Advertisement
ಹೌದು, ಪಶುಭಾಗ್ಯ ಯೋಜನೆಯಡಿ 2019-20ನೇ ಸಾಲಿಗೆ ಜಿಲ್ಲೆಗೆ 220 ಜನರನ್ನು ಆಯ್ಕೆ ಗುರಿ ನೀಡಿದ್ದು, ಜಿಲ್ಲೆಯ ಆರು ತಾಲೂಕುಗಳಿಂದ ಯೋಜನೆಯಡಿ ಪಶುಭಾಗ್ಯಕ್ಕಾಗಿ 3,349 ಅರ್ಜಿ ಬಂದಿದ್ದು, ಬೇಡಿಕೆಗೆ ತಕ್ಕಂತೆ ಜಿಲ್ಲೆಗೆ ಭೌತಿಕ ಗುರಿ ನಿಗದಿಯಾಗದಿರುವುದು ಹೈನೋದ್ಯಮದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವವರ ಆಸೆಗೆ ತಣ್ಣೀರು ಎರಚಿದಂತಾಗಿದೆ.
Related Articles
Advertisement
ಆಯ್ಕೆ ಮಾಡಲು ಶಾಸಕರಿಗೆ ಪ್ರಾಣಸಂಕಟ: ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಒಂದೆರೆಡು ತಾಲೂಕು ಹೊರತುಪಡಿಸಿ 50ಕ್ಕಿಂತ ಕಡಿಮೆ ಗುರಿ ನೀಡಿರುವುದರಿಂದ ಫಲಾನುಭವಿಗಳ ಆಯ್ಕೆ ಮಾಡುವುದು ಆಯಾ ಕ್ಷೇತ್ರಗಳ ಶಾಸಕರಿಗೆ ಪ್ರಾಣ ಸಂಕಟವಾಗಿದೆ. ಗ್ರಾಮೀಣ ಭಾಗದ ರೈತಾಪಿ ಕೂಲಿ ಕಾರ್ಮಿಕರಿಂದ ಪಶುಭಾಗ್ಯ ಯೋಜನೆಯಡಿ ಸಾಕಷ್ಟು ಬೇಡಿಕೆ ಇದ್ದು ಸರ್ಕಾರ ಯೋಜನೆಯಡಿ ನಿಗದಿಪಡಿಸುವ ಗುರಿ ಅರ್ಹರನ್ನು ಗುರುತಿಸಲಾಗದೇ ಯೋಜನೆಗೆ ಪಟ್ಟಿಯಿಂದ ಯಾರನ್ನು ಕೈ ಬಿಡಲಾಗದೇ ಪ್ರಾಣ ಸಂಕಟ ಎದುರಿಸುವಂತಾಗಿದೆ. ತಾಲೂಕಿಗೆ ನೀಡಿರುವ 30, 40 ಗುರಿಗೆ ಕೆಲ ತಾಲೂಕುಗಳಲ್ಲಿ 300 ರಿಂದ 500, 600 ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದು ಫಲಾನುಭವಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಶಾಸಕರಿಗೆ ತಲೆ ನೋವಾಗಿದೆ.
ಘಟಕಕ್ಕೆ 60 ಸಾವಿರ: ಈ ಹಿಂದೆ ಪಶುಭಾಗ್ಯ ಯೋಜನೆಯಡಿ ಎರಡು ಹಸು ಖರೀದಿಗೆ ಪ್ರತಿ ಫಲಾನುಭವಿಗೆ 1.20 ಲಕ್ಷ ರೂ. ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಘಟಕ ವೆಚ್ಚವನ್ನು 60 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಶೇ.90 ರಷ್ಟು ಸಬ್ಸಿಡಿ ಸಿಗಲಿದೆ. ಹಿಂದುಳಿದ ವರ್ಗಕ್ಕೆ ಶೇ.50 ರಷ್ಟು ಸಬ್ಸಿಡಿ ಸಿಗಲಿದೆ.
ಸಾಮಾನ್ಯ ವರ್ಗಕ್ಕೂ ಪಶು ಭಾಗ್ಯ ಯೋಜನೆ ಕಲ್ಪಿಸಲಾಗಿದ್ದು, ಸಬ್ಸಿಡಿ ದರ ಕಡಿಮೆ ಇದೆ. ಜೊತೆಗೆ ಪಶುಭಾಗ್ಯ ಯೋಜನೆಯಡಿ ಹಸುಗಳ ಜೊತೆಗೆ ಕುರಿ, ಮೇಲೆ ಹಾಗೂ ಹಂದಿ ಖರೀದಿಗೂ ಅವಕಾಶ ನೀಡಲಾಗಿದೆ. ಆದರೆ ಭೌತಿಕ ಗುರಿ ಜಿಲ್ಲೆಗೆ ತೀರಾ ಕಡಿಮೆ ಇರುವುದರಿಂದ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿ ಇರುವ ರೈತರ ಕನಸಿಗೆ ಭಂಗವಾಗಿದೆ. ಜಿಲ್ಲೆಗೆ ಹೆಚ್ಚಿನ ಭೌತಿಕ ಗುರಿ ತರುವಲ್ಲಿ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ವಿಫಲರಾಗಿರುವುದು ಎದ್ದು ಕಾಣುತ್ತಿದೆ.
ಗುಡಿಬಂಡೆ, ಬಾಗೇಪಲ್ಲಿಯಲ್ಲಿ ಪಶುಭಾಗ್ಯ ಆಯ್ಕೆ ಪಟ್ಟಿಗೆ ಗ್ರಹಣ: ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆಯಡಿ ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಪಶುಭಾಗ್ಯ ಯೋಜನೆಯಡಿ ಆಯಾ ಕ್ಷೇತ್ರಗಳ ಶಾಸಕರು ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಪಶು ಸಂಗೋಪಾನ ಇಲಾಖೆಗೆ ಸಲ್ಲಿಸಿದ್ದು, ಫಲಾನುಭವಿಗಳಿಗೆ ಹಣಕಾಸಿನ ಲಭ್ಯತೆ ನೋಡಿಕೊಂಡು ಹಸುಗಳ ಖರೀದಿ ಪ್ರಗತಿಯಲ್ಲಿದೆ.
ಆದರೆ ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕಿಗೆ ನೀಡಿರುವ ಭೌತಿಕ ಗುರಿ ಅತ್ಯಂತ ಕಡಿಮೆ ಎಂದು ಹೇಳಿ ಕ್ಷೇತ್ರದ ಶಾಸಕ ಸುಬ್ಟಾರೆಡ್ಡಿ, ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಮಾಡದಿರುವುದು ಕಂಡು ಬಂದಿದೆ. ಗುಡಿಬಂಡೆಗೆ 9, ಬಾಗೇಪಲ್ಲಿಗೆ ಕೇವಲ 35 ಗುರಿ ನಿಗದಿಪಡಿಸಿದ್ದು, ಈ ಎರಡು ತಾಲೂಕುಗಳಲ್ಲಿ 500 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಆದರೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲದಿಂದ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕ್ಷೇತ್ರಕ್ಕೆ ಮಂಜೂರಾಗಿರುವ ಗುರಿಯನ್ನು ಕೈ ಬಿಟ್ಟಿದ್ದಾರೆ. ಹೀಗಾಗಿ ಎರಡು ತಾಲೂಕುಗಳಲ್ಲಿ ಪಶು ಭಾಗ್ಯ ಯೋಜನೆ ಆಯ್ಕೆ ಪಟ್ಟಿಗೆ ಗ್ರಹಣ ಹಿಡಿದಿದ್ದು, ಭೌತಿಕ ಗುರಿ ಹೆಚ್ಚಿಸುವಂತೆ ಸªಳೀಯ ಶಾಸಕರು ಪಶು ಸಂಗೋಪನಾ ಇಲಾಖೆ ಆಯುಕ್ತರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜಿಲ್ಲೆಯಲ್ಲಿ ಕುಸಿಯುತ್ತಿದೆ ಹಾಲು ಉತ್ಪಾದನೆ: ಬರಡು ಜಿಲ್ಲೆಯಾದರೂ ಕ್ಷೀರಕ್ರಾಂತಿಗೆ ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಾಲಿನ ಉತ್ಪಾದನೆ ಕುಸಿಯುತ್ತಿದೆ. ಒಂದೆಡೆ ಬರದಿಂದ ಹೈನೋದ್ಯಮ ತತ್ತರಿಸಿದರೆ, ಮತ್ತೂಂದೆಡೆ ಪಶು ಸಂಗೋಪಾನೆಯಲ್ಲಿ ತೊಡಗುತ್ತಿರುವ ರೈತರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ.
ಯಾವುದೇ ಶಾಶ್ವತ ನೀರಾವರಿ ಇಲ್ಲದ ಜಿಲ್ಲೆಯ ರೈತರಿಗೆ ಸ್ವಾವಲಂಬಿ ಜೀವನಕ್ಕೆ ಹೈನೋದ್ಯಮ ಸಹಕಾರಿಯಾದರೂ ಪಶು ಸಂಗೋಪನೆಗೆ ಸರ್ಕಾರದ ಪ್ರೋತ್ಸಾಹ ಅಷ್ಟಕಷ್ಟೇ ಎನ್ನುವುದಕ್ಕೆ ಪಶು ಸಂಗೋಪನೆಯಡಿ ಜಿಲ್ಲೆಗೆ ನಿಗದಿಪಡಿಸಿರುವ ಭೌತಿಕ ಗುರಿ ಸಾಕ್ಷಿ ಎನ್ನಬಹುದು.
ತಾಲೂಕು ಪಶುಭಾಗ್ಯ ಗುರಿ ಅರ್ಜಿ ಸಲ್ಲಿಕೆಗೌರಿಬಿದನೂರು 52 650
ಚಿಕ್ಕಬಳ್ಳಾಪುರ 40 1380
ಗುಡಿಬಂಡೆ 9 137
ಬಾಗೇಪಲ್ಲಿ 35 382
ಶಿಡ್ಲಘಟ್ಟ 33 150
ಚಿಂತಾಮಣಿ 51 650 ಸರ್ಕಾರ ಹಿಂದುಳಿದ ತಾಲೂಕುಗಳಾದ ಗುಡಿಬಂಡೆ ಹಾಗೂ ಬಾಗೇಪಲ್ಲಿಗೆ ಪಶು ಭಾಗ್ಯ ಯೋಜನೆಯಡಿ ಕಡಿಮೆ ಗುರಿ ನೀಡಿದ್ದು, ನೂರಾರು ಮಂದಿ ಅರ್ಜಿ ಹಾಕಿದ್ದಾರೆ. ಬೆರಣಿಕೆಯಷ್ಟು ಗುರಿ ಕೊಟ್ಟರೆ ನಾವು ಯಾರಿಗೆ ಹಸು ಕೊಡಲು ಸಾಧ್ಯ? ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆದು ಅಧಿವೇಶನದಲ್ಲಿಯು ಪ್ರಶ್ನೆ ಮಾಡಿದೆ. ಆದರೆ ಸರ್ಕಾರ ಅನುದಾನದ ಲಭ್ಯತೆ ನೋಡಿಕೊಂಡು ಕ್ರಮ ವಹಿಸುವ ಭರವಸೆ ನೀಡಿದೆ.
-ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು, ಬಾಗೇಪಲ್ಲಿ ಕ್ಷೇತ್ರ ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆಯಡಿ ಗುರಿಗಿಂತ ಹೆಚ್ಚಾಗಿ ಬೇಡಿಕೆ ಇದ್ದು, 2019-20ನೇ ಸಾಲಿಗೆ ಒಟ್ಟು 220 ಗುರಿಗೆ ಒಟ್ಟು 3,349 ಅರ್ಜಿಗಳು ಬಂದಿವೆ. ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಫಲಾನುಭವಿಗಳ ಆಯ್ಕೆ ಇನ್ನೂ ಆಗಿಲ್ಲ. ಉಳಿದಂತೆ ಎಲ್ಲಾ ತಾಲೂಕುಗಳಲ್ಲಿ ಆಯ್ಕೆ ಪ್ರಕ್ರಿಯೆ ಹಾಗೂ ಸೌಲಭ್ಯ ವಿತರಣೆ ಪ್ರಗತಿಯಲ್ಲಿದೆ ಇದೆ.
-ಡಾ.ಮಧುರನಾಥರೆಡ್ಡಿ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ * ಕಾಗತಿ ನಾಗರಾಜಪ್ಪ