ಬೀದರ: ಮರಾಠಾ ಸಮಾಜದ ಪ್ರಬಲ ನಾಯಕ, ಮಾಜಿ ಶಾಸಕ ಎಂ.ಜಿ ಮುಳೆ ನಾಮಪತ್ರ ವಾಪಸ್‌ದಿಂದ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಮಹತ್ವದ ತಿರುವು ಪಡೆದಿದೆ. ಮರಾಠಾ ಸಮಾಜ ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದು ಪಕ್ಷಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ ಕ್ಷೇತ್ರದಲ್ಲಿ ನಿರ್ಣಾಯಕ ಮತಗಳಾಗಿರುವ ಮರಾಠಾ ವೋಟುಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಯಾರಿಗೆ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲ ಮೂಡಿದೆ.
ಈ ಹಿಂದೆ 1999ರಲ್ಲಿ ಜಾತ್ಯತೀತ ಜನತಾದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ಜಿ ಮುಳೆ ನಂತರ ಕಾಂಗ್ರೆಸ್ ಸೇರಿದ್ದರು. ಆ ಬಳಿಕ ಸೋಲುಂಡು ಮತ್ತೆ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಗೆ ಟಿಕೆಟ್ ಕೈತಪ್ಪಿದ್ದರಿಂದ ಎನ್‌ಸಿಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ, ಶನಿವಾರ ಕೊನೆ ಗಳಿಗೆಯಲ್ಲಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಬಿಜೆಪಿ ನಾಯಕರ ಒತ್ತಡದಿಂದ ಮುಳೆ ಈ ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಆರಂಭದಲ್ಲಿ ಮುಳೆ ಸ್ಪರ್ಧೆಯಿಂದ ಸಾಂಪ್ರದಾಯಿಕ ಮತಗಳಾಗಿರುವ ಮರಾಠಾ ಸಮಾಜದ ಮತಗಳು ಕೈತಪ್ಪಬಹುದೆಂದು ಬಿಜೆಪಿ ಪಾಳಯಕ್ಕೆ ಆತಂಕ ಇತ್ತು. ಆದರೆ, ಶುಕ್ರವಾರ ಉಪ ಚುನಾವಣೆ ಕುರಿತು ಚರ್ಚಿಸಲು ಜರುಗಿದ ಮರಾಠಾ ಸಮಾಜದ ಸಭೆಗೆ ಆಗಮಿಸಿದ್ದ ಸಂಸದ ಮತ್ತು ಬಸವಕಲ್ಯಾಣದ ಕ್ಷೇತ್ರದ ಉಸ್ತುವಾರಿಯೂ ಆಗಿರುವ ಸಂಸದ ಭಗವಂತ ಖೂಬಾಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ವಾಪಸ್ ಕಳುಹಿಸಲಾಗಿತ್ತು. ಅಷ್ಟೇ ಅಲ್ಲ ಎನ್‌ಸಿಪಿಯ ಮುಳೆ ಅವರನ್ನು ಬೆಂಬಲಿಸಲು ಸಹ ಸಮಾಜ ನಿರ್ಧರಿಸಿತ್ತು. ಹಾಗಾಗಿ ಮುಳೆ ಕಣದಿಂದ ಹಿಂದಕ್ಕೆ ಸರಿದರೂ ಮರಾಠಿಗರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದರಿಂದ ಈಗ ಸಮಾಜದ ವೋಟ್‌ಗಳು ಯಾವ ಪಕ್ಷ, ಅಭ್ಯರ್ಥಿ ಪಾಲಾಗಬಹುದು ಎಂಬ ಗೊಂದಲ ಸೃಷ್ಟಿಯಾಗಿದೆ.
ಸಮಾಜದ ಮುನಿಸಿಗೆ ಕಾರಣ?: ಬಿಜೆಪಿ ಸರ್ಕಾರ ಮರಾಠಾ ಸಮಾಜ ನಿರ್ಲಕ್ಷಿಸುವುದರ ಜತೆಗೆ ಅನ್ಯಾಯ ಮಾಡುತ್ತಿದೆ. ಅ ಧಿಕಾರಕ್ಕೆ ಬರುವ ಮುನ್ನ ಸಮಾಜವನ್ನು 2ಎಗೆ ಸೇರಿಸುವ ಭರವಸೆ ನೀಡಲಾಗಿತ್ತು. ಆದರೆ, ಈಗ ಸರ್ಕಾರ ಆಶ್ವಾಸನೆ ಮರೆತಿದೆ. ಮರಾಠಾ ಅಭಿವೃದ್ಧಿ ಮಂಡಳಿ ಸ್ಥಾಪನೆ ಸಹ ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಬಸವಕಲ್ಯಾಣದಲ್ಲಿ ಶಿವಾಜಿ ಪಾರ್ಕ್ ಸ್ಥಾಪನೆ ಬೇಡಿಕೆ ಈಡೇರಿಸಲ್ಲ. ಇದು ಬಿಜೆಪಿ ವಿರುದ್ಧ ಸಮಾಜದ ಮುನಿಸಿಗೆ ಕಾರಣವಾಗಿದೆ.
ಒಂದೆಡೆ ಬೆಂಬಲ ಸೂಚಿಸಿದ್ದ ಎನ್‌ಸಿಪಿಯ ಮುಳೆ ನಾಮಪತ್ರ ಹಿಂಪಡೆದಿರುವುದು ಮತ್ತು ಬಿಜೆಪಿ ವಿರುದ್ಧ ಅತೃಪ್ತಗೊಂಡಿರುವ ಮರಾಠಾ ಸಮಾಜ ಯಾರನ್ನು ಬೆಂಬಲಿಸಬಹುದು ಎಂಬುದು ನಿಗೂಢ. ಬಿಜೆಪಿ ವಿರುದ್ಧ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪ ರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪರ ಮತಗಳು ವಾಲಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಇದರಿಂದ ಬಸವಣ್ಣನ ಕರ್ಮಭೂಮಿಯಲ್ಲಿ ಕಮಲ ಅರಳಿಸಿ ಕ್ಷೇತ್ರದಲ್ಲಿ ಹಿಡಿತ ಸಾ ಧಿಸಲು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.
-ಶಶಿಕಾಂತ ಬಂಬುಳಗ