Advertisement

ಚಾಮರಾಜ ಕ್ಷೇತ್ರದ ಸಮಸ್ಯೆ ಪಟ್ಟಿ ಮಾಡಿ

09:12 PM Aug 10, 2019 | Lakshmi GovindaRaj |

ಮೈಸೂರು: ಭಾರೀ ಮಳೆಯಿಂದಾಗಿ ಮೈಸೂರಿನ ಸರಸ್ವತಿಪುರಂನ ಅಗ್ನಿಶಾಮಕ ದಳದ ಕಚೇರಿಯಿರುವ 122 ವರ್ಷಗಳ ಪಾರಂಪರಿಕ ಕಟ್ಟಡದ ಮುಂಭಾಗದ ಕಮಾನು ಪ್ರವೇಶ ದ್ವಾರ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ, ಇಡೀ ಕಟ್ಟಡ ಕುಸಿದು ಬೀಳುವ ಆತಂಕವಿದೆ ಎಂದು ಶಾಸಕ ಎಲ್‌.ನಾಗೇಂದ್ರ ಹೇಳಿದರು.

Advertisement

ಘಟನೆ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇಡೀ ಕಟ್ಟಡ ಕುಸಿದು ಬಿದ್ದು ಅನಾಹುತ ಸಂಭವಿಸುವ ಮುನ್ನ, ಕಟ್ಟಡವನ್ನು ಸಂಪೂರ್ಣ ಕೆಡವಿ ಮೂಲ ಮಾದರಿಯಲ್ಲೇ ಮರು ನಿರ್ಮಾಣ ಮಾಡಿ, ಅಲ್ಲಿನ ಕ್ವಾಟ್ರರ್ಸ್‌ಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ನಗರದ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಬಿಲ್ಡಿಂಗ್‌ ಕಟ್ಟಡಗಳು ಕುಸಿದು ಬಿದ್ದಿವೆ. ಆ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವುದಿಲ್ಲ. ಅಲ್ಲಿ ನಿರ್ಮಾಣ ಕಾರ್ಯಗಳೂ ನಡೆಯುತ್ತಿಲ್ಲ. ಚಿಕ್ಕ ಮಾರುಕಟ್ಟೆ ಕೆಡವಿ ಪುನರ್‌ ನಿರ್ಮಾಣ ಮಾಡುವುದಕ್ಕೂ ವಿರೋಧ ವ್ಯಕ್ತವಾಗುತ್ತದೆ ಎಂದು ಪಾರಂಪರಿಕ ಸಮಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳ ಹಿಂದೆಯೇ ಕಮಾನು ದ್ವಾರ ಕುಸಿಯುವ ಭೀತಿಯಿದ್ದರೂ ದುರಸ್ತಿ ಪಡಿಸದ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಹತ್ತು ದಿನಗಳೊಳಗೆ ಶಿಥಿಲ ಕಟ್ಟಡಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದಲ್ಲಿರುವ ಸುಮಾರು 120 ವರ್ಷಗಳ ಹಳೆಯ ಕಟ್ಟಡಗಳನ್ನು ಕೆಡವಿ ಪುನರ್‌ ನಿರ್ಮಿಸಬೇಕಿದೆ. ಇಲ್ಲವಾದಲ್ಲಿ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ.

ಈ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಒಳ ಚರಂಡಿ ಸಮಸ್ಯೆ ತಲೆದೋರಿದ್ದು, ಮಳೆ ನೀರು ಚರಂಡಿಗಳಲ್ಲಿ ಒಳ ಚರಂಡಿ ನೀರು ಹೋಗುತ್ತಿದೆ. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಈ ಸಮಸ್ಯೆಯನ್ನು ಹೋಗಲಾಡಿಸಿ ಎಂದು ತಾಕೀತು ಮಾಡಿದರು.

Advertisement

ಬಂಬೂಬಜಾರ್‌ ಮನೆಗಳು, ಶಾಂತಲಾ ಟಾಕೀಸ್‌ ಹಿಂಭಾಗದ ಬಡಾವಣೆಯಲ್ಲಿ ಬಹಳ ಸಮಸ್ಯೆ ಇದೆ. ಬಿ.ಬಿ.ಲಾಯ ಪ್ರದೇಶದಲ್ಲಿ ಮಳೆ ನೀರು ಮತ್ತು ಒಳ ಚರಂಡಿ ನೀರು ಮಿಶ್ರವಾಗಿ ಹೋಗುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಹೋಗಲಾಡಿಸಿ ಎಂದರು. ನಗರದಲ್ಲಿ 200 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿದೆ. ಈ ಕಟ್ಟಡಗಳಿಗೆ ನಿತ್ಯ ಭೇಟಿ ನೀಡಿ ಸಂರಕ್ಷಣೆ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

10 ದಿನ ಗಡುವು: ಮುಂದಿನ ಹತ್ತು ದಿನಗಳಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಸಮಸ್ಯೆಯನ್ನು ಪರಿಶೀಲಿಸಿ ವರದಿ ನೀಡುವಂತೆ ತಾಕೀತು ಮಾಡಿದ ಅವರು, 132 ಕಟ್ಟಡಗಳ ನ್ಯೂನತೆಯನ್ನು ಪರಿಶೀಲಿಸಿ ವರದಿ ನೀಡದಿದ್ದರೆ, ಮುಂದಾಗುವ ಅನಾಹುತಗಳಿಗೆ ನಿಮ್ಮನ್ನೇ ಹೊಣೆಗಾರರನ್ನಾಗಿಸುವುದಾಗಿ ಎಚ್ಚರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ಮುಡಾ ಆಯುಕ್ತ ಪಿ.ಎಸ್‌.ಕಾಂತರಾಜು ಸೇರಿದಂತೆ ನಗರಪಾಲಿಕೆ, ಮುಡಾ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಅಧಿಕಾರಿಗಳೇ ಹೊಣೆ: ನೆರೆಯಿಂದ ತೊಂದರೆಗೀಡಾಗಿರುವ ಪ್ರತಿ ಕಟ್ಟಡದವರಿಗೂ ನೋಟಿಸ್‌ ನೀಡಿ, ಅಲ್ಲಿನ ಲೋಪದೋಷಗಳ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ ಅವರು, ಕಟ್ಟಡಗಳ ಲೋಪದೋಷಗಳ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳನ್ನು ಮುಂದಿನ ಅನಾಹುತಗಳಿಗೆ ಅವರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಶಾಸಕ ನಾಗೇಂದ್ರ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next