Advertisement

10 ಲಕ್ಷ ಹೊಸ ರೈತರಿಗೆ ಸಾಲ ಸೌಲಭ್ಯ

04:32 PM Aug 13, 2018 | Team Udayavani |

ದಾವಣಗೆರೆ: ರೈತರನ್ನು ಖಾಸಗಿ ಲೇವಾದೇವಿಗಾರರಿಂದ ಪಾರುಮಾಡಿ ಅವರಿಗೆ ಸಹಕಾರ ಸಂಘ, ಬ್ಯಾಂಕ್‌ ಗಳಿಂದ ಸಾಲ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಬಂಡೆಪ್ಪ
ಕಾಶೆಂಪುರ ತಿಳಿಸಿದ್ದಾರೆ.

Advertisement

ಭಾನುವಾರ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಹಕಾರ, ಕೃಷಿ ಮಾರುಕಟ್ಟೆ ಹಿರಿಯ ಅಧಿಕಾರಿಗಳ ಸಭೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ವರ್ಷ ಸುಮಾರು 10 ಲಕ್ಷದಷ್ಟು ಹೊಸ ರೈತರಿಗೆ ಸಾಲ ನೀಡುವ ಮೂಲಕ ಖಾಸಗಿಯವರಿಂದ ಸಾಲ ಪಡೆಯುವುದನ್ನು ನಿಯಂತ್ರಿಸಲಾಗುವುದು ಎಂದರು.

ಪ್ರತಿ ವರ್ಷ ಶೇ. 25 ರಷ್ಟು ಹೊಸ ರೈತರಿಗೆ ಸಾಲ ಕೊಡಬೇಕು ಎಂದು ಬ್ಯಾಂಕ್‌ ನಿಯಾಮಾವಳಿ ಹೇಳುತ್ತವೆ. ಆದರೆ, ಕೇವಲ ಶೇ. 5 ರಿಂದ 10 ರಷ್ಟು ರೈತರಿಗೆ ಮಾತ್ರವೇ ಹೊಸ ಸಾಲ ದೊರೆಯುತ್ತವೆ. ಈ ಪ್ರಮಾಣ ಹೆಚ್ಚಾಗಲು ಸಹಕಾರ ಸಂಘಗಳು ಮುಂದಾಗಬೇಕು ಎಂದು ಸೂಚಿಸಿದರು. 2017-18 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 80,213 ರೈತರಿಗೆ 231 ಕೋಟಿ ಸಾಲ ನೀಡಲಾಗಿದೆ. ಅದರಲ್ಲಿ 222 ಕೋಟಿ ಸಾಲ ಮನ್ನಾ ಆಗಿದೆ. ಸರ್ಕಾರ 198
ಕೋಟಿ ನೀಡಿದೆ. 31 ಕೋಟಿ ಬಾಕಿ ಬರಬೇಕಾಗಿದೆ. ವರ್ಷಕ್ಕೆ 4 ಬಾರಿ ಹೊಸ ಸಾಲ ನೀಡಲಾಗುತ್ತದೆ. ಜನವರಿಯಲ್ಲಿ
ಬೇಸಿಗೆ ಬೆಳೆಗಾಗಿ ಸಾಲ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಸಾಲಕ್ಕೆ ಬೇಡಿಕೆ ಇದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಎನ್‌. ಸುರೇಶ್‌ ಮಾಹಿತಿ ನೀಡಿದರು.

ಸಾಲಮನ್ನಾ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗಿರುತ್ತವೆ. ಮಂಡ್ಯದಲ್ಲಿ ಸಹಕಾರ ಸಂಘದ ಕಾರ್ಯದರ್ಶಿ ಸತ್ತಿರುವ ರೈತನ ಹೆಸರಿನಲ್ಲಿ ಸಾಲಮನ್ನಾ ಮಾಡಿ ಹಣ ವಂಚಿಸಿದ್ದಾನೆ. ಹಾಗಾಗಿ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸಚಿವರು ಸೂಚಿಸಿದರು. ರೈತರ ಸಾಲದ ಖಾತೆಗಳೊಂದಿಗೆ ಆಧಾರ ಲಿಂಕ್‌ ಮಾಡುವುದರಿಂದ ವಂಚನೆ ಪ್ರಕರಣ ತಡೆಗಟ್ಟಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದರು.

2017-18 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ 89 ಸಾವಿರ ಕ್ವಿಂಟಲ್‌ ರಾಗಿ ಖರೀದಿಸಲಾಗಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಹೆಚ್ಚಿನ ಉತ್ಪಾದನೆಯಾಗುತ್ತಿದೆ. ಕ್ವಿಂಟಲ್‌ ಮೆಕ್ಕಜೋಳಕ್ಕೆ 1,700 ರೂಪಾಯಿ ಬೆಂಬಲ ಇದೆ. ಆದರೆ, ಬಿಹಾರದಿಂದ 1200 ರೂಪಾಯಿಗೆ ಮೆಕ್ಕೆಜೋಳ ಬರುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಬಿ. ಆನಂದ್‌ ತಿಳಿಸಿದರು.

Advertisement

ಹೊರರಾಜ್ಯದಿಂದ ಆಮದಾಗುವ ಪದಾರ್ಥಗಳಿಗೆ ನಿಯಂತ್ರಣ ಇಲ್ಲವೇ ಎಂದು ಸಚಿವರು ಪ್ರಶ್ನಿಸಿದರು. ಯಾವುದೇ ರಾಜ್ಯದಿಂದ ಬರುವ ಆಹಾರ ಧಾನ್ಯಗಳನ್ನು ರಾಜ್ಯ ನಿರ್ಬಂಧಿ ಸಲು ಸಾಧ್ಯವಿಲ್ಲ, ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.

ರೈತ ನೇರವಾಗಿ ಮಾರಾಟ ಮಾಡಿದರೆ ಸರಿ. ಆದರೆ, ವರ್ತಕರು ಬೇರೆ ರಾಜ್ಯದಿಂದ ಬಂದು ಮಾರಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಮೊದಲು ನಮ್ಮ ರೈತರು ಉಳಿಯಬೇಕು. ರಾಜ್ಯ ರಾಜ್ಯ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತವೆ. ಎಪಿಎಂಸಿ ಕಾನೂನು ಏನಿದೆ ಎಂಬುದನ್ನು ಪರಾಮರ್ಶಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕಾಶೆಂಪುರ್‌ ತಿಳಿಸಿದರು.
 
ಆಧುನಿಕತೆಗೆ ತಕ್ಕಂತೆ ವಸ್ತ್ರಗಳನ್ನು ವಿನ್ಯಾಸಗೊಳಿಸಬೇಕು. ನಾವು ಕೇವಲ ಹಳೇ ಕಾಲದ ಕಂಬಳಿ ನೇಯ್ದು ಕೊಂಡಿದ್ದರೆ ಸಾಲದು ಎಂದು ಕುರಿ ಉಣ್ಣೆ ಸಹಕಾರಿ ಸಂಘದ ಅಧಿಕಾರಿಗಳಿಗೆ ತಿಳಿಸಿದರು. ಸಹಕಾರ ಇಲಾಖೆ ಸಹಾಯಕ ನಿಬಂಧಕರಾದ ಎನ್‌. ದಕ್ಷಿಣಾಮೂರ್ತಿ, ಎಪಿಎಂಸಿ ಸಹಾಯಕ ನಿರ್ದೇಶಕಿ ಮಂಜುಳಾದೇವಿ, ಕೆಎಂಎಫ್‌ನ
ಗುರುಶೇಖರನ್‌ ಇದ್ದರು ಡಿಸಿಸಿ ಬ್ಯಾಂಕ್‌ ನೇಮಕಾತಿ ಹಗರಣ ತನಿಖೆಗೆ ಆದೇಶ ದಾವಣಗೆರೆ: ದಾವಣಗೆರೆಯ ಡಿಸಿಸಿ ಬ್ಯಾಂಕ್‌ನ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತುಮಕೂರು ಸಹಕಾರ ಇಲಾಖೆ ಉಪ ನಿಬಂಧಕರಿಂದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನ 31 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ವಿಚಾರ ಗಮನಕ್ಕೆ ಬಂದ ಕೂಡಲೇ ತನಿಖೆಗೆ ಸೂಚನೆ ನೀಡಲಾಗಿದೆ. 15 ದಿನಗಳಲ್ಲಿ ವರದಿ ಕೈ ಸೇರಲಿದೆ. ಯಾರೇ ತಪ್ಪು ಮಾಡಿದ್ದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ನೇಮಕಾತಿ ಆದೇಶ ನೀಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿಗೆ ಆದೇಶಿಸಲಾಗಿತ್ತು. ಯಾವುದೇ ಕಾರಣಕ್ಕೂ ಅಕ್ರಮ, ಹಗರಣ ನಡೆದಿದ್ದರೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಅಕ್ರಮ ನಡೆಸಿದವರ ಬೆನ್ನತ್ತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಕಚೇರಿಯಲ್ಲೇ ಕೆಲವರು ಗುಂಡು, ತುಂಡು ಪಾರ್ಟಿ ನಡೆಸಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next