ಬೆಂಗಳೂರು: ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಸರ್ಕಾರದ ಉದ್ದೇಶಕ್ಕೆ ಸಾಲ ಮನ್ನಾದಿಂದ ಹಿನ್ನಡೆಯಾಯಿತೇ?ಹೌದು, ಎನ್ನುತ್ತಿವೆ ಸರ್ಕಾರದ ಮೂಲಗಳು. ಈ ಮಾಹಿತಿಯ ಪ್ರಕಾರ, ರೈತರ ಸಾಲ ಮನ್ನಾ ಘೋಷಣೆಯ ಎಫೆಕ್ಟ್ ಈಗ ಬೇರೆ ಇಲಾಖೆಗಳ ಬಜೆಟ್ ಘೋಷಣೆಗಳ ಮೇಲೆ ಆಗುತ್ತಿದೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಸ್ಥಾಪಿಸುವ ರಾಜ್ಯ ಸರ್ಕಾರದ ಉದ್ದೇಶಕ್ಕೆ ಇದರಿಂದಾಗಿ ಹಿನ್ನಡೆಯಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಪ್ರಯತ್ನಕ್ಕೆ ಹಣಕಾಸು ಇಲಾಖೆ ಬ್ರೇಕ್ ಹಾಕಿದ್ದು, ರೈತರ ಸಾಲ ಮನ್ನಾ ಮಾಡಿರುವುದರಿಂದ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹಣ ಇಲ್ಲ ಎಂದು ಹೇಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರ ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿದ್ದು, ಅದಕ್ಕಾಗಿ 8165 ಕೋಟಿ ರೂಪಾಯಿ ಹೆಚ್ಚುವರಿ ಹಣ ಹೊಂದಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಸರ್ಕಾರ 2017-18 ನೇ ಸಾಲಿನಲ್ಲಿ ಘೋಷಣೆ ಮಾಡಿದ್ದ ಬಾಗಲಕೋಟೆ, ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣಕಾಸಿನ ತೊಂದರೆ ಇದೆ. ಈ ವರ್ಷ ಯೋಜನೆ ಅನುಷ್ಠಾನ ಮಾಡುವುದು ಕಷ್ಟ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ತೆರೆಯುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಬಜೆಟ್‌ನಲ್ಲೇ ಮಡಿಕೇರಿ, ಕಾರವಾರ, ಗದಗ, ಕೊಪ್ಪಳ, ಕಲಬುರಗಿ ಹಾಗೂ ಚಾಮರಾಜನಗರಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿ ಪ್ರತಿ ಕಾಲೇಜಿನಲ್ಲಿಯೂ 150 ವಿದ್ಯಾರ್ಥಿಗಳಿಗೆ ಸೀಟು ದೊರೆಯುವಂತೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮತ್ತೆ ಹೊಸದಾಗಿ ಆರು ಮೆಡಿಕಲ್ ಕಾಲೇಜು ತೆರೆಯುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ರೈತರ ಸಾಲ ಮನ್ನಾದ ಪರಿಣಾಮ ಆರಂಭಕ್ಕೂ ಮುನ್ನವೇ ಹಣಕಾಸು ಇಲಾಖೆಯಿಂದ ವಿಘ್ನ ಎದುರಾಗಿದೆ.
ಉದ್ದೇಶಿರ ಪ್ರತಿ ಹೊಸ ಕಾಲೇಜು ಸ್ಥಾಪನೆಗೆ ಕನಿಷ್ಠ 150 ರಿಂದ 200 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದ್ದು, ಕಾಲೇಜು ಕಟ್ಟಡ, ಅಗತ್ಯ ಮೂಲ ಸೌಕರ್ಯ ಮತ್ತು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹಣಕಾಸಿನ ತೊಂದರೆ ಇದೆ ಎಂದು ಹಣಕಾಸು ಇಲಾಖೆ ಸಾಲ ಮನ್ನಾದ ಕಾರಣ ಹೇಳಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಈಗಾಗಲೇ 18 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಹೊಸ ಆರು ಕಾಲೇಜುಗಳು ಪ್ರಾರಂಭವಾದರೆ, ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ತೆರೆದಂತಾಗುತ್ತದೆ. ಅಲ್ಲದೆ, ಹೊಸ ಕಾಲೇಜುಗಳಲ್ಲಿ ಪ್ರತಿ ಕಾಲೇಜಿಗೆ 150 ಸೀಟುಗಳಂತೆ ಸುಮಾರು 900 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಲಭ್ಯವಾಗುತ್ತಿದ್ದವು. ಇದರಿಂದ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಲ್ಲಿ ಸೀಟು ಪಡೆಯಲು ಅನುಕೂಲವಾಗುತ್ತಿತ್ತು. ಆದರೆ, ಹಣಕಾಸು ಇಲಾಖೆಯ ಈ ನಿರ್ಧಾರದಿಂದ ಸುಮಾರು 900 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೀಟು ಕೈ ತಪ್ಪಿದಂತಾಗುತ್ತದೆ.
ಆರು ಜಿಲ್ಲೆಯ ಶಾಸಕರು ಮತ್ತು ಸಚಿವರು ತಮ್ಮ ಜಿಲ್ಲೆಗಳಲ್ಲಿ ಘೋಷಣೆ ಮಾಡಿರುವ ವೈದ್ಯಕೀಯ ಕಾಲೇಜುಗಳನ್ನು ಬೇಗ ಆರಂಭಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಎಚ್.ವೈ ಮೇಟಿ, ವಿಧಾನಸಭೆ ಉಪಸಭಾದ್ಯಕ್ಷ ಎನ್.ಎಚ್ ಶಿವಶಂಕರ ರೆಡ್ಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಅದರಂತೆ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಹಣಕಾಸು ಇಲಾಖೆಗೆ ಮತ್ತೂಮ್ಮೆ ಮನವಿ ಮಾಡಿಕೊಂಡು ಇದೇ ಹಣಕಾಸು ವರ್ಷದಲ್ಲಿ ಯೋಜನೆ ಆರಂಭಿಸಿದರೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲೇಜುಗಳನ್ನು ಆರಂಭಿಸಲು ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮತಿ ಪಡೆಯಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ನಡೆಸಿದ್ದಾರೆ.
ಆರು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತಂತೆ ಹಣಕಾಸು ಇಲಾಖೆಯೊಂದಿಗೆ ಮಾತುಕತೆ ನಡೆಯುತ್ತಿದೆ. ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಇದೇ ಹಣಕಾಸು ವರ್ಷದಲ್ಲಿ ಯೋಜನೆ ಆರಂಭಿಸುವ ಪ್ರಯತ್ನ ನಡೆದಿದೆ.
– ಡಾ. ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ.
– ಶಂಕರ ಪಾಗೋಜಿ