Advertisement

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

12:17 AM Jan 10, 2025 | Team Udayavani |

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಕಾಳ್ಗಿಚ್ಚು ಸಾಮಾನ್ಯ. ಆದರೆ ಈ ಬಾರಿಯದು ನಿರೀಕ್ಷೆ ಮೀರಿದ ಅನಾಹುತ. ಆಡಳಿತ ವ್ಯವಸ್ಥೆಯ ತುರ್ತು ಕ್ರಮದಿಂದ ಸಾಕಷ್ಟು ಜನರನ್ನು ರಕ್ಷಿಸಲಾಯಿತಾದರೂ 10ಕ್ಕೂ ಹೆಚ್ಚು ಪ್ರಾಣಹಾನಿಯಾಗಿದೆ. 50-60 ಸಾವಿರ ಎಕರೆಗೂ ಹೆಚ್ಚು ಪ್ರದೇಶ ಸುಟ್ಟು ಬೂದಿಯಾಗಿದೆ. ನಾನಿರುವ ಜಾಗದಿಂದ ಸುಮಾರು 6-7 ಮೈಲಿ (10-12 ಕಿ.ಮೀ.) ದೂರದಲ್ಲಿ ಕಾಳ್ಗಿಚ್ಚು ಧಗಧಗಿಸುತ್ತಿತ್ತು. ಅಲ್ಲಿ ಶಾಲೆ, ಮನೆ, ಇತರ ಕಟ್ಟಡಗಳು ಸುಟ್ಟು ಬೂದಿಯಾಗಿವೆ. ಬೆಂಕಿಯ ಜ್ವಾಲೆ ಎಷ್ಟಿತ್ತೆಂದರೆ ಅದರಿಂದ ಹಾರಿದ ಬೂದಿ ನಾನಿದ್ದ ಜಾಗಕ್ಕೂ ಬಂದು ಬಿದ್ದಿತ್ತು. ನನ್ನ 2-3 ಸಹೋದ್ಯೋಗಿಗಳ ಮನೆ ಸುಟ್ಟು ಭಸ್ಮ ಆಗಿದೆಯಂತೆ. ವಿಶ್ವಖ್ಯಾತ ಹಾಲಿವುಡ್‌ ಕೂಡ ಅಗ್ನಿಯ ಕೆನ್ನಾಲಿಗೆಗೆ ಸಿಲುಕಿದೆಯಂತೆ. ಅಲ್ಲಿ ಏನು ಹಾನಿಯಾಗಿದೆಯೋ ಇನ್ನೂ ಗೊತ್ತಿಲ್ಲ…

Advertisement

ಹೀಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಪಾರ ಹಾನಿ ಉಂಟು ಮಾಡಿರುವ ಕಾಳ್ಗಿಚ್ಚಿನ ಪ್ರತ್ಯಕ್ಷ ಅನುಭವ ಕುರಿತು “ಉದಯವಾಣಿ’ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ ಕಳೆದೊಂದು ವರ್ಷದಿಂದ ಅಮೆರಿಕದ ಕ್ಯಾಲಿಫೋರ್ನಿಯಾದ ಆರ್ಕೇಡಿಯಾದಲ್ಲಿ ಗಣಕ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕು ಗುಂಜಗೋಡಿನ ಗಿರಿಧರ್‌ ಭಟ್‌.

ಕ್ಯಾಲಿಫೋರ್ನಿಯಾಗೆ ಕಾಳ್ಗಿಚ್ಚು ಹೊಸತಲ್ಲ. ಸಾಮಾನ್ಯ ವಿದ್ಯಮಾನ. ಲಾಸ್‌ ಏಂಜಲೀಸ್‌ ಅತಿ ಜನ ಸಾಂದ್ರತೆ ಇರುವ ಕೌಂಟಿ. ಕೌಂಟಿ ಅಂದರೆ ನಮ್ಮಲ್ಲಿ ಜಿಲ್ಲೆಗಳಿದ್ದಂತೆ. ಇದು ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶ. ಇಲ್ಲಿ ಕಾಳ್ಗಿಚ್ಚು ಬಿದ್ದರೆ ನಗರ ಪ್ರದೇಶಗಳಿಗೂ ಹಬ್ಬುತ್ತದೆ. ಇಲ್ಲಿ ಗಾಳಿ ಸಾಮಾನ್ಯ. ಹೀಗೆ ಮೊನ್ನೆ ಗಾಳಿ ಬೀಸಿದಾಗ ಮರಗಳು, ವಿದ್ಯುತ್‌ ಕಂಬಗಳು ಬಿದ್ದಿವೆ. ಆಗಲೇ ಕಾಳ್ಗಿಚ್ಚು ಹುಟ್ಟಿದ್ದು. 50 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ಬೆಂಕಿ. 10ಕ್ಕಿಂತ ಹೆಚ್ಚು ಸಾವು. ನಮ್ಮ ಸಹದ್ಯೋಗಿಗಳ 3 ಜನರ ಮನೆ ಸುಟ್ಟಿದೆ ಎಂದೂ ಹೇಳಿದ್ದಾರೆ.

