Advertisement

ಸಾಹಿತ್ಯ ಲೆಕ್ಕದ ಬುಕ್ಕಲ್ಲ, ಸಂಸ್ಕೃತಿ ಶ್ರೇಷ್ಠತೆಯ ಸೊಕ್ಕಲ್ಲ

12:40 AM Jan 19, 2019 | |

ಧಾರವಾಡ: “ಜನರ ಬದುಕುವ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವ ಸಾಮಾಜಿಕ, ರಾಜಕೀಯ ಪ್ರಜ್ಞೆ ನಮ್ಮದಾಗಬೇಕು. ಅದೇ ಸಾಮಾಜಿಕ ಸಂಭ್ರಮ, ರಾಜಕೀಯ ಸಂಭ್ರಮ, ಸಾಹಿತ್ಯ ಸಂಭ್ರಮ’ ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

Advertisement

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ,ಕರ್ನಾಟಕ ವಿಶ್ವವಿದ್ಯಾಲಯ, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಸಹಯೋಗದಲ್ಲಿ ಶುಕ್ರವಾರದಿಂದ 3 ದಿನ ಧಾರವಾಡ ಸಾಹಿತ್ಯ ಸಂಭ್ರಮ-2019ಕ್ಕೆ ಚಾಲನೆ ನೀಡಿ ಆಶಯ ಭಾಷಣ ಮಾಡಿ, “ನಾವು ಅಪವ್ಯಾಖ್ಯಾನಗಳನ್ನು ಅಳಿಸಬೇಕು. ಜನಗಳು ಬದುಕುವ ಸ್ವಾತಂತ್ರÂ ನಮ್ಮ ಆಯ್ಕೆಯಾಗಬೇಕು’ ಎಂದರು.

ಮಾನವೀಯತೆಯು ಸಾರ್ವಕಾಲಿಕ ಮೌಲ್ಯವಾಗಿದ್ದರಿಂದ ದೂರವನ್ನು ಸಮೀಪ ಮಾಡುವ ಆಶಯವಿಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ. ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿ ಮನುಷ್ಯರೇ ಆದಲ್ಲಿ, ಜನರಿಗೆ ಸಮೀಪವಾಗಬೇಕು. ಜನರಿಗೆ ಜವಾಬ್ದಾರರಾಗಬೇಕು. ಸಂಭ್ರಮ ದೊಂದಿಗೆ ಸಂಕಟವೂ ಗೊತ್ತಾಗಬೇಕು. ಬದುಕು ವೈರುಧ್ಯಗಳ ಮೊತ್ತವಾಗಿದ್ದು, ಅದೇ ವಾಸ್ತವ. ನಮ್ಮ ನಾಡು ತುಂಬಿ ಹರಿವ ನದಿಗಳಿರುವ ಕರಾವಳಿಯೂ ಹೌದು, ಬತ್ತಿದ ಕೆರೆಗಳ ನಾಡೂ ಹೌದು. ಇದು ಕೋಗಿಲೆಗಳ ನಾಡು ಹೌದು, ಕಾಗೆಗಳ ನಾಡೂ ಹೌದು ಎಂದರು. ಸಾಹಿತ್ಯದ ಶ್ರೇಷ್ಠತೆಯು ಒಂದು ಶೋಧವೇ ಹೊರತು, ಮೋಕ್ಷ ಸ್ಥಿತಿಯಲ್ಲ. ಆದ್ದರಿಂದ ಹುಸಿ ಶ್ರೇಷ್ಠತೆ ಮತ್ತು ಹುಸಿ ಶುದ್ಧತೆಗಳಿಂದ ವಿಮೋಚನೆಗೊಂಡ ಮನಸು ಮಾತ್ರ ಮನುಷ್ಯತ್ವದ ಮೂಲ ಬೇರುಗಳನ್ನು ಬಲಗೊಳಿಸುತ್ತದೆ. ಮನುಷ್ಯತ್ವದ ಪ್ರಜ್ಞೆಯೇ ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯಾಗಬೇಕು.ಸಾಹಿತ್ಯ ಲೆಕ್ಕದ ಬುಕ್ಕಲ್ಲ, ಸಂಸ್ಕೃತಿ ಶ್ರೇಷ್ಠತೆಯ ಸೊಕ್ಕಲ್ಲ. ಇಲ್ಲಿ ಮೇಲು ಕೀಳುಗಳ ಮಾರಣ ಹೋಮಕ್ಕೆ ಅವಕಾಶವಿಲ್ಲ. ಆದ್ದರಿಂದ ಸಾಹಿತ್ಯ ಮತ್ತು ಸಂಸ್ಕೃತಿಗಳು ಸಮಾನತೆ, ಸೌಹಾರ್ದತೆಗಳ ಜೀವಶಕ್ತಿ ಒಳಗೊಳ್ಳಬೇಕು ಎಂದರು. ರಾಘವೇಂದ್ರ ಪಾಟೀಲ, ಸರೋಜಾ ಗಿರಡ್ಡಿ, ಉಮಾದೇವಿ ಕಲಬುರ್ಗಿ, ರಮಾಕಾಂತ ಜೋಶಿ ಇದ್ದರು.

ಕಲಬುರ್ಗಿ ಮರೆತ ಸರ್ಕಾರ ಕುರ್ಚಿ ಗಲಾಟೆ ಕಡಿಮೆಯಾದ ಮೇಲಾದರೂ ರಾಜಕಾರಣಿಗಳು ಡಾ|ಎಂ.ಎಂ.ಕಲಬುರ್ಗಿ ಅವರ ಹತ್ಯೆ ಮಾಡಿದವರನ್ನು ಪತ್ತೆ ಮಾಡಬೇಕು. ಸದ್ಯಕ್ಕೆ ರಾಜಕಾರಣಿಗಳು ಅಧಿ ಕಾರ ಉಳಿಸಿಕೊಳ್ಳುವಲ್ಲಿ ನಿರತ ರಾಗಿದ್ದಾರೆ. ಡಾ|ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾಗಿ 4 ವರ್ಷಗಳು ಗತಿಸಿದರೂ ಆರೋಪಿ ಗಳನ್ನು ಪತ್ತೆ ಮಾಡುವಲ್ಲಿ ನಿರ್ಲಕ್ಷé ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕಿದೆ ಎಂದು ಬರಗೂರು ಹೇಳಿದರು.

ಶಬರಿಮಲೆಯಲ್ಲಿ ಮಹಿಳೆ ಯರಿಗೆ ಪ್ರವೇಶ ನೀಡದಂತೆ ತಡೆಯವುದು ಸಾಮಾಜಿಕ ಹಿಂಸೆಯ ಫಲವಾಗಿದೆ. ಅಯ್ಯಪ್ಪನ ಸನ್ನಿಧಾನದಲ್ಲಿ ಈಗ ಭಕ್ತಿ ಇಲ್ಲ, ಕೇವಲ ರಾಜಕೀಯ ಶಕ್ತಿ ಇದೆ.
● ಬರಗೂರು ರಾಮಚಂದ್ರಪ್ಪ,ಸಾಹಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next