Advertisement

Lok Sabha Elections; ಅಕ್ಷಯ ಪಾತ್ರೆ v/s ಚೊಂಬು

12:00 AM Apr 22, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತಕ್ಕೆ ನಾಲ್ಕು ದಿನಗಳು ಬಾಕಿ ಇರುವಂತೆ ಕಾಂಗ್ರೆಸ್‌- ಬಿಜೆಪಿ, ಜೆಡಿಎಸ್‌ ಮೈತ್ರಿಪಕ್ಷಗಳ ನಡುವೆ ಚೊಂಬು ವರ್ಸಸ್‌ ಅಕ್ಷಯ ಪಾತ್ರೆ ರಾಜಕಾರಣ ಬಿರುಸುಗೊಂಡಿದೆ.

Advertisement

ಮೋದಿಯವರದು ಅಕ್ಷಯಪಾತ್ರೆ ಎಂದು ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. “ದೇವೇಗೌಡರಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಸಚಿವ ಕೃಷ್ಣಬೈರೇಗೌಡ ಕೂಡ, “ಅಕ್ಷಯ ಪಾತ್ರೆಯಿಂದ ಒಂಚೂರಾದ್ರೂ ಕೊಡಿಸಿ’ ಎಂದು ದೇವೇಗೌಡರಿಗೆ ಕುಟುಕಿದ್ದಾರೆ. ಇದೇವೇಳೆ ಕಾಂಗ್ರೆಸ್‌ನ “ಚೊಂಬು’ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಹಣ ಬಂದಿದೆ. ಹಣಕಾಸು ವಿಚಾರದಲ್ಲಿ ಹತಾಶರಾಗಿ ಕಾಂಗ್ರೆಸ್‌ ನಾಯಕರು ಕೆಳಮಟ್ಟದ ಭಾಷೆ ಬಳಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನಾಯಕರಿಗೆ ಚೊಂಬೇ ಗತಿಯಾಗಲಿದೆ ಎಂದು ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಇತರ ನಾಯಕರು ಕೂಡ ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ.

ಮೇಕೆ ದಾಟು ಯೋಜನೆಗೆ ಇಂದೇ ಅನು ಮತಿ ನೀಡಲಿ, ನಾಳೆಯೇ ಕಾಮಗಾರಿ ಆರಂಭಿಸಲಾಗುವುದು. ರಾಜ್ಯಕ್ಕೆ ಕೇಂದ್ರ ಸರಕಾರ ನೀಡಿದ್ದು ಚೊಂಬು ಅಲ್ಲವೇ? ಅಕ್ಷಯಪಾತ್ರೆ ಬಗ್ಗೆ ಮಾತನಾಡುವ ದೇವೇಗೌಡರಿಗೆ ರಾಜಧಾನಿ ಬೆಂಗಳೂರು ಬಗ್ಗೆ ಕಾಳಜಿ ಇಲ್ಲವೇ? ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅವರು ಮೋದಿಯವರಿಗೆ ಹೇಳಿ ಮೇಕೆದಾಟು ಅನುಮತಿ ಕೊಡಿಸುವ ಕೆಲಸ ಮಾಡಲಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

10 ವರ್ಷಗಳಿಂದ ಪ್ರಧಾನಿ ಮೋದಿ ಕರ್ನಾ ಟಕಕ್ಕೆ ಖಾಲಿ ಚೊಂಬು ಕೊಡುಗೆ ನೀಡು ತ್ತಲೇ ಬಂದಿದ್ದಾರೆ. ರಾಜ್ಯದ ಪಾಲಿನ ತೆರಿಗೆ, ಪರಿಹಾರ ಹಣ ನೀಡದೆ ಖಾಲಿ ಚೊಂಬು ನೀಡಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಅನುದಾನದ ಪೈಕಿ ರಾಜ್ಯಕ್ಕೆ ಒಂದು ರೂಪಾಯಿಯೂ ಬಂದಿಲ್ಲ.
-ರಣದೀಪ್‌ಸಿಂಗ್‌ ಸುರ್ಜೇವಾಲಾ,
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Advertisement

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಬ್ಯಾಂಕ್‌ನಲ್ಲಿ ಖಾತೆ ತೆರೆಸಿದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು. ಯಾವುದಾದರೂ ಈಡೇರಿಸಿದ್ದಾರಾ?
-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

ದೇವೇಗೌಡರ ಕುಟುಂಬ ಹೇಗಿದ್ದರೂ ಪ್ರಧಾನಿ ಜತೆಗೆ ತುಂಬ ನಿಕಟವಾಗಿದೆ. ಅವರು ರಾಜ್ಯಕ್ಕೆ ಅಕ್ಷಯ ಪಾತ್ರೆ ನೀಡಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ. ಹಾಗಾದರೆ ಅಕ್ಷಯ ಪಾತ್ರೆಯಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಕೊಡಿಸಿಬಿಡಿ. ಬರ ಪರಿಹಾರ, ಮೇಕೆದಾಟು ಯೋಜನೆಗೆ ಅನುಮತಿ ನೀಡುವುದರ ಮೂಲಕ ಅಕ್ಷಯ ಪಾತ್ರೆಯಿಂದ ರಾಜ್ಯಕ್ಕೆ ಒಂದು ಚೂರಾದರೂ ಅನುಕೂಲ ಆಗಲಿ.
-ಕೃಷ್ಣಬೈರೇಗೌಡ, ಕಂದಾಯ ಸಚಿವ

ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ 2.85 ಲಕ್ಷ ಕೋಟಿ ರೂ. ಲಭಿಸಿದೆ. ಯುಪಿಎ ಅವಧಿಯಲ್ಲಿ ನಮಗೆ ಸಿಕ್ಕಿದ್ದು 84 ಸಾವಿರ ಕೋಟಿ ರೂ. ಇದೆಲ್ಲವನ್ನೂ ರಾಜ್ಯ ಸರಕಾರ ಮರೆಮಾಚಿದೆ. ತನ್ನ ತಪ್ಪು ಮುಚ್ಚಿ ಕೊಳ್ಳಲು ತೀರಾ ಕೆಳಮಟ್ಟಕ್ಕೆ ಹೋಗಿ ನಡೆದುಕೊಳ್ಳುತ್ತಿದೆ. ಹಣಕಾಸು ವಿಚಾರದಲ್ಲಿ ಹತಾಶರಾಗಿ ಕಾಂಗ್ರೆಸ್‌ ನಾಯಕರು ಕೆಳಮಟ್ಟದ ಭಾಷೆ ಬಳಸುತ್ತಿದ್ದಾರೆ.
-ಬಸವರಾಜ ಬೊಮ್ಮಾಯಿ,
ಮಾಜಿ ಮುಖ್ಯಮಂತ್ರಿ

ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 80 ಸಾವಿರ ಕೋಟಿ ರೂ. ಅನುದಾನ ನೀಡ ಲಾಗಿತ್ತು. ಮೋದಿ ಸರಕಾರ 3 ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ನೀಡಿದೆ. ಕಾಂಗ್ರೆಸ್‌ ಸರಕಾರ ಸುಳ್ಳು ಜಾಹೀರಾತು ನೀಡಿ ಜನರ ದಾರಿ ತಪ್ಪಿಸುತ್ತಿದೆ. ಸುಳ್ಳು ಎನ್ನುವುದು ಕಾಂಗ್ರೆಸ್‌ ರಕ್ತದಲ್ಲಿಯೇ ಇದೆ. ಮೋದಿ ಎಂದರೆ ಅಕ್ಷಯ ಪಾತ್ರೆ ಇದ್ದಂತೆ ಎಂಬುದು ದೇಶದ ಜನರಿಗೆ ತಿಳಿದ ವಿಷಯವಾಗಿದೆ.
-ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಚುನಾವಣೆಯ ಬಳಿಕ ಕಾಂಗ್ರೆಸ್‌ ನಾಯಕರಿಗೆ ಚೊಂಬೇ ಗತಿ ಆಗಲಿದೆ. ಕಾಂಗ್ರೆಸಿನವರ ಜಾಹೀ ರಾತು ಅಥವಾ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಜನರು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್‌ 50 ಸೀಟುಗಳನ್ನೂ ಗಳಿಸುವುದಿಲ್ಲ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಲೋಕಸಭೆ ಚುನಾವಣೆ ಬಳಿಕಕಾಂಗ್ರೆಸ್‌ಗೆ ಚೊಂಬು ಗ್ಯಾರಂಟಿ. ರಾಹುಲ್‌ ಗಾಂಧಿಗೆ ನಾವು ಚೊಂಬು ಕಳುಹಿಸಿ ಕೊಡಲಿದ್ದೇವೆ. ಕಾಂಗ್ರೆಸ್‌ ಸರಕಾರ ರಾಜ್ಯದ ಜನರಿಗೆ ಸಾಲು ಸಾಲು ಖಾಲಿ ಚೊಂಬುಗಳನ್ನು ನೀಡಿದೆ.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next