ಮುಂಬೈ: ಹೆಸರಾಂತ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ (Zakir Hussain) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಸೋಮವಾರ (ಡಿ.16) ಮುಂಜಾನೆ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.
ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಉಸ್ತಾದ್ ಜಾಕೀರ್ ಹುಸೇನ್ ಅವರು 12 ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.
ಜಾಕೀರ್ ಹುಸೇನ್ ಅವರು 1951ರ ಮಾರ್ಚ್ 9ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಅವರು ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರ. ಹುಸೇನ್ ಅವರು ತಂದೆಯ ಪರಂಪರೆಯನ್ನು ಮುಂದುವರೆಸಿದರು. ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾಗಿ ಕಾಣಿಸಿಕೊಂಡರು.
ಜಾಕೀರ್ ಹುಸೇನ್ ಅವರು ಏಳನೇ ವಯಸ್ಸಿನಲ್ಲಿ ತಬಲಾ ಕಲಿಯಲು ಪ್ರಾರಂಭಿಸಿದರು. 12 ರ ವಯಸ್ಸಿನ ಹೊತ್ತಿಗೆ ಭಾರತದಾದ್ಯಂತ ಪ್ರದರ್ಶನ ನೀಡಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಮಾಹಿಮ್ನ ಸೇಂಟ್ ಮೈಕೆಲ್ಸ್ ಹೈಸ್ಕೂಲ್ನಲ್ಲಿ ಪೂರ್ಣಗೊಳಿಸಿದರು. ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಪದವಿ ಪಡೆದರು.
ಅವರು ಕಥಕ್ ನೃತ್ಯಗಾರ್ತಿ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾದರು. ಜಾಕೀರ್ ಹುಸೇನ್ ಅವರಿಗೆ ಅನಿಸಾ ಮತ್ತು ಇಸಾಬೆಲ್ಲಾ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹುಸೇನ್ ಅವರು ಸಾಜ್ ಮತ್ತು ಮಂಕಿ ಮ್ಯಾನ್ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಆರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಹುಸೇನ್ ಅವರು ಹಲವಾರು ಹೆಸರಾಂತ ಅಂತಾರಾಷ್ಟ್ರೀಯ ಮತ್ತು ಭಾರತೀಯ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಇಂಗ್ಲಿಷ್ ಗಿಟಾರ್ ವಾದಕ ಜಾನ್ ಮೆಕ್ಲಾಫ್ಲಿನ್, ಪಿಟೀಲು ವಾದಕ ಎಲ್ ಶಂಕರ್ ಮತ್ತು ತಾಳವಾದ್ಯ ವಾದಕ ಟಿಎಚ್ ‘ವಿಕ್ಕು’ ವಿನಾಯಕ್ ಅವರೊಂದಿಗೆ 1973 ರ ಸಂಗೀತ ಯೋಜನೆಯು ಇದುವರೆಗೆ ತಿಳಿದಿಲ್ಲದ ಸಮ್ಮಿಳನದಲ್ಲಿ ಭಾರತೀಯ ಶಾಸ್ತ್ರೀಯ ಮತ್ತು ಜಾಝ್ನ ಅಂಶಗಳನ್ನು ಒಟ್ಟುಗೂಡಿಸಿತು.
ಪಾಶ್ಚಿಮಾತ್ಯ ಸಂಗೀತಗಾರರಾದ ಯೋ-ಯೋ ಮಾ, ಚಾರ್ಲ್ಸ್ ಲಾಯ್ಡ್, ಬೆಲಾ ಫ್ಲೆಕ್, ಎಡ್ಗರ್ ಮೆಯೆರ್, ಮಿಕ್ಕಿ ಹಾರ್ಟ್ ಮತ್ತು ಜಾರ್ಜ್ ಹ್ಯಾರಿಸನ್ ಅವರೊಂದಿಗಿನ ಜಾಕೀರ್ ಹುಸೇನ್ ಅವರ ಅದ್ಭುತ ಕೆಲಸವು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಪರಿಚಯಿಸಿತು. ಈ ಎಲ್ಲಾ ಕೆಲಸಗಳು ಜಾಗತಿಕ ಸಾಂಸ್ಕೃತಿಕ ರಾಯಭಾರಿಯಾಗಿ ಅವರ ಸ್ಥಾನಮಾನವನ್ನು ಭದ್ರಪಡಿಸಿತು.
ಜಾಕೀರ್ ಹುಸೇನ್ ಅವರು ತನ್ನ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಅವರು 12 ಚಲನಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.
1 ಮಿಲಿಯನ್ ಯುಎಸ್ ಡಾಲರ್ (ಸುಮಾರು 84,800,000 ರೂ) ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದರು. ಚೊಚ್ಚಲ ಸಾಗರೋತ್ತರ ಸಂಗೀತ ಕಚೇರಿಗೆ ಕೇವಲ 5 ರೂಗಳನ್ನು ಪಡೆದಿದ್ದ ಅವರು ಮುಂದೆ ಪ್ರತಿ ಸಂಗೀತ ಕಚೇರಿಗೆ 5-10 ಲಕ್ಷ ರೂ. ಪಡೆಯುತ್ತಿದ್ದರು ಎಂದು ವರದಿಯಾಗಿದೆ.
ಅವರು 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.