ನವದೆಹಲಿ: ಚುನಾವಣಾ ರ್ಯಾಲಿಗಳಲ್ಲಿ ಬ್ಯಾಂಕ್ ಸಾಲಗಳು ಹಾಗೂ ಅನುತ್ಪಾದಕ ಆಸ್ತಿ(ಎನ್‌ಪಿಎ) ವಿಚಾರವನ್ನೆತ್ತಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಶುಕ್ರವಾರ ಪ್ರಚಾರ ರ್ಯಾಲಿ ವೇಳೆ, ರಾಹುಲ್ ಹಾಗೂ ಅವರ ಭಾವ ರಾಬರ್ಟ್ ವಾದ್ರಾ ವಿರುದ್ಧ ವಾಗ್ಧಾಳಿ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಕೊಡಲಾದ ಸಾಲಗಳೆಲ್ಲ ಅನುತ್ಪಾದಕ ಆಸ್ತಿ(ಎನ್‌ಪಿಎ)ಯಾಗಿ ಬದಲಾಗಿವೆ. ಎನ್‌ಪಿಎ ಹೆಚ್ಚಾಗಲು ಕಾಂಗ್ರೆಸ್‌ನ ದುರಾಡಳಿತವೇ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ, ಯುಪಿಎ ಅವಧಿಯಲ್ಲಿ ದೊಡ್ಡ ಕಂಪನಿಗಳಿಗೆ ಸಾವಿರಾರು ಕೋಟಿ ರೂ.ಗಳ ಸಾಲ ನೀಡಲಾಗಿದೆ. ಅದಕ್ಕೆ ಪ್ರತಿಯಾಗಿ ನೆಹರೂ-ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾದ್ರಾಗೆ ಭಾರೀ ಮೊತ್ತದ ಕಮಿಷನ್ ಕೂಡ ಸಿಕ್ಕಿದೆ ಎಂದೂ ಆರೋಪಿಸಿದ್ದಾರೆ. ಅಲ್ಲದೆ, ಆ ಕಮಿಷನ್ ಹಣದಿಂದ ವಾದ್ರಾ ಅವರು ಬಿಕಾನೇರ್‌ನಲ್ಲಿ ಅತ್ಯಂತ ಅಗ್ಗದ ದರದಲ್ಲಿ 150 ಹೆಕ್ಟೇರ್ ಭೂಮಿ ಯನ್ನು ಖರೀದಿಸಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಉತ್ತರಿಸುತ್ತಾರಾ ಎಂದು ಶಾ ಪ್ರಶ್ನಿಸಿದ್ದಾರೆ.
ಕೆಸಿಆರ್‌ಗೆ ಕೋಪ ಬಂದಾಗ: ಇನ್ನೊಂದೆಡೆ, ತೆಲಂ ಗಾಣದ ಕೋಮಾರಾಮ್ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಸಿಎಂ ಕೆ. ಚಂದ್ರ ಶೇಖರ್ ರಾವ್ ಸಿಟ್ಟಿಗೆದ್ದ ಪ್ರಸಂಗ ನಡೆದಿದೆ. ಮುಸ್ಲಿಮರಿಗೆ ಶೇ.12 ಮೀಸಲಾತಿ ಕಲ್ಪಿಸುವ ಪ್ರಸ್ತಾವಿತ ಮಸೂದೆಯ ಬಗ್ಗೆ ವ್ಯಕ್ತಿಯೊಬ್ಬ ಪ್ರಶ್ನಿಸಿದ್ದು, ಆಕ್ರೋಶಗೊಂಡ ಕೆಸಿಆರ್, “ಏನು ಮಾತನಾಡುತ್ತಿದ್ದೀಯಾ? ಬಾಯಿ ಮುಚ್ಚಿ ಕುಳಿತುಕೋ. ನಿನಗ್ಯಾಕೆ ಇಷ್ಟೊಂದು ಅವಸರ? ಉತ್ತರ ನಿನ್ನ ಅಪ್ಪನಿಗೆ ಕೊಡುತ್ತೇನೆ’ ಎಂದು ಹೇಳಿದ್ದಾರೆ.
ಅಜರ್‌ಗೆ ಕಾರ್ಯಾಧ್ಯಕ್ಷ ಸ್ಥಾನ: ಕಾಂಗ್ರೆಸ್‌ನ ಮಾಜಿ ಸಂಸದ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ತೆಲಂಗಾಣದ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್‌ನಲ್ಲಿ ಕೆಲವೊಂದು ಹೊಸ ನೇಮಕಗಳಿಗೆ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದು, ಇಬ್ಬರು ಉಪಾಧ್ಯಕ್ಷರು, 8 ಪ್ರಧಾನ ಕಾರ್ಯದರ್ಶಿ ಗಳು ಮತ್ತು ನಾಲ್ವರು ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ. ಇದೇ ವೇಳೆ, ದೆಹಲಿ ಸಂಸದ ಸಂದೀಪ್ ದೀಕ್ಷಿತ್ ರನ್ನು ಎಐಸಿಸಿ ಕಾರ್ಯದರ್ಶಿಯಾಗಿ ನೇಮಿಸಿದ್ದರೆ, ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್‌ಗೆ ಲಿಂಗರಾಜು ಅವರನ್ನು ನೇಮಕ ಮಾಡಲಾಗಿದೆ.
ಚಂದ್ರಬಾಬು ನಾಯ್ಡು ಅವರು ಕುಕಾಟ್‌ಪಳ್ಳಿ ಕ್ಷೇತ್ರದಲ್ಲಿ ಸೋಲು ಖಚಿತ ಎಂದು ಗೊತ್ತಿದ್ದರೂ ಎನ್‌ಟಿಆರ್ ಮೊಮ್ಮಗಳಾದ ಸುಹಾಸಿನಿ ಅವರಿಗೆ ಟಿಕೆಟ್ ನೀಡಿದ್ದೇಕೆ? ಅಲ್ಲಿ ನಾಯ್ಡು ಪುತ್ರ ಲೋಕೇಶ್‌ರನ್ನು ಏಕೆ ಕಣಕ್ಕಿಳಿಸಲಿಲ್ಲ?
ಕೆ.ಟಿ.ರಾಮರಾವ್, ತೆಲಂಗಾಣ ಸಚಿವ
ರಾಜಸ್ಥಾನದ ಝಲರಾಪಟಣ್ ಸಿಎಂ ರಾಜೇ ಅವರ ಭದ್ರಕೋಟೆಯಾಗಿದ್ದು, ಅವರನ್ನು ಅಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಆದರೂ, ನಾನು ಹೋರಾಡಿ ಗೆಲ್ಲಲೆಂದೇ ಇಲ್ಲಿಗೆ ಬಂದಿದ್ದೇನೆ.
ಮಾನವೇಂದ್ರ ಸಿಂಗ್, ಕಾಂಗ್ರೆಸ್ ಅಭ್ಯರ್ಥಿ