Advertisement
“ಅಪ್ಪಾ, ನೀವ್ ಹುಡುಕಿದ ಹುಡುಗನ್ನೇ ಮದ್ವೆ ಆಗ್ತಿನಿ. ಆದ್ರೆ, ಮದ್ವೆ ಮಾತ್ರ ಎಷ್ಟು ಧಾಮ್ ಧೂಮ್ ಅಂತ ಆಗ್ಬೇಕು ಅಂದ್ರೆ, ನೋಡಿದವರೆಲ್ಲ ವಾರಗಟ್ಟಲೆ ನನ್ ಮದ್ವೆ ಬಗ್ಗೇನೆ ಮಾತಾಡ್ಬೇಕು…’ ಈ ಮಾತನ್ನ ನಾನು ಅಪ್ಪನ ಬಳಿ ಅದೆಷ್ಟು ಬಾರಿ ಹೇಳಿದ್ದೇನೋ ಲೆಕ್ಕವಿಲ್ಲ. ಪ್ರತಿ ಬಾರಿ ಇದನ್ನು ಹೇಳಿದಾಗಲೂ, ಅಪ್ಪ ನಗುತ್ತಾ- “ಅಲ್ವಾ ಮತ್ತೆ, ನಂಗಿರೋದು ಒಬ್ಬಳೇ ರಾಜಕುಮಾರಿ. ಅವಳ ಮದುವೆಗೆ ಇಡೀ ರಾಜ್ಯಕ್ಕೇ ಚಪ್ಪರ ಹಾಕಿಸ್ತೀನಿ’ ಅನ್ನುತ್ತಿದ್ರು. “ಹುಡುಗನ ಮನೆಯವ್ರಿಗಿಂತ ಇವಳ ಡಿಮ್ಯಾಂಡೇ ಜಾಸ್ತಿ ಇರುತ್ತೇನೋ’ ಅಂತ ಅಮ್ಮ ಗೊಣಗ್ತಾ ಇದ್ರು. ಆದರೆ ಅದನ್ನು ನಾವಿಬ್ಬರೂ ಕಿವಿಗೆ ಹಾಕಿಕೊಂಡಿದ್ದೇ ಇಲ್ಲ…
Related Articles
Advertisement
ಕಳೆದ ಡಿಸೆಂಬರ್‌ನಲ್ಲಿ, ಮನೆಯವರು ಹುಡುಗನನ್ನು ನೋಡಿದರು. ಜನವರಿಯಲ್ಲಿ ನಾವಿಬ್ಬರೂ ಭೇಟಿ ಆದೆವು. ಇಬ್ಬರಿಗೂ ಪರಸ್ಪರ ಒಪ್ಪಿಗೆ ಆಯಿತು. ಫೆಬ್ರವರಿ ಮೊದಲ ವಾರದಲ್ಲಿನಿಶ್ಚಿತಾರ್ಥ ನಡೆದು, ಮೇ ಮೊದಲ ವಾರದಲ್ಲಿ ಮದುವೆ ಫಿಕ್ಸ್ ಆಯಿತು. ಮದುವೆ ದಿನ ಫಿಕ್ಸ್ ಆದ ಕೂಡಲೇ, ಫ್ರೆಂಲ್ಲಾ ಗಳಿಗೆಲ್ಲಾ ಫೋನ್ ಮಾಡಿ ತಿಳಿಸಿದೆ. ಎಲ್ಲರೂ ಒಂದು ವಾರ ಮೊದಲೇ ರಜೆಗೆ ಅರ್ಜಿ ಹಾಕಿ ಅಂತಲೂ ಹೇಳಿದೆ. ಮಾರ್ಚ್‌ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಕೂಡಾ ಪ್ಲಾನ್ ಮಾಡಿದ್ದೆ. ಯಾವ ಅಡುಗೆಯವರಿಗೆ ಹೇಳುವುದು, ಎಷ್ಟು ಜನಕ್ಕೆ ಊಟ, ಊಟದಲ್ಲಿ ಏನೇನು ಇರಬೇಕು ಅಂತ ಅಪ್ಪ ಒಂದೊಂದಾಗಿ ಡಿಸೈಡ್ ಮಾಡತೊಡಗಿದರು. ಸೀರೆ ಶಾಪಿಂಗ್ ಎಲ್ಲಿ ಮಾಡುವುದು, ಧಾರೆ ಸೀರೆ ಯಾವ ಬಣ್ಣದ್ದು, ರಿಸೆಪ್ಷನ್ ದಿನ ಹುಡುಗನ ಔಟ್‌ಫಿಟ್
ಹೇಗಿರಬೇಕು ಅಂತೆಲ್ಲಾ ಪ್ಲಾನ್ ಮಾಡತೊಡಗಿದೆ. ನನ್ನ ಕನಸಿಗೆ ಸರಿಯಾಗಿ ತಣ್ಣೀರು ಎರಚಬೇಕು ಅಂತ ದೇವರೂ ಪ್ಲಾನ್ ಹಾಕಿದ್ದ ಅಂತ ಕಾಣುತ್ತೆ. ಅದೆಲ್ಲೋ ಹುಟ್ಟಿದ ಕೊರೊನಾ, ವಿಲನ್ ಥರ ಭಾರತಕ್ಕೆ ಬಂತು. ಎಲ್ಲರೂ ಮನೆಯೊಳಗೇ ಇರಿ, ಗುಂಪುಗುಂಪಾಗಿ ಒಟ್ಟಿಗೆ ಸೇರಬೇಡಿ, ಕಲ್ಯಾಣಮಂಟಪಗಳನ್ನು ಕ್ವಾರಂಟೈನ್ ವಾರ್ಡ್ ಮಾಡಿ ಅಂದುಬಿಟ್ಟಿತು ಸರ್ಕಾರ!
ಮದುವೆ-ಮುಂಜಿ ಮಾಡಂಗಿಲ್ಲ, ಮಾಡುವುದಾದರೂ 10-20 ಜನಕ್ಕೆ ಮಾತ್ರ ಅವಕಾಶ ಅಂದರು. ಇಂಥದ್ದೊಂದು ಪರಿಸ್ಥಿತಿ ಎದುರಾಗುತ್ತೆ ಅಂತ ಯಾರು ಊಹಿಸಿದ್ದರು? ಮದುವೆ ಮುಂದೂಡುವ ಮಾತು ಬಂದಾಗ, “ಒಂದು ವಾರ ಲಾಕ್‌ಡೌನ್ ತಾನೇ, ಆಮೇಲೆ ಎಲ್ಲಾ ಸರಿ ಹೋಗುತ್ತೆ…’ ಅಂದುಬಿಟ್ಟರು ಹಿರಿಯರು. ಮಾರ್ಚ್ 31ರವರೆಗೆ ಅಂದಿದ್ದ ಲಾಕ್‌ಡೌನ್ ಏಪ್ರಿಲ್ 14ರಿಂದ ಮೇ ಅಂತ ಮುಂದೆ ಹೋಗುತ್ತಾ ಹೊಯ್ತು. ಇನ್ನೇನು ಮಾಡೋಕಾಗುತ್ತೆ? ಹುಡುಗಿಯ ಮನೆಯಲ್ಲಿ, ವಧು- ವರರ ಅಪ್ಪ ಅಮ್ಮನ ಸಮ್ಮುಖದಲ್ಲೇ ಮದುವೆ ಮಾಡೋದು ಅಂತ ನಿರ್ಧರಿಸಲಾಯ್ತು. ಮದುವೆಯ ಅಂತಿಮ ತಯಾರಿಯಾಗಿ, ಡಿಸಿ, ಎಸ್‌ಪಿ ಬಳಿ ಹೋಗಿ ಅನುಮತಿ ಕೇಳಿ ಬಂದಿದ್ದಾರೆ ಅಪ್ಪ. ಕೇವಲ 20 ಜನಕ್ಕಷ್ಟೇ ಅವಕಾಶ ಅಂತ ಹೇಳಿದ್ದಾರಂತೆ. ಮದುವೆ ಬಗ್ಗೆ ಎಷ್ಟೊಂದು ಕನಸು ಕಂಡಿದ್ದೆ. ಎಲ್ಲವೂ ಚೂರು ಚೂರಾಯ್ತು. “ಎಲ್ಲಾ ಮುಗಿದಮೇಲೆ ರಿಸೆಪ್ಶನ್ ಇಟ್ಟುಕೊಳ್ತೀವಿ. ಆಗ ಎಲ್ಲರೂ ಬರಬೇಕು’ ಅಂತ ಫ್ರೆಂಡ್ಸ್ ಗೆ ಫೋನ್ ಮಾಡಿ, ಬೇಜಾರು ಕಡಿಮೆ ಮಾಡಿಕೊಳ್ಳುತ್ತಿದ್ದೇನೆ ಈಗ… ನಿರ್ಮಲ ಸಿ.