ಅಲ್ಲದೇ ಪ್ಯಾಲಿಸಿಡೀಸ್‌ ಎಂಬ ಜಾಗದಲ್ಲಿ ಮೊದಲಿಗೆ ಆರಂಭವಾದ ಕಾಳ್ಗಿಚ್ಚು ಅನಂತರ ಬೇರೆ ಬೇರೆ ಕಡೆ ಹಬ್ಬಿತು. ಈವರೆಗೆ ಈ ನಗರದಲ್ಲಿ ನಡೆದ ಭೀಕರ ಕಾಳ್ಗಿಚ್ಚು ದುರಂತಗಳ ಬಗ್ಗೆ ಕೇಳಿದ್ದೆ. ಆದರೆ ಮೊದಲ ಬಾರಿಗೆ ಪ್ರತ್ಯಕ್ಷದರ್ಶಿಯಾಗುವಂತಾಯ್ತು. ವಾಟ್ಸ್‌ಆ್ಯಪ್‌ನ ಭಾರತೀಯ ಗ್ರೂಪ್‌ಗಳಲ್ಲಿ ದೇಗುಲಗಳು, ಹತ್ತಿರದ ರೆಸ್ಟೋರೆಂಟ್‌ಗಳಲ್ಲಿ ಊಟ, ವಸತಿಗೆ ವ್ಯವಸ್ಥೆ ಇದೆ ಹೆದರಬೇಡಿ ಎನ್ನುವ ಸಂದೇಶಗಳು ಹರಿದಾಡುತ್ತಿದ್ದವು. ಇತ್ತೀಚೆಗಷ್ಟೇ ಇಲ್ಲಿ ಸಣ್ಣದಾಗಿ ಭೂಕಂಪವು ಸಂಭವಿಸಿತ್ತು. ಆದರೆ ಯಾವುದೇ ಹಾನಿಯಾಗಿರಲಿಲ್ಲ. ಈಗಲೂ ಭಾರತೀಯರು ಇರುವಂಥ ಜಾಗಗಳಲ್ಲಿ ಕಾಡ್ಗಿಚ್ಚು ವ್ಯಾಪಿಸಿಲ್ಲವಾದರೂ ಇತರರಿಗೆ ಆದ ಸಮಸ್ಯೆಗಳನ್ನು ಕಂಡು ಮನಸ್ಸು ಭಾರವಾಗಿದೆ. ಸ್ವಲ್ಪ ಭೀತಿಯೂ ಇದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸುಟ್ಟ ವಾಸನೆ ಮೂಗಿಗೆ ರಾಚುತ್ತಿದೆ. ಅಗ್ನಿಶಾಮಕ ದಳಗಳು ಬೇರೆ ರಾಜ್ಯಗಳಿಂದಲೂ ಧಾವಿಸಿ ಬೆಂಕಿ ನಂದಿಸಲು ಮುಂದಾಗಿವೆ. ಗಾಳಿ ಕಡಿಮೆಯಾಗಿದೆ. ಆದರೆ ಬೆಂಕಿ ಪೂರ್ತಿ ನಂದಿಲ್ಲ. ಪರಿಸ್ಥಿತಿ ಸುಧಾರಿಸಿದರೆ ಸಾಕು ಎನಿಸಿದೆ ಎಂದೂ ತಿಳಿಸಿದ್ದಾರೆ.

– ಗಿರಿಧರ್‌ ಭಟ್‌ ಗುಂಜಗೋಡು
ಆರ್ಕೇಡಿಯಾ, ಲಾಸ್‌ ಏಂಜಲೀಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next