ಜೈಪುರ: ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಸಚಿನ್ ಪೈಲಟ್ ಈ ಕುರಿತು ಸಂಶಯ ವ್ಯಕ್ತಪಡಿಸಿದ್ದು, ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರನ್ನು ಹೊಗಳಿದ್ದರು. ಬಳಿಕ ಆಜಾದ್ ಅವರು ಪಕ್ಷ ತೊರೆದಿದ್ದು, ಗೆಹ್ಲೋಟ್ ಕೂಡಾ ಅದೇ ಮಾರ್ಗ ಅನುಸರಿಸುವ ಸಾಧ್ಯತೆ ಇದ್ದಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಐಸಿಸಿ ಟಿ 20 ರ‍್ಯಾಂಕಿಂಗ್ ಸೂರ್ಯಕುಮಾರ್ ಯಾದವ್ ಹೊಸ ಸಾಧನೆ
ಬುಧವಾರ (ನವೆಂಬರ್ 02) ಸುದ್ದಿಗಾರರ ಜತೆ ಮಾತನಾಡಿದ ಪೈಲಟ್, ತಮ್ಮ ರಾಜಕೀಯ ವಿರೋಧಿ ಅಶೋಕ್ ಗೆಹ್ಲೋಟ್ ಅವರನ್ನು ಪ್ರಧಾನಿ ಮೋದಿ ಅವರು ಹೊಗಳಿರುವುದು ಗಂಭೀರ ವಿಷಯ ಮತ್ತು ಇದೊಂದು ಕುತೂಹಲಕಾರಿ ಬೆಳವಣಿಗೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಖ್ಯಮಂತ್ರಿ ಗೆಹ್ಲೋಟ್ ಅವರನ್ನು ಹೊಗಳಿರುವುದು ತುಂಬಾ ಕುತೂಹಲಕಾರಿಯಾಗಿದೆ. ಈ ಮೊದಲು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಗುಲಾಂ ನಬಿ ಆಜಾದ್ ಅವರನ್ನು ಇದೇ ರೀತಿ ಹೊಗಳಿದ್ದರು. ಆ ಬಳಿಕ ಏನು ನಡೆಯಿತು ಎಂಬುದನ್ನು ಗಮನಿಸಿದ್ದೇವೆ. ನಿನ್ನೆಯ ಬೆಳವಣಿಗೆ ಕೂಡಾ ಕುತೂಹಲಕಾರಿಯಾಗಿದ್ದು, ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಸಚಿನ್ ಪೈಲಟ್ ಹೇಳಿದರು.
ಸೆಪ್ಟೆಂಬರ್ 25ರಂದು ಕರೆಯಲಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಠಿಣ ಶಿಸ್ತು ಕ್ರಮ ಜರುಗಿಸಬೇಕೆಂದು ಪೈಲಟ್ ಆಗ್ರಹಿಸಿದ್ದಾರೆ.