸ ನೀಡುತ್ತಿದ್ದಾರೆ.
ಸಂಕಷ್ಟದಲ್ಲಿಯೂ ಸೇವೆ ಕೋವಿಡ್ ಸಂಕಷ್ಟದಲ್ಲಿಯೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕೆಂಬುವುದು ನಮ್ಮ ಗುರಿ. ಹಾಗಾಗಿ ಹೆಚ್ಚು ರಿಸ್ಕ್ ತೆಗೆದುಕೊಂಡು ಪ್ರಯಾಣಿಕರಿಗೆ ಸೇವೆ ನೀಡಲು ಮುಂದಾಗಿದ್ದೇವೆ. ಪ್ರಯಾಣಿಕ ಸಂಖ್ಯೆ ತೀರಾ ಕಡಿಮೆಯಿದೆ. ಸಂಸ್ಥೆ ಆರ್ಥಿಕವಾಗಿ ತೊಂದರೆಯಲ್ಲಿದೆ. ಆದಾಗ್ಯೂ ಸಂಸ್ಥೆಯ ಎಲ್ಲ ಸಿಬ್ಬಂದಿ ಸಮಸ್ಯೆಗಳನ್ನರಿತು ಒಂದಾಗಿ ಸೇವೆ ನೀಡುತ್ತಿದ್ದೇವೆ. –
ಎಚ್.ವೈ. ಜೋಗಿನ್ ಘಟಕ ವ್ಯವಸ್ಥಾಪಕ
-ಸಂದೇಶ್ ಎಸ್. ಜೈನ್