ಮೈಸೂರು: ಕೆಮಿಕಲ್ ತ್ಯಾಜ್ಯಕ್ಕೆ ಬಾಲಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನಿಖೆ ಚುರುಕುಗೊಳಿಸಿದೆ. ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಘಟನಾ ಸ್ಥಳ ಶ್ಯಾದನಹಳ್ಳಿಗೆ ಶನಿವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಜೊತೆಗೆ ಘಟನಾ ಸ್ಥಳಕ್ಕೆ ಸಮೀಪದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕ, ಜೆ.ಕೆ.ಟೈರ್ ಕಾರ್ಖಾನೆ ಹಾಗೂ ಮೈಸೂರು ಪಾಲಿಮರ್ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಬಾಯ್ಲರುಗಳಿಂದ ಹೊರಬರುವ ತ್ಯಾಜ್ಯಗಳ ಮಾದರಿಯನ್ನು ಸಂಗ್ರಹಿಸಲಾಗಿದೆ.
ಜತೆಗೆ ಘಟನಾ ಸ್ಥಳದಲ್ಲಿ ಇಂದಿಗೂ ಮಣ್ಣನ್ನು ಕೆದಕಿದರೆ ಹೊಗೆ ಬರುತ್ತಿರುವುದರಿಂದ ಮಣ್ಣಿನಲ್ಲಿ ಮೀಥೇನ್ ಅಂಶ ಬೆರೆತಿದೆಯೇ ಎಂಬುದನ್ನು ಪತ್ತೆ ಮಾಡಲು ಅಲ್ಲಿನ ಮಣ್ಣಿನ ಮಾದರಿ ಯನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಜೊತೆಗೆ ಮೈಸೂರು ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಹಾರು ಬೂದಿ, ಕಲ್ಲಿದ್ದಲು ಬೂದಿ ಹೊರ ಹಾಕುವ ಎಷ್ಟು ಕಾರ್ಖಾನೆಗಳು ಮೈಸೂರಿನಲ್ಲಿವೆ ಎಂಬ ಪಟ್ಟಿ ಕೊಡಿ ಎಂದು ಕೇಳಲಾಗಿದೆ. ಮೃತ ಬಾಲಕ ಹರ್ಷಲ್ ಮನೆಗೆ ಭೇಟಿ ನೀಡಿದ್ದ ಲಕ್ಷ್ಮಣ್, ಬಾಲಕನ ತಾಯಿಗೆ ಸಾಂತ್ವನ ಹೇಳಿದರು.
ಈ ನಡುವೆ ಘಟನೆಗೆ ಯಾವ ರಾಸಾಯನಿಕ ತ್ಯಾಜ್ಯ ಕಾರಣ ಎಂಬುದನ್ನು ಪತ್ತೆಹಚ್ಚಲು ಮಂಡಳಿ ರಚಿಸಿರುವ 10 ಮಂದಿ ತಜ್ಞರ ತಂಡ ಸೋಮವಾರ ಮೈಸೂರಿಗೆ ಆಗಮಿಸಲಿದ್ದು, ಬೆಳಗ್ಗೆ 10.30ಕ್ಕೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ. ನಂತರ ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಯ ವರದಿ ಬಂದ ನಂತರ ಸಮಿತಿ ಸಭೆ ಸೇರಿ ಮುಂದಿನ ಕ್ರಮ ಅನುಸರಿಸಲಿದೆ.