ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಬಹುತ್ವ ಕಾಪಾಡುವ ಸತ್ವಯುತ ಸಾಹಿತ್ಯ ಬಹುಮುಖ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಿದ್ಯಾ ಟ್ರಸ್ಟ್ ವತಿಯಿಂದ ಕೆಆರ್‌ಜಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಪ್ರೊ.ವಿ.ಕೃ.ಗೋಕಾಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ನವ್ಯ ಸಾಹಿತ್ಯಕ್ಕೆ ನಾಂದಿ ಹಾಡಿದ ವಿ.ಕೃ.ಗೋಕಾಕ್ ಅವರದ್ದು ಮೇರು ವ್ಯಕ್ತಿತ್ವ. ಕಾವ್ಯದ ಹುಟ್ಟನ್ನು ಬದಲಿಸುವ ರೀತಿಯಲ್ಲಿ ಸಮುದ್ರಗೀತೆಯನ್ನು ರಚಿಸಿದರು.
ವಾಸ್ತವ ರೀತಿಯಲ್ಲಿ ಸಮುದ್ರದ ತೆರೆಗಳ ಅಲೆಯನ್ನು ಕಟ್ಟಿಕೊಟ್ಟವರು. ಕಲಬುರಗಿ ಮತ್ತು ಶೆಟ್ಟರ್ ಅವರು ಜನಪರವಾಗಿ ನೋಡುವ ದೃಷ್ಟಿ ಇಟ್ಟುಕೊಂಡಂತಹ ಸಂಶೋಧಕರು. ಉದ್ವೇಗವಿಲ್ಲದ ಹಾಗೂ ಬಹುತ್ವವವನ್ನು ಕಾಪಾಡುವ ಸಾಹಿತ್ಯವನ್ನು ಕಟ್ಟಿಕೊಟ್ಟವರು ಶೆಟ್ಟರ್. ಇವರ ಕರ್ತವ್ಯಪ್ರಜ್ಞೆ ಮತ್ತು ಪ್ರಾಮಾಣಿಕತೆಗೆ ಗೋಕಾಕ್ ಅವರ ಪ್ರಶಸ್ತಿ ಲಭಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಷಾ ಶಾಸ್ತ್ರಜ್ಞ ಡಾ.ಷ ಶೆಟ್ಟರ್, ಗೋಕಾಕ್ ಅವರು ವಿದ್ಯಾಕ್ಷೇತ್ರ, ಆಡಳಿತ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ದೊಡ್ಡ ಸಂಸ್ಥೆಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿದ್ದುಕೊಂಡು ಬೇರೆಯವರಿಗೆ ಪ್ರೋತ್ಸಾಹ ನೀಡಿದ ಇವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುವಂತಹುದು. ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಗ್ರಂಥ ಬರೆದು ಪ್ರಸಿದ್ಧಿಯಾಗಿದ್ದರು.
ತಮ್ಮ ನಿವೃತ್ತಿ ನಂತರವೂ ಅದನ್ನು ಮುಂದುವರೆಸಿದರು. ಸತ್ಯಯುತವಾದ ಸಾಹಿತ್ಯಕ್ಕೆ ಮರಣವಿಲ್ಲ. ಅಂತಹ ಸಾಹಿತ್ಯ ಕೊಟ್ಟವರಿಗೂ ಮರಣವಿಲ್ಲ. ಮರಣವಿಲ್ಲದ ಸಾಹಿತ್ಯ ನೀಡಿದವರು ಗೋಕಾಕರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿನಾಯಕ ಗೋಕಾಕ್ ವಾಜ್ಮಯ ಟ್ರಸ್ಟ್ ಅಧ್ಯಕ್ಷ ವೈ.ಎನ್ ಗಂಗಾಧರ ಸೆಟ್ಟಿ, ಅನಿಲ್‌ಗೋಕಾಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.