Advertisement
ಘಟಾನುಘಟಿಗಳು ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್‌ನ ಎಂ.ಎಸ್. ಗುರುಪಾದಸ್ವಾಮಿ, ತುಳಸೀದಾಸ್ ದಾಸಪ್ಪ, ಎಂ.ರಾಜಶೇಖರ ಮೂರ್ತಿ, ಶ್ರೀಕಂಠದತ್ತ ಒಡೆಯರ್ ಅವರು ಸಂಸದರಾಗಿದ್ದ ಈ ಕ್ಷೇತ್ರವನ್ನು 1998ರಲ್ಲಿ ಸಿ.ಎಚ್.ವಿಜಯಶಂಕರ್ ಬಿಜೆಪಿಯ ತೆಕ್ಕೆಗೆ ಎಳೆದುಕೊಂಡ ಬಳಿಕ ಇಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಿತು. 1952ರಲ್ಲಿ ಆರಂಭಗೊಂಡ ಮೈಸೂರು ಲೋಕಸಭಾ ಕ್ಷೇತ್ರ ಇದುವರೆಗೆ ಒಟ್ಟು 17 ಚುನಾವಣೆಯನ್ನು ಕಂಡಿದ್ದು, 12 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಕ್ಷೇತ್ರ ಮರು ವಿಂಗಡಣೆಗೂ ಮುನ್ನ ಬಿಜೆಪಿ ಎರಡು ಬಾರಿ ಗೆದ್ದಿದೆ. ಬಳಿಕ ಮತ್ತೆರೆಡು ಬಾರಿ ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಒಟ್ಟು ನಾಲ್ಕು ಬಾರಿ ಗೆದ್ದಿದೆ.
ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ಹಾಗೂ ಮೈಸೂರಿನ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಸಹಿತ 8 ವಿಧಾನಸಭಾ ಕ್ಷೇತ್ರಗಳು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಮಡಿಕೇರಿ ಮತ್ತು ವಿರಾಜಪೇಟೆ, ಪಿರಿಯಾಪಟ್ಟಣ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ 5 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, ಜೆಡಿಎಸ್ ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರದಲ್ಲಿ ಗೆದ್ದು 2 ಕ್ಷೇತ್ರಗಳು ಉಳಿಸಿಕೊಂಡಿವೆ. ಬಿಜೆಪಿ ಕೃಷ್ಣರಾಜ ಕ್ಷೇತ್ರಕ್ಕಷ್ಟೇ ಸೀಮಿತವಾಗಿದೆ.
Related Articles
ಕ್ಷೇತ್ರದಲ್ಲಿ ಹಿಂದಿನ ಎಲ್ಲ ಚುನಾವಣೆಗಳಲ್ಲೂ ಬಹುತೇಕ ತ್ರಿಕೋನ ಸ್ಪರ್ಧೆ ನಡೆದು ಬಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ಇದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಹೆಚ್ಚು ಇದ್ದಾಗಲೂ ಬಿಜೆಪಿ ಅದರ ಲಾಭ ಪಡೆದು ಗೆಲುವು ಸಾಧಿಸಿರುವ ಉದಾಹರಣೆಗಳಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದರೂ ಬಿಜೆಪಿಗೆ ಜಯ ಒಲಿದಿತ್ತು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್ ಮಣಿಸಲು ಅಥವಾ ರಾಜಕೀಯ ಉದ್ದೇಶಕ್ಕಾಗಿ ಜಿಲ್ಲೆಯ ಜೆಡಿಎಸ್ ನಾಯಕರು, ಪರೋಕ್ಷವಾಗಿ ಬಿಜೆಪಿಯೊಂದಿಗೆ ಪರೋಕ್ಷ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದದ್ದು ಗುಟ್ಟಾಗಿ ಉಳಿದಿಲ್ಲ. ಈಗ ಬಹಿರಂಗವಾಗಿಯೇ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ, ಇಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ, ಜೆಡಿಎಸ್ ಬಲವೂ ನಿರ್ಣಾಯಕವಾಗಿದೆ.
Advertisement
ಕಳೆದ ಎರಡು ಚುನಾವಣೆಗಳ ಫಲಿತಾಂಶ ಗಮನಿಸಿದರೆ, ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿರುವುದರಿಂದ ಯಾವ ಪಕ್ಷ ಒಕ್ಕಲಿಗ ಅಭ್ಯರ್ಥಿಗೆ ಮಣೆ ಹಾಕುವುದೋ ಆ ಅಭ್ಯರ್ಥಿ ಗೆಲವು ಸಾಧಿಸುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ಬಿಜೆಪಿ ಎರಡು ಬಾರಿ ಗೆಲುವು ಸಾಧಿಸಿದೆ. ಇದರ ಜತೆಗೆ ಜೆಡಿಎಸ್ ಬೆಂಬಲವೂ ಅಷ್ಟೇ ಮುಖ್ಯವಾಗಿರುತ್ತದೆ ಎಂದರೆ ತಪ್ಪಾಗಲಾರದು.
ಒಕ್ಕಲಿಗರ ಬಾಹುಳ್ಯದ ಕ್ಷೇತ್ರಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 15 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿದ್ದಾರೆ. ಕುರುಬ ಸಮುದಾಯದ ಮತಗಳೂ ಇಲ್ಲಿ ನಿರ್ಣಾಯಕವಾಗಿರುವುದರಿಂದ ಕುರುಬ ಸಮುದಾಯದ ಅಭ್ಯರ್ಥಿಗಳೂ ಇಲ್ಲಿ ಗೆದ್ದಿದ್ದರು. 5.5 ಲಕ್ಷಕ್ಕೂ ಒಕ್ಕಲಿಗ ಸಮುದಾಯದ ಮತಗಳಿದ್ದರೆ, ಇದರೊಂದಿಗೆ ಪರಿಶಿಷ್ಟ ಜಾತಿ, ಲಿಂಗಾಯತ, ಕುರುಬ, ಮುಸ್ಲಿಂ, ನಾಯಕ, ಬ್ರಾಹ್ಮಣ, ಕೊಡಗು ಗೌಡ, ಕೊಡವರು, ನಾಯಕ, ಅಲ್ಪಸಂಖ್ಯಾಕ ಸಮುದಾಯ, ಹಿಂದುಳಿದ ವರ್ಗಗಳ ಮತಗಳು ಇವೆ. -ಸತೀಶ್ ದೇಪುರ