Advertisement

ಬಂಡಾಯ, ಕೆಂಡಾಯ ಕೆಲವರ ಥಂಡಾಯ ! ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಅಲ್ಲಲ್ಲಿ ಬಂಡಾಯ ಬಿಸಿ

12:23 AM Mar 21, 2024 | Team Udayavani |

ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ ಈಶ್ವರಪ್ಪ
ಶಿವಮೊಗ್ಗ: ಚುನಾವಣೆ ಫಲಿತಾಂಶದ ಬಳಿಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಬಾಂಬ್‌ ಸಿಡಿಸಿದ್ದಾರೆ. ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಸಿಕ್ಕಿದೆ. ಸರ್ವಾಧಿಕಾರಿ ಧೋರಣೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆ ಆಗುತ್ತಾರೆ ಎಂಬ ಚರ್ಚೆ ರಾಜ್ಯದಲ್ಲಿ ನಡೆಯುತ್ತಿದೆ. ನಾನೂ ಆ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.

Advertisement

ದೈವದ ಮೊರೆಹೋದ ಡಿವಿಎಸ್‌
ಬೆಂಗಳೂರು: 2-3 ದಿನಗಳಿಂದ ಗುಡು ಗುತ್ತಿದ್ದ ಡಿ.ವಿ.ಸದಾನಂದ ಗೌಡ ತಣ್ಣಗಾಗಿದ್ದಾರೆ. ಮುಜುಗರ ತಪ್ಪಿಸಿಕೊಳ್ಳಲು ಬೆಂಗಳೂರಿನಿಂದ ಹುಟ್ಟೂರು ಸುಳ್ಯಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಸುಳ್ಯದ ಮೂಲಮನೆಯಾದ ದೇವರಗುಂಡದಲ್ಲಿ ದೈವ ಕೋಲ ಇರುವ ಹಿನ್ನೆಲೆಯಲ್ಲಿ ತೆರಳಿದ್ದು, ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಯಸಿ ದೈವಕ್ಕೆ ಮೊರೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಎಸ್‌ವೈ ಸಂಧಾನಕ್ಕೆ ಮಾಧುಸ್ವಾಮಿ ತಿರಸ್ಕಾರ?
ತುಮಕೂರು(ಗ್ರಾಮಾಂತರ): ಬಿ ಫಾರಂ ಬದಲಾಯಿಸಿ ಕಾಂಗ್ರೆಸ್‌ನವರು ಕರೆದರೂ ಸ್ಪರ್ಧಿಸು ವುದಿಲ್ಲ, ಬಿಜೆಪಿಯವರು ಕರೆದರೂ ಕಣಕ್ಕೆ ಇಳಿಯು ವುದಿಲ್ಲ. ಯಾರೋ ನೋಡಿ ಬಂದ ಹೆಣ್ಣನ್ನ ನಾನು ಮದುವೆ ಆಗಲಾರೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹರಿಹಾಯ್ದರು. ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಿ. ಸೋಮಣ್ಣಗೆ ತುಮಕೂರಿನಲ್ಲಿ ಬೆಂಬಲ ನೀಡುವುದಿಲ್ಲ ಎಂದ ಅವರು, ಬಿ.ಎಸ್‌.ವೈ. ಸಂಧಾನದ ಯತ್ನವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಕರಡಿ ಸಂಗಣ್ಣ ನಡೆ ಇಂದು ನಿರ್ಧಾರ?
ಕೊಪ್ಪಳ: ಈ ಬಾರಿ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾ.21ರಂದು ಬೆಂಬಲಿಗರ ಸಭೆ ಕರೆದಿದ್ದು, ಸಂಸದರ ನಡೆ ಬಗ್ಗೆ ಕುತೂಹಲ ಮೂಡಿದೆ. ಸಂಗಣ್ಣ ಕಾಂಗ್ರೆಸ್‌ನತ್ತ ಮುಖ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿದ್ದವು. ಆದರೆ ಕೊಪ್ಪಳದಿಂದ ರಾಜಶೇಖರ ಹಿಟ್ನಾಳ್‌ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಆಗುವುದು ಖಚಿತ ಎನ್ನಲಾಗಿದೆ. ಹಾಗಾಗಿ ಸಂಗಣ್ಣಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿದಂತಾಗಿದೆ.

ಕಣ್ಣೀರಿಟ್ಟ ಕೈ ನಾಯಕಿ ವೀಣಾ
ಬೆಂಗಳೂರು: ಬಾಗಲಕೋಟೆ ಯಿಂದ ಟಿಕೆಟ್‌ ಕೈತಪ್ಪುವ ಸುಳಿವು ಸಿಕ್ಕ ಬೆನ್ನಲ್ಲೇ ಕಣ್ಣೀರಿಟ್ಟ ಕಾಂಗ್ರೆಸ್‌ ನಾಯಕಿ ವೀಣಾ ಕಾಶಪ್ಪನವರ್‌, ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತ್ತ ವೀಣಾ ಬೆಂಬಲಿಗರು ಬುಧವಾರ ಏಕಾಏಕಿ ಕಾಂಗ್ರೆಸ್‌ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಲು ಯತ್ನಿಸಿದರು.

Advertisement

ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಇಚ್ಛಿಸಿದ್ದ ವೀಣಾ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಇದಕ್ಕಾಗಿ ಪತಿ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್‌ ಜತೆ ಮೂರ್‍ನಾಲ್ಕು ದಿನಗಳಿಂದ ದಿಲ್ಲಿಯಲ್ಲೇ ಠಿಕಾಣಿ ಹೂಡಿದ್ದರು. ಆದರೆ ಕಾಂಗ್ರೆಸ್‌ ಚುನಾವಣ ಸಮಿತಿ (ಸಿಇಸಿ) ಸಭೆಗೂ ಮೊದಲೇ ತಮಗೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಸ್ಪಷ್ಟ ಸುಳಿವು ಸಿಗುತ್ತಿದ್ದಂತೆ ವೀಣಾ ಕಣ್ಣೀರಿಟ್ಟರು. ಬಯಸಿದವರೆಲ್ಲರಿಗೂ ಟಿಕೆಟ್‌ ಸಿಗುತ್ತದೆ. ನನಗೆ ಯಾಕೆ ಹೀಗೆ ಅನ್ಯಾಯ ಮಾಡಲಾಯಿತೋ ಗೊತ್ತಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಒಬ್ಬ ಹೆಣ್ಣು ಮಗಳಿಗೆ ಪಕ್ಷದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಹೇಳುತ್ತಲೇ ಭಾವುಕರಾದರು.

ಈಶ್ವರಪ್ಪ ವಿರುದ್ಧ ಬಿಎಸ್‌ವೈ ವ್ಯಗ್ರ
ಬೆಂಗಳೂರು: ಈಶ್ವರಪ್ಪ ಬಂಡಾಯ ವಿಷಯವನ್ನು ನಿರ್ಲಕ್ಷಿಸಲು ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದು, ಸಂಧಾನ ಸಾಧ್ಯತೆ ಕ್ಷೀಣವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೆ ಸಭೆ ನಡೆಸಿದ ಬಳಿಕ, ದಿಲ್ಲಿಯಲ್ಲಿ ಈಶ್ವರಪ್ಪ ವಿರುದ್ಧ ನೇರವಾಗಿಯೇ ಅಸಮಾಧಾನ ಹೊರ ಹಾಕಿರುವ ಯಡಿಯೂರಪ್ಪ, ಈಶ್ವರಪ್ಪ ನವರ ಬೇಜವಾಬ್ದಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಮಂಡ್ಯ ಬಿಡೆನು, ಚಿಕ್ಕಬಳ್ಳಾಪುರಕ್ಕೆ ಹೋಗಲಾರೆ
ಬೆಂಗಳೂರು: ಮಂಡ್ಯದ ವಿಷಯದಲ್ಲಿ ಪಟ್ಟು ಸಡಿಲಿಸಲು ಒಲ್ಲೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. 3 ದಿನಗಳಿಂದ ದಿಲ್ಲಿಯಲ್ಲಿದ್ದ ಸುಮಲತಾ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ರಲ್ಲದೆ, ಬುಧವಾರ ಬೆಂಗಳೂರಿಗೆ ಮರಳಿದ್ದಾರೆ. ನಾನು ರಾಜಕಾರಣ ಮಾಡುವುದಾದರೆ ಮಂಡ್ಯದಿಂದಲೇ ಎಂದಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next