ಬೆಂಗಳೂರು: ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಕೆಯಿಂದ ರಾಜ್ಯದ ಸ್ವಂತ ತೆರಿಗೆ ಆದಾಯ ಇನ್ನಷ್ಟು ಖೋತಾ ಆಗುವ ಆತಂಕ ಎದುರಾಗಿದೆ. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಬದ್ಧತಾ ವೆಚ್ಚ ಇಳಿಕೆ ರೂಪವಾಗಿ ಸರಕಾರಿ ನೌಕರರ ಸಂಬಳದಲ್ಲಿ ನಿರ್ದಿಷ್ಟ ಪಾಲನ್ನು ತಾತ್ಕಾಲಿಕವಾಗಿ ಕಡಿತ ಮಾಡಿ ಪರಿಸ್ಥಿತಿ ಸುಧಾರಿಸಿದ ಅನಂತರ ಮರುಪಾವತಿಸುವ ಬಗ್ಗೆ ರಾಜ್ಯ ಸರಕಾರವು ಗಂಭೀರ ಚಿಂತನೆ ನಡೆಸಿದೆ.
ಕೇಂದ್ರ ಸರಕಾರದ ಅನುಮತಿ ಪಡೆದು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅದನ್ನು ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಿ ಆ ಹಣವನ್ನು ಸರಕಾರಿ ನೌಕರರ ವೇತನ, ಪಿಂಚಣಿಗೆ ಭರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಒಟ್ಟಾರೆ ಎ. 20ರ ಅನಂತರ ಪರಿಸ್ಥಿತಿ ಅವಲೋಕಿಸಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ.
ಬದ್ಧತಾ ವೆಚ್ಚ ಇಳಿಕೆಯಾಗಬೇಕಾದರೆ ಈಗಿನ ಪರಿಸ್ಥಿತಿಯಲ್ಲಿ ವೇತನ, ಪಿಂಚಣಿ ಕಡಿತ ಅನಿವಾರ್ಯ. ಇನ್ನೊಂದೆಡೆ ಸಾಲದ ಮೊರೆ ಹೋಗಲು ಅವಕಾಶವಿದೆ. ಆದರೆ ಸಾಲದ ಹಣವನ್ನು ನಿರ್ದಿಷ್ಟ ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಬಹುದೇ ವಿನಾ ವೇತನ, ಪಿಂಚಣಿಗೆ ಬಳಸಲು ಅವಕಾಶವಿಲ್ಲ. ಹಾಗಾಗಿ ಸಾಲ ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಿ ಅದಕ್ಕೆ ಕಾಯ್ದಿರಿಸಿದ ಬಜೆಟ್ ಅನುದಾನದಲ್ಲಿ ವೇತನ, ಪಿಂಚಣಿ ಭರಿಸುವ ಬಗ್ಗೆಯೂ ಚಿಂತಿಸಬಹುದು ಎನ್ನಲಾಗಿದೆ.
ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ವೇತನ ಕಡಿತಗೊಳಿಸಿದರೆ ಅಪಖ್ಯಾತಿಗೆ ಗುರಿಯಾಗಬೇಕಾದೀತು ಎಂಬ ಕಾರಣಕ್ಕೆ ವೇತನ, ಪಿಂಚಣಿ ಮೊತ್ತದಲ್ಲಿ ತಾತ್ಕಾಲಿಕವಾಗಿ ಕಡಿತ ಮಾಡಿ ಮುಂದೆ ಮರುಪಾವತಿ ಮಾಡುವ ಕಸರತ್ತು ನಡೆದರೂ ಅಚ್ಚರಿ ಇಲ್ಲ.
ತೆರಿಗೆ ಆದಾಯ ಖೋತಾ
2020-21ನೇ ಸಾಲಿನಲ್ಲಿ ರಾಜ್ಯ ಸರಕಾರ ವಾಣಿಜ್ಯ, ಅಬಕಾರಿ, ಮುದ್ರಾಂಕ ಮತ್ತು ನೋಂದಣಿ ಹಾಗೂ ಸಾರಿಗೆ ತೆರಿಗೆ ಮೂಲದಿಂದ ಒಟ್ಟು 1.24 ಲಕ್ಷ ಕೋ.ರೂ. ನಿರೀಕ್ಷಿಸಿದೆ. ಆದರೆ ಎ. 1ರಿಂದಲೇ ಇದು ಸ್ಥಗಿತವಾಗಿದೆ. ವಾಣಿಜ್ಯ ತೆರಿಗೆಯಿಂದ ಅತ್ಯಲ್ಪ ಆದಾಯ ಸಂಗ್ರಹವಾಗಿರಬಹುದು. ಸೇವಾ ತೆರಿಗೆಯಿಂದಲೂ ಆದಾಯ ಬರುತ್ತಿಲ್ಲ. ಕೇಂದ್ರದಿಂದ ಕೇಂದ್ರೀಯ ತೆರಿಗೆ ಪಾಲಿನ ಹಣ, ನಾನಾ ಯೋಜನೆಗಳಿಗೆ ನೀಡುವ ಕೇಂದ್ರದ ಪಾಲಿನ ಮೊತ್ತ, ಅನುದಾನ ಬಿಡುಗಡೆಯೂ ವಿಳಂಬ ಇಲ್ಲವೇ ಕೈತಪ್ಪುವ ಸಾಧ್ಯತೆ ಇದೆ.
– ಎಂ. ಕೀರ್ತಿಪ್ರಸಾದ್