ಥಾಣೆ: ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ವೇಳೆ ಕೊಲೆ ಆರೋಪಿಯೋರ್ವ ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದಿರುವ ಘಟನೆಯೊಂದು ಮಹಾರಾಷ್ಟ್ರದ ಥಾಣೆಯಲ್ಲಿರುವ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು ಇದೀಗ ಆರೋಪಿಯ ವಿರುದ್ಧ ಮತ್ತೆ ಎಫ್‌ಐಆರ್ ದಾಖಲಾಗಿದೆ.
ಘಟನೆ ಕಲ್ಯಾಣ್ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ(ಡಿ.21) ಮಧ್ಯಾಹ್ನ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಿರಣ್ ಸಂತೋಷ್ ಭರಮ್ ಅವರನ್ನು ವಿಚಾರಣೆಗಾಗಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಜಿ.ವಾಘಮಾರೆ ಅವರ ಮುಂದೆ ಹಾಜರುಪಡಿಸಲಾಗಿತ್ತು, ಇದಕ್ಕೂ ಮೊದಲು ವಕೀಲರ ಬಳಿ ಆರೋಪಿ ತನ್ನ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಸುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡುವಂತೆ ವಕೀಲರ ಬಳಿ ಹೇಳಿಕೊಂಡಿದ್ದ ಆದರೆ ಶನಿವಾರ ಮಧ್ಯಾಹ್ನ ವಿಚಾರಣೆಗಾಗಿ ಕೋರ್ಟ್ ಗೆ ಬಂದ ವೇಳೆ ನ್ಯಾಯಾಧೀಶರು ಕಿರಣ್ ಪರ ವಕೀಲರನ್ನು ವಾದ ಮಂಡನೆ ಮಾಡಲು ಕರೆದಿದ್ದಾರೆ ಆದರೆ ಈ ವೇಳೆ ಆರೋಪಿ ಪರ ವಕೀಲ ಹಾಜರಾಗಿರಲಿಲ್ಲ, ಈ ವೇಳೆ ನ್ಯಾಯಾಧೀಶರು ಆರೋಪಿ ಪರವಾಗಿ ವಾದ ಮಂಡಿಸಲು ಇನ್ನೋರ್ವ ವಕೀಲರನ್ನು ನೇಮಿಸಲು ಕಾಲಾವಕಾಶ ನೀಡಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ನನ್ನ ವಿಚಾರಣೆ ಇನ್ನೂ ತಡವಾಗುತ್ತದೆ ಎಂದು ಹೇಳಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ನ್ಯಾಯಾಧೀಶರತ್ತ ಎಸೆದಿದ್ದಾನೆ, ಎಸೆದ ಚಪ್ಪಲಿ ನ್ಯಾಯಾಧೀಶರ ಮೇಜಿನ ಮುಂಭಾಗದಲ್ಲಿದ್ದ ಮರದ ಚೌಕಟ್ಟಿಗೆ ತಾಗಿ ಕೆಳಗೆ ಕೂತಿದ್ದ ಕ್ಲರ್ಕ್ ಮೇಲೆ ಬಿದ್ದಿದೆ ಇದರಿಂದ ಅಲ್ಲಿದ್ದ ಎಲ್ಲರೂ ಒಮ್ಮೆ ಆಘಾತಕ್ಕೆ ಒಳಗಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 132 ಮತ್ತು 125ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು