ಆರು ಮಂದಿ ಪುಂಡರ ಗುಂಪು ನಮ್ಮದು. ಪ್ರಥಮ ಪಿ.ಯು.ಸಿ.ಯಲ್ಲಿ ಒಂದೇ ಬಾರಿಗೆ ಪಾಸಾಗಿ ದಕ್ಕಿದ ಗೆಲುವು, ಇನ್ನಷ್ಟು ತುಂಟರಾಗಲು ನಮಗೆ ಅವಕಾಶ ಮಾಡಿಕೊಟ್ಟಿತು. ಗುಂಪಿನಲ್ಲಿ ನಾನೊಬ್ಬ ಸಾಧಾರಣ ವಿದ್ಯಾರ್ಥಿ. ಆದರೂ ತಲೆ ಹರಟೆಯಲ್ಲಿ ಕಮ್ಮಿಯಿರಲಿಲ್ಲ. ನಮ್ಮ ಗುಂಪಿನಲ್ಲಿ ನಮಗೆ ನಾವೇ ಹೀರೋಗಳು.ನಾವು ಒಂದು ದಿನವೂ ರಜೆ ಹಾಕಿ ಮನೆಯಲ್ಲಿ ಉಳಿದುಕೊಂಡವರಲ್ಲ. ಅಂದರೆ ಕಾಲೇಜಿಗೆ ಕಡ್ಡಾಯವಾಗಿ ಹೋಗುತ್ತಿದ್ದೆವು ಅಂತಲ್ಲ, ಕಾಲೇಜಿಗೆ ಹೋಗುವುದು ಬಿಡುವುದು ಸೆಕೆಂಡರಿ. ಆದರೆ ಬಸ್ ನಿಲ್ದಾಣಕ್ಕೆ ಮಾತ್ರ ಪಕ್ಕಾ ಹೋಗುತ್ತಿದ್ದೆವು. ಒಂದು ದಿನ ಕ್ಲಾಸ್ ಎಕ್ಸಾಂನಲ್ಲಿ ಉತ್ತರಗಳನ್ನು ಕಾಪಿ ಹೊಡೆದು ಸರ್‌ಗೆ ಉತ್ತರ ಬರೆದಿದ್ದ ಹಾಳೆಯನ್ನು ಕೊಟ್ಟು ಬೇಗ ಬಸ್ ನಿಲ್ದಾಣಕ್ಕೆ ಬರುತ್ತಿದ್ದೆವು. ನಾವು ಹೋಗುವ ಮಾರ್ಗದಲ್ಲಿಯೇ ಹುಡುಗಿಯರ ಕಾಲೇಜಿತ್ತು.
ಹಾಗಾಗಿ ಅದೇ ನಮ್ಮ ಪಾಲಿನ ರಾಷ್ಟ್ರೀಯ ಹೆದ್ದಾರಿ. ನಮ್ಮ ಗುಂಪಿನಲ್ಲಿ ಒಬ್ಬ ಸ್ನೇಹಿತ ಹುಡುಗಿಯರನ್ನು ರೇಗಿಸುವುದು, ಮಾತನಾಡಿಸುವುದರಲ್ಲಿ ಎತ್ತಿದ ಕೈ. ನಾವು ಹೋಗುತ್ತಿದ್ದ ದಾರಿಯಲ್ಲಿ ನಾಲ್ವರು ಹುಡುಗಿಯರು ಬರುತ್ತಿದ್ದರು. ನಮ್ಮ ಪಕ್ಕದಲ್ಲೇ ಅವರು ನಡೆದು ಹೋಗುತ್ತಿದ್ದರು. ಆಗ ನಮ್ಮಲ್ಲೊಬ್ಬ “ರಾಧಿಕಾ, ಮೇನಕಾ, ಪ್ರಿಯಾಂಕ… ಎಲ್ಲಿಗೆ ಹೋಗುತ್ತಿದ್ದೀರಾ?’ ಎಂದು ಕೇಳಿದ. ನಾವೆಲ್ಲರೂ ಜೋರಾಗಿ ನಕ್ಕು ಬಿಟ್ಟೆವು. ಅವರಲ್ಲೊಬ್ಬಳು “ನಿಮ್ಮ ಮಾವನ ಮನೆಗೆ’ ಎಂದಳು. ಈಗ ಹುಡುಗಿಯರ ಗುಂಪು ನಕ್ಕಿತು. ನಂತರ ನಾವು “ಎಲ್ಲಿ ನಿಮ್ಮ ಮಾವ?’ ಎಂದು ಕೇಳಿದಾಗ, “ನೋಡಲ್ಲಿ. ಜೀಪ್ ಬರುತ್ತಿದೆಯಲ್ಲಾ… ಅದರ ಒಳಗೆ ಇದ್ದಾರೆ’ ಎಂದಳು ಆ ಗಟ್ಟಿಗಿತ್ತಿ. ತಿರುಗಿ ನೋಡಿದರೆ, ಆ ಜೀಪ್ ಬೇರೆ ಯಾವುದೂ ಆಗಿರಲಿಲ್ಲ.
ಗರುಡ ಪೋಲೀಸ್ ಜೀಪ್! ಅದನ್ನು ಕಂಡಿದ್ದೇ ತಡ, ನಾವೆಲ್ಲರೂ ಪೇರಿ ಕಿತ್ತೆವು. ಆಮೇಲೆ ಬಸ್ ಸ್ಟಾಪಿನಲ್ಲಿ ಒಟ್ಟಾಗಿ ಸೇರಿ ನಡೆದ ಘಟನೆಯನ್ನು ಹೇಳಿಕೊಂಡು ಹೊಟ್ಟೆ ತುಂಬಾ ನಕ್ಕೆವು. ಅಷ್ಟರಲ್ಲಿ ಒಂದು ಬಸ್ ಬಂದಿತು. ನಾವು ಎಲ್ಲರನ್ನೂ ನೂಕಿಕೊಂಡು ಒಳ ನುಗ್ಗಿದರೆ ಮುಂದಿನ ಸೀಟಿನಲ್ಲಿ ಅವರೇ ನಾಲ್ಕು ಮಂದಿ ಹುಡುಗಿಯರು! ನಮ್ಮ ಕಡೆ ನೋಡಿ ಮುಸಿ ಮುಸಿ ನಗುತ್ತಿದ್ದಾರೆ. ನಮ್ಮಲ್ಲೊಬ್ಬ ಗೆಳೆಯ, ಹುಡುಗಿಯರನ್ನು ರೇಗಿಸುವುದರಲ್ಲಿ ಎತ್ತಿದ ಕೈ ಎಂದು ಹೇಳಿದೆನಲ್ಲ ಅವನಿಗೆ ನಾನು- “ಮಗಾ, ನಿನಗೆ ಒಂದು ಮೊಟ್ಟೆ ಪಪ್ಸ್ ಕೊಡಿಸ್ತೀನಿ. ಅಪಹಾಸ್ಯ ಮಾಡುತ್ತಾ ಕಿಸಿಯುತ್ತಿರುವ ನಾಲ್ವರಲ್ಲಿ ಕಿಟಕಿ ಪಕ್ಕ ಕುಳಿತವಳ ಪೋನ್ ನಂಬರ್ ಅನ್ನು ಹೇಗಾದರೂ ತರಬೇಕು…’. ನಾನು ಮಾತು ಮುಗಿಸುವಷ್ಟರಲ್ಲೇ ಇನ್ನೊಬ್ಬ ಗೆಳೆಯ ರ್ಯಪ್ರವೃತ್ತನಾಗಿದ್ದ. ಅವನು ಮೂಗನಂತೆ ನಟಿಸುತ್ತಾ ಹುಡುಗಿಯರ ಬಳಿ ದುಡ್ಡು ಕೇಳುವವನಂತೆ ಸನ್ನೆ ಮಾಡತೊಡಗಿದ. ನಮ್ಮ ತಂಡದಲ್ಲಿ ಅವನು ನೋಟೆಡ್ ಆಗಿರಲಿಲ್ಲವಾಗಿದ್ದರಿಂದ ಅವನ ಗುರುತು ಹುಡುಗಿಯರಿಗೆ ಹತ್ತಲಿಲ್ಲ. ಅವರು ದುಡ್ಡು ಕೊಟ್ಟ ನಂತರ ಅಡ್ರೆಸ್ ಬರೆಯಲು ಪುಸ್ತಕ ಮುಂದಿತ್ತ. ಮುಂದೆ ಯಾವಾಗಲಾದರೂ ದುಡ್ಡು ವಾಪಸ್ ಕೊಡುತ್ತೇನೆ ಎಂದು ಹೇಳಿ ಪುಸ್ತಕದಲ್ಲಿ ವಿಳಾಸ ಬರೆಸಿಕೊಳ್ಳುವವರ ಹಾಗೆ.
ಹುಡುಗಿಯರು ಅಯ್ಯೋ ಪಾಪ ಅಂತ ಹೇಳಿ ಬರೆದುಕೊಟ್ಟರು.
ಇವನು ಸಂತಸದಿಂದ ಜಿಗಿದಾಡುತ್ತಾ ಆ ಚೀಟಿಯನ್ನು ತೆಗೆದುಕೊಂಡು ನಮ್ಮ ಬಳಿಗೆ ಬಂದನು. ಆತ ಪಂದ್ಯ ಗೆದ್ದ ಖುಷಿಯಲ್ಲಿದ್ದ. ಮೊಟ್ಟೆ ಪಪ್ಸ್ ಹೋಯಿತಲ್ಲ ಅಂತ ನನಗೆ ದುಃಖ. ಎಲ್ಲರೂ ಸುತ್ತುವರಿದು ಚೀಟಿ ತೆರೆದು ಓದಿದೆವು. ಅಲ್ಲಿ ನೋಡಿದರೆ ಅದರಲ್ಲಿ ಫೋನ್ ನಂಬರ್ ಇರಲಿಲ್ಲ. ಬದಲಾಗಿ ಬಸ್ ನಂಬರ್ ಇತ್ತು. ನಾವು “ಸೇರು’ ಅಂದ್ರೆ ಸವ್ವಾಸೇರು ಎಂಬಂತಿದ್ದ ಆ ಹುಡುಗಿಯರು ತಾವು ಹೋಗುತ್ತಿದ್ದ ಬಸ್ ನಂಬರನ್ನೇ ವಿಳಾಸವಾಗಿ ನೀಡಿ ನಮ್ಮನ್ನು ಬಕರಾಗಳನ್ನಾಗಿ ಮಾಡಿದ್ದರು. ಅವತ್ತೇ ನಾವೆಲ್ಲರೂ ಸೇರಿ ಹುಡುಗಿಯ ಅಡ್ರೆಸ್ ಪಡೆಯಲು ವಿಫಲನಾದ ಗೆಳೆಯನಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಕೊಟ್ಟವು. ನಾನು ನೆಮ್ಮದಿಯ ಉಸಿರು ಬಿಟ್ಟಿದ್ದೆ. ಕಡೆಗೂ ಅವನಿಗೆ ಮೊಟ್ಟೆ ಪಪ್ಸ್ ಕೊಡಿಸುವುದು ತಪ್ಪಿತಲ್ಲ ಅಂತ. ಏಕೆಂದರೆ ಅವತ್ತು ನಮ್ಮಲ್ಲಿ ಯಾರ ಹತ್ತಿರವೂ ಹತ್ತು ರೂಪಾಯಿ ಕೂಡ ಇರಲಿಲ್ಲ.
ಆನಂದ್ ಪ್ರಸಾದ್ ಎಂ. ಎ