ಮಂಜನಾಡಿ: ಜಿಲ್ಲೆಯಲ್ಲಿ ಮಂಜೂರಾಗಿರುವ ಮೌಲನಾ ಆಜಾದ್ ಮಾದರಿ ಶಾಲೆಯಲ್ಲಿ ಮಂಗಳಾಂತಿಯ ಮಾದರಿ ಶಾಲೆಯೂ ಒಂದಾಗಿದ್ದು, ಈ ಶಾಲೆಯನ್ನು ಇಲ್ಲಿ ಪ್ರಾರಂಭಿಸಲು ಸ್ಥಳೀಯ ಜನಪ್ರತಿನಿಧಿಗಳ ಶ್ರಮ ಮಹತ್ವದಾಗಿದ್ದು, ಇದನ್ನು ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡುವ ಗುರಿಯನ್ನು ಹೊಂದಬೇಕು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ಮಂಜನಾಡಿ ಗ್ರಾಮದ ಮಂಗಳಾಂತಿಯಲ್ಲಿ ಕರ್ನಾಟಕ ಸರಕಾರ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ಆರಂಭಿಸಲಾದ ಮೌಲನಾ ಆಜಾದ್ ಮಾದರಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಯೋಜನೆಯನ್ನು ಸರಕಾರ ಮಂಜೂರಾತಿ ಮಾಡುವಾಗ ಅದನ್ನು ತಮ್ಮ ಕ್ಷೇತ್ರಕ್ಕೆ ಒದಗಿಸಲು ಹಲವು ಮಂದಿ ಹಲವು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಮಂಗಳಾಂತಿಯಲ್ಲಿ ಆರಂಭ ಗೊಂಡ ನೂತನ ಶಾಲೆಯ ನಿರ್ಮಾಣದ ಹಿಂದೆ ಇರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ಎಸ್. ಕರೀಂ ಅವರ ಶ್ರಮ ಶ್ಲಾಘನೀಯ ಎಂದ ಅವರು ಅಲ್ಪಸಂಖ್ಯಾಕ ಸಮುದಾಯದ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯ ವಿದ್ಯಾರ್ಥಿಗಳಿಗೆ ಶೇ.75 ಹಾಗೂ ಇತರ ವಿದ್ಯಾರ್ಥಿಗಳಿಗೆ ಶೇ.25 ಮೀಸಲಾತಿ ಇರುವುದರಿಂದ ಸರಕಾರದ ವ್ಯವಸ್ಥೆಗೆ ಅನುಗುಣವಾಗಿ ಈ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಅವಕಾಶ ಇದೆ ಎಂದರು.ಜಿ.ಪಂ. ಮಾಜಿ ಸದಸ್ಯ ಎನ್.ಎಸ್. ಕರೀಂ ಅವರನ್ನು ಗೌರವಿಸಲಾಯಿತು.
“ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ’
ಅಲ್ಪಸಂಖ್ಯಾಕ ಇಲಾಖೆಗೆ ಈ ಹಿಂದಿನ ಸರಕಾರ ಅವಧಿಯಲ್ಲಿ 400 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಈಗಿನ ರಾಜ್ಯ ಸರಕಾರ 2,200 ಕೋಟಿ ರೂ. ಮಂಜೂರು ಮಾಡಿದೆ. ಎಲ್ಲ ಮೊತ್ತದ ಸದ್ಬಳಕೆ ಮಾಡಲು ಉತ್ತಮ ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.