ಬೆಂಗಳೂರು: ಎರಡು ದಿನಗಳಲ್ಲಿ ಅಗತ್ಯ ಇರುವ ಕಡೆ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚಿಸುವಂತೆ ತಾಕೀತು ಮಾಡಿರುವ ಅಮಿತ್ ಶಾ, ಪ್ರತೀ ಲೋಕಸಭಾ ಕ್ಷೇತ್ರದಲ್ಲೂ ಕಳೆದ ಬಾರಿಗಿಂತ ಕನಿಷ್ಠ 2ರಿಂದ 3 ಲಕ್ಷ ಹೆಚ್ಚು ಮತಗಳನ್ನು ಗಳಿಸಬೇಕು ಎಂದು ಗುರಿ ನೀಡಿದ್ದಾರೆ.
ಅಷ್ಟೇ ಅಲ್ಲ, ಅಭ್ಯರ್ಥಿ ಯಾರೆಂಬುದಕ್ಕಿಂತ ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಮುಖ್ಯ. ಏನೇ ವೈಯಕ್ತಿಕ ವೈಮನಸ್ಸಿದ್ದರೂ ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡಿ, ಒಳ್ಳೆಯ ಭವಿಷ್ಯವಿದೆ. ಕಾಂಗ್ರೆಸ್ ಸರಕಾರ ಎಲ್ಲಿ ಎಡವುತ್ತದೆಯೋ ಅಲ್ಲಿ ನಿಗಾ ಇಟ್ಟಿರಿ ಎಂದು ಕಟ್ಟಪ್ಪಣೆ ಮಾಡಿದರು.
ಮಂಗಳವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ ನಡೆಸಿದ ಅವರು, 28 ಕ್ಷೇತ್ರಗಳ ಚಿತ್ರಣ ವನ್ನು ಉಭಯ ಪಕ್ಷಗಳ ನಾಯಕರೆದುರು ತೆರೆದಿಟ್ಟರು. ಯಾವ್ಯಾವ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಸುಲಭ, ಎಲ್ಲೆಲ್ಲಿ ಜೆಡಿಎಸ್‌ನ ಸಹಕಾರ ಮತ್ತು ಪರಿಶ್ರಮ ಎಷ್ಟು ಬೇಕು, ಜೆಡಿಎಸ್ ಆಯ್ಕೆ ಮಾಡಿರುವ 3 ಕ್ಷೇತ್ರಗಳಲ್ಲಿ ಬಿಜೆಪಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಸ್ವತಃ ವಿವರಿಸಿದರು.
ಕಳೆದ ಚುನಾವಣೆಯಲ್ಲಿ ವಿರೋಧಿಗಳಾಗಿದ್ದ ಬಿಜೆಪಿ-ಜೆಡಿಎಸ್ ಇಂದು ಮಿತ್ರಪಕ್ಷವಾಗಿದ್ದೇವೆ. ತಳಮಟ್ಟದಲ್ಲಿ ಕಾರ್ಯಕರ್ತರು ಪರಸ್ಪರ ಒಂದಾಗುವುದು ಕಷ್ಟವಿದೆ. ಆದರೂ ಸಮನ್ವಯ ಸಾಧಿಸಲೇಬೇಕು. ಅಗತ್ಯಬಿದ್ದರೆ ಲೋಕಸಭೆ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರವಾರು ಸಮನ್ವಯ ಸಮಿತಿ ರಚಿಸಿ ಎಂದರು. ಬಹುತೇಕ ವಿಧಾನಸಭಾ ಕ್ಷೇತ್ರವಾರು ಸಮನ್ವಯ ಸಮಿತಿ ರಚಿಸಿ, ಸಭೆ ನಡೆಸಿರುವುದಾಗಿ ಕುಮಾರಸ್ವಾಮಿ ಮತ್ತು ವಿಜಯೇಂದ್ರ ವಿವರಣೆ ನೀಡಿದರು. ಎಲ್ಲೆಲ್ಲಿ ಸಮನ್ವಯ ಸಮಿತಿ ಆಗಿಲ್ಲವೋ ಅಲ್ಲೆಲ್ಲ ಎರಡು ದಿನಗಳಲ್ಲಿ ಸಮಿತಿ ರಚಿಸಿ, ಸಭೆ ನಡೆಸಬೇಕು ಎಂದು ತಾಕೀತು ಮಾಡಿದರು.
ಬಿಜೆಪಿ-ಜೆಡಿಎಸ್ ಒಂದಾಗಿರುವುದರಿಂದ ಕನಿಷ್ಠ 2ರಿಂದ 3 ಲಕ್ಷ ಮತ ಗಳಿಕೆ ಪ್ರತೀ ಕ್ಷೇತ್ರದಲ್ಲಿ ಹೆಚ್ಚಾಗಬೇಕು. ಸಮನ್ವಯ ಸಾಧಿಸುವಲ್ಲಿ ಎರಡೂ ಕಡೆಯಿಂದ ಲೋಪ ಆಗದಂತೆ ನೋಡಿಕೊಳ್ಳಬೇಕು ಎಂದರಲ್ಲದೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಹಣಬಲ, ತೋಳ್ಬಲ ಬಳಸಬಹುದು. ನಿಗಾ ಇಡಿ. ಅವರು ಎಡವಿದರೆ ತಪ್ಪದೆ ಚುನಾವಣ ಆಯೋಗದ ಗಮನಕ್ಕೆ ತನ್ನಿ ಎಂದು ಸೂಚಿಸಿದರು.
ಇಂದು ವಿಶ್ವನಾಥ್ ಮನೆಯಲ್ಲಿ
ಸುಧಾಕರ್ ಉಪಾಹಾರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಕೆ. ಸುಧಾಕರ್‌ಗೆತಲೆನೋವಾಗಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿಚಾರವೂ ಸಭೆಯಲ್ಲಿ ಬಗೆಹರಿದಿದ್ದು, ಬುಧವಾರ ಬೆಳಗ್ಗೆ ಉಪಾಹಾರಕ್ಕೆ ಸುಧಾಕರ್ ಅವರರನ್ನು ವಿಶ್ವನಾಥ್ ಮನೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ಚುನಾವಣ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಅವರಿಗೆ ಅಮಿತ್ ಶಾ ವಹಿಸಿದರು.