Advertisement

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

04:41 PM Nov 28, 2024 | Team Udayavani |

ಕಲಬುರಗಿ: ಹೊಲದ ವ್ಯಾಜ್ಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಮನೆಗೆ ನುಗ್ಗಿ ಪೆಟ್ರೋಲ್ ಬಾಂಬ್ ಎಸದು ಕುಟುಂಬದವರ ಹತ್ಯೆಗೆ ಯತ್ನಿಸಿದ ಘಟನೆ ಗುರುವಾರ (ನ.28) ಬೆಳಿಗ್ಗೆ ನಡೆದಿದೆ.

Advertisement

ಶಿವಲಿಂಗಪ್ಪ ಕರಿಕಲ್ ಎಂಬಾತನಿಂದ ಹತ್ಯೆಗೆ ಯತ್ನ ನಡೆದಿದ್ದು, ಕಡಣಿ ಗ್ರಾಮದ ಗುಂಡೇರಾವ್ ಕರಿಕಲ್ ಎನ್ನುವವರ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹತ್ಯೆಗೆ ಯತ್ನ ನಡೆದಿದೆ.‌ ಪೆಟ್ರೋಲ್ ಬಾಂಬ್ ಮನೆಯಲ್ಲಿ ಎಸೆದು, ಬಳಿಕ ಕೀಟನಾಶಕದ ಸ್ಪ್ರೇಯರ್ ನಿಂದ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಕೊಟ್ಟು ಹತ್ಯೆಗೆ ಯತ್ನಿಸಲಾಗಿದೆ.‌

ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ಈ ನಡೆದಿದೆ. ‌ಮನೆಗೆ ಬೆಂಕಿ ತಗುಲಿದ್ದು ಭಾಗಶಃ ಮನೆ ಸುಟ್ಟು ಕರಕಲಾಗಿದೆ. ಹಲವರಿಗೆ ತೀವ್ರ ಗಾಯವಾಗಿದ್ದು ಜಿಮ್ಸ್ ಗೆ ದಾಖಲು ಮಾಡಲಾಗಿದೆ. ಮನೆಯಲ್ಲಿ ಸುಮಾರು 6-7 ಜನರಿದ್ದರು.‌ ಆದರೆ ಸಕಾಲಕ್ಕೆ ಮನೆ ಬಾಗಿಲು ಮುರಿದು ಗ್ರಾಮಸ್ಥರು ಕುಟುಂಬಸ್ಥರನ್ನು ರಕ್ಷಣೆ ಮಾಡಿದ್ದಾರೆ.‌ ಮನೆಯ ಒಂದು ಕಡೆ ಇರುವ ಶೆಟರ್ ಮುರಿದು ರಕ್ಷಿಸಲಾಗಿದೆ.

ಭಾರೀ ಬೆಂಕಿ ಆವರಿಸಿದ್ದರಿಂದ ಗುಂಡೆರಾವ್ ಕುಟುಂಬಸ್ಥರು ಅಸ್ವಸ್ಥರಾಗಿದ್ದಾರೆ.‌ ಮನೆ ಮಾಲೀಕ ಗುಂಡೆರಾವ್ , ಪತ್ನಿ ಸರುಬಾಯಿ, ಸೊಸೆ ಮುಕ್ತಾಬಾಯಿ, ಮೂರು ವರ್ಷದ ಮೊಮ್ಮಗಳು ಲಕ್ಷ್ಮೀ , ಒಂದು ವರ್ಷದ ನಂದೀತಾಗೆ ತೀವ್ರ ಗಾಯವಾಗಿವೆ.

Advertisement

ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ವಿಚಾರಣೆ ನಿಗದಿ: ಗುಂಡೇರಾವ್ ಕರೆಕಲ್ ಅವರು ಐದು ವರ್ಷಗಳ ಹಿಂದೆ ಶಿವ ಲಿಂಗಪ್ಪ ಅವರ ಹೊಲ ಖರೀದಿಗಾಗಿ 13 ಲಕ್ಷ ರೂ ನೀಡಿದ್ದರು. ಆದರೆ ಶಿವ ಲಿಂಗಪ್ಪ ಹೊಲ ರಿಜಿಸ್ಟ್ರಾರ್ ಸಹ ಮಾಡಿಕೊಡುತ್ತಿಲ್ಲ. ಮತ್ತೊಂದೆಡೆ ಮುಂಗಡವಾಗಿ ನೀಡಲಾದ ಹಣ ಸಹ ವಾಪಸ್ಸು ಕೊಡುತ್ತಿಲ್ಲವೆಂದು ಗುಂಡೇರಾವ್ ಕರೆಕಲ್ ಅವರು ಫರಹತಾಬಾದ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ನ.‌28 ರಂದು ಠಾಣೆಯಲ್ಲಿ ವಿಚಾರಣೆ ನಿಗದಿ‌ ಮಾಡಲಾಗಿತ್ತು. ಹಣ ನೀಡಿರುವ ಬಗ್ಗೆ ಕೆಲವರು ಸಾಕ್ಷ್ಯ ಸಹ ಹೇಳುವವರಿದ್ದರು. ಆದರೆ ಠಾಣೆಗೆ ಹೋಗಬಾರದು ಎಂಬ ದೃಷ್ಟಿ ಹಿನ್ನೆಲೆಯಲ್ಲಿ ಶಿವ ಲಿಂಗಪ್ಪ ಕರೆಕಲ್ ಪೆಟ್ರೋಲ್ ಬಾಂಬ್ ಎಸಗಿ ದುಷ್ಕೃತ್ಯ ಎಸಗಿದ್ದಾನೆ.

ಆಯುಕ್ತರ ಭೇಟಿ: ಘಟನೆ ನಂತರ ಕಡಣಿ ಗ್ರಾಮಕ್ಕೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಪರಾರಿಯಾಗಿದ್ದು, ಬಂಧನಕ್ಕೆ ಜಾಲ‌ ಬೀಸಲಾಗಿದೆ. ಕುಟುಂಬದವರಿಗೆ ರಕ್ಷಣೆ ಜತೆಗೆ ಜಮೀನು ವ್ಯಾಜ್ಯ ತಾರ್ಕಿಕ ಅಂತ್ಯಕ್ಕೆ ಮುಂದಾಗಲಾಗುವುದು ಎಂದು ಪೊಲೀಸ್ ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next