Advertisement

ಮೌಲ್ಯಗಳಿಗೆ ಬದ್ಧರಾಗಿ ಬದುಕುವುದೂ ಒಂದು ಸಾಧನೆ

11:55 PM Nov 23, 2022 | Team Udayavani |

ಸರಕಾರವು ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಇಂದು ಸರಕಾರವೇ ಹುಡುಕಿ ಪ್ರಶಸ್ತಿಯನ್ನು ನೀಡುತ್ತಿದೆ. ಹಾಗಾಗಿ ಅರ್ಜಿ ಸಲ್ಲಿಸದವರಿಗೂ ಪ್ರಶಸ್ತಿ ಒಲಿಯುತ್ತಿದೆ. ಯಾವುದೋ ಹಳ್ಳಿಯ ಮೂಲೆಯಲ್ಲಿ ಕುಳಿತು ಪ್ರಶಸ್ತಿಯ ಬಗ್ಗೆ ಒಂದಿಷ್ಟೂ ನಿರೀಕ್ಷೆಯಲ್ಲಿಲ್ಲದ ಮಂದಿಗೆ ಪ್ರಶಸ್ತಿಯು ಒಲಿದು ಬಂದಾಗ ಅವರಿಗಾಗುವ ಆನಂದ ಊಹಿಸಲೂ ಅಸಾಧ್ಯ. ಈ ಗೌರವಗಳ ಮೂಲಕ ವಿವಿಧ ಕ್ಷೇತ್ರಗಳು ಶ್ರೀಮಂತವಾಗುವು ದರೊಂದಿಗೆ ಸಾಂಸ್ಕೃತಿಕವಾಗಿಯೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ.

Advertisement

ಆದರೆ ಇಂದು ಸಮಾಜದ ಮುಂದಿರುವ ದೊಡ್ಡ ಸವಾಲು ನೈತಿಕ ಮೌಲ್ಯಗಳ ಕುಸಿತ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಪರಾಧದ ಸುದ್ದಿಗಳು ಸಮಾಜದ ನಿದ್ರೆ ಕೆಡಿಸುತ್ತಿವೆ. ಇಂಥ ಅಪರಾಧಗಳನ್ನು ಮಟ್ಟಹಾಕಲು ಎಲ್ಲ ಪ್ರಯತ್ನಗಳನ್ನೂ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಮಾಡುತ್ತಿವೆ. ಇಲಾಖೆಗಳ ಈ ಪ್ರಯತ್ನಗಳ ನಡುವೆ ಅಪರಾಧಗಳನ್ನು ಕಡಿಮೆ ಮಾಡುವ ಮನೋ ಭಾವವನ್ನು ಸಮಾಜದಲ್ಲಿ ಮೂಡಿಸಲು ಸಾಧ್ಯವೇ? ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳ ಮೂಲಕ ಈ ಪ್ರಯತ್ನ ಗಳನ್ನು ಒಂದು ಹಂತದಲ್ಲಿ ಮಾಡಬಹುದು. ಇದರೊಂದಿಗೆ ತಮ್ಮ ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದವರನ್ನು ಗುರುತಿಸಿ ಗೌರವಿಸುವುದರ ಮೂಲಕವೂ ಈ ನಿಟ್ಟಿನಲ್ಲಿ ಚಿಕ್ಕ ಪ್ರಯತ್ನ ಮಾಡಬಹುದಲ್ಲವೇ?
ಮೌಲ್ಯಗಳು ಕುಸಿಯುತ್ತಿವೆ ಎಂಬ ಕೂಗಿನ ನಡುವೆಯೂ ಕೆಲವು ಮಂದಿ ಈ ಮೌಲ್ಯಗಳಿಗೆ ಬದ್ಧರಾಗಿ ಬದುಕುತ್ತಿದ್ದಾರೆ. ಆದರೆ ಅವರು ಯಾರ ಕಣ್ಣಿಗೂ ಬೀಳುವುದಿಲ್ಲ. ಪ್ರಚಾರ, ಸಮ್ಮಾನಗಳ ಬಯಕೆ ಅವರಿಗಿಲ್ಲ. ತಮ್ಮ ನಡತೆಯ ಮೂಲಕ ಊರಿನ ಜನರ ಪ್ರಶಂಸೆಗೂ ಪಾತ್ರರಾಗುತ್ತಿದ್ದಾರೆ.

ಊರವರ ದೃಷ್ಟಿಯಲ್ಲಿ ಇಂಥ ಕೆಲವರು ಹರಿಶ್ಚಂದ್ರ, ಧರ್ಮರಾಯ, ಬಂಗಾರದ ಮನುಷ್ಯ ಇತ್ಯಾದಿ. ಅವರಿಗೆ ಆ ಊರಿನಲ್ಲಿ ಅದೇ ಹೆಸರು. ಯಾರ ಹತ್ತಿರವೂ ನಿಷ್ಠುರವಿಲ್ಲ. ಅವರ ಕೆಲಸದಲ್ಲಿ ತೃಪ್ತರು. ಒಂದೇ ಒಂದು ಪ್ರಕರಣವೂ ಇವರ ವಿರುದ್ಧ ದಾಖಲಾಗಿರುವುದಿಲ್ಲ. ಅಷ್ಟು ಪರಿಶುದ್ಧ ವ್ಯಕ್ತಿತ್ವ. ಅವರು ಓದಿರಬಹುದು ಅಥವಾ ಓದದಿರಬಹುದು. ಬಡವರಿರಬಹುದು ಅಥವಾ ಶ್ರೀಮಂತರಿರಬಹುದು. ವರ್ಷಕ್ಕೊಮ್ಮೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವಂತೆ ಮೌಲ್ಯಾಧಾರಿತ ಜೀವನ ಕ್ಷೇತ್ರದಲ್ಲಿ ಇಂಥವರನ್ನೂ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಬೇಕು. ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ ಆದರ್ಶ ಬದುಕನ್ನು ಸಾಗಿಸಿದ್ದೇ ಇವರ ದೊಡ್ಡ ಸಾಧನೆ. ಮೊದಲು ಪ್ರತೀ ಗ್ರಾಮ ಮಟ್ಟದಲ್ಲಿ ಇಂಥವರನ್ನು ಗುರು ತಿಸುವ ಕೆಲಸವಾಗಬೇಕು. ಹೀಗೆ ಗ್ರಾಮೀಣ ಮಟ್ಟದಲ್ಲಿ ಆಯ್ಕೆಯಾದವರನ್ನು ಜಿಲ್ಲಾ ಮಟ್ಟದಲ್ಲಿ ಗಣ್ಯರ ಸಮ್ಮುಖ ದಲ್ಲಿ ಪ್ರಶಸ್ತಿಯನ್ನಿತ್ತು ಗೌರವಿಸಬೇಕು.

ಪ್ರಶಸ್ತಿ ಯಾರಿಗೇ ಒಲಿಯಲಿ. ಅದಕ್ಕಾಗಿ ಸ್ಪರ್ಧೆ ನಡೆದೇ ನಡೆಯುತ್ತದೆ. ಇದು ಸಹಜವೂ ಹೌದು. ನೈತಿಕ ಮೌಲ್ಯಗಳ ವಿಚಾರದಲ್ಲೂ ಇದೇ ವಿಧದ ಸ್ಪರ್ಧೆ ನಡೆದರೆ ಮೌಲ್ಯಗಳು ವೃದ್ಧಿಸಬಹುದಲ್ಲವೇ? ಎಂಥ ಕಠಿನ ಸಂದರ್ಭದಲ್ಲೂ ನೈತಿಕ ಮೌಲ್ಯಗಳನ್ನು ಬಲಿ ಕೊಡದ ಸಾಧಕರಿಗೆ ಈ ಪ್ರಶಸ್ತಿ ಸಂತೋಷದ ಸಂಗತಿಯಾಗುವುದಿಲ್ಲವೇ? ಇಂಥವರನ್ನು ಗುರುತಿಸಿ ಗೌರವಿಸುವುದು ಸಮಾಜದಲ್ಲಿ ಇತರರಿಗೂ ಪ್ರೇರಣೆಯಾಗಬಹುದಲ್ಲವೇ?

– ಡಾ| ಶ್ರೀಕಾಂತ್‌ ಸಿದ್ದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next