Advertisement
ಈ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿ ಗಳಿದ್ದರೂ ಮೀಸಲಾತಿ ನಿಗದಿ ವಿಚಾರವಾಗಿ ಕಾನೂನು ಸಮರ, ಒಬಿಸಿ ವರ್ಗದವರಿಗೆ ಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ, ಈ ಆದೇಶದ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ ಆಯೋಗ ರಚಿಸಿದುದು, ಇವೆಲ್ಲದರ ನಡುವೆ ಎದುರಾದ ಚುನಾವಣೆಗಳು… ಹೀಗೆ ಸುದೀರ್ಘ ವಿಳಂಬದ ಬಳಿಕ ಕೊನೆಗೂ ರಾಜ್ಯ ಸರಕಾರ ಅಳೆದೂ ತೂಗಿ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
Related Articles
Advertisement
ಚುನಾವಣ ದಿನ ನಿಗದಿಗೆ ವಿನಾಕಾರಣ ಇನ್ನಷ್ಟು ವಿಳಂಬ ಮಾಡದೆ ಆದಷ್ಟು ಕ್ಷಿಪ್ರಗತಿಯಲ್ಲಿ ಈ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಅಧಿಕಾರ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಅಷ್ಟು ಮಾತ್ರವಲ್ಲದೆ ಮೀಸಲಾತಿ ನಿಗದಿ ವಿಷಯವಾಗಿ ಸುದೀರ್ಘ ಕಾನೂನು ಹೋರಾಟದ ಸಂದರ್ಭದಲ್ಲಿ ಹೈಕೋರ್ಟ್‌ನ ಸ್ಪಷ್ಟ ನಿರ್ದೇಶನದ ಬಳಿಕ ರಾಜ್ಯ ಸರಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಪ್ರಕಟಿಸಿರುವ ಮೀಸಲಾತಿ ಪಟ್ಟಿಯ ವಿರುದ್ಧ ಆಕಾಂಕ್ಷಿಗಳು ಮತ್ತೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರುವುದರಿಂದ ಸರಕಾರ ಈ ವಿಷಯದಲ್ಲಿ ಇನ್ನಷ್ಟು ಕಾಲಹರಣ ಮಾಡುವುದು ತರವಲ್ಲ.
ರಾಜ್ಯದ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ನಾಗರಿಕರಿಗಂತೂ ತಮ್ಮ ವಾರ್ಡ್‌ನ ಸದಸ್ಯ ಯಾರು ಎಂಬುದು ಕೂಡ ಮರೆತುಹೋಗಿರುವ ಪರಿಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಆಡಳಿತವಿದ್ದುದರಿಂದ ಈ ಸಂಸ್ಥೆಗಳ ಸದಸ್ಯರು ಕೂಡ ಹಿನ್ನೆಲೆಗೆ ಸರಿಯುವಂತಾಗಿತ್ತು. ತೀವ್ರತೆರನಾದ ಸಮಸ್ಯೆ ಬಾಧಿಸಿದಾಗಲಷ್ಟೇ ಆಗೊಮ್ಮೆ ಈಗೊಮ್ಮೆ ಎಂಬಂತೆ ಕಾಣಿಸಿಕೊಳ್ಳುತ್ತಿದ್ದ ಸದಸ್ಯರು ಈಗ ಮತ್ತೆ ಸಕ್ರಿಯವಾಗಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಸಜ್ಜಾಗಬೇಕು.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದು ಚುನಾಯಿತ ಪ್ರತಿನಿಧಿಗಳು ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರ ಸೂತ್ರ ಹಿಡಿಯುತ್ತಿದ್ದಂತೆಯೇ ಸದಸ್ಯರು ತಮ್ಮ ವಾರ್ಡ್‌ಗಳ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು. ವರ್ಷದ ಅವಧಿಯಲ್ಲಿ ಮತ್ತೆ ಚುನಾವಣೆ ಎದುರಾಗಲಿರುವುದರಿಂದ ಹಾಲಿ ಚುನಾಯಿತ ಸದಸ್ಯರಿಗೆ ಬಾಕಿ ಉಳಿದಿರುವ ಅವಧಿ ಅಗ್ನಿ ಪರೀಕ್ಷೆಯೇ ಸರಿ